ADVERTISEMENT

ಪಡಿತರ ಚೀಟಿ ನೋಂದಣಿ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 9:35 IST
Last Updated 8 ಅಕ್ಟೋಬರ್ 2012, 9:35 IST

ಕುಷ್ಟಗಿ: ಭಾವಚಿತ್ರ ಸಹಿತ ಪಡಿತರ ಚೀಟಿ ಪಡೆಯುವುದಕ್ಕಾಗಿ ಆನ್‌ಲೈನ್‌ದಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಂದುವರೆದಿದ್ದು, ತಾಲ್ಲೂಕಿನ ಮುದೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಹಗಲು ರಾತ್ರಿ ಸಹ ದೂರದ ದೋಟಿಹಾಳ ಗ್ರಾಮದಲ್ಲಿ ಮನೆಯೊಂದರಲ್ಲಿರುವ ಕಂಪ್ಯೂಟರ್ ಕೇಂದ್ರದ ಬಳಿ ಠಿಕಾಣಿ ಹೂಡುತ್ತಿದ್ದಾರೆ.

ಆದರೆ ಬೋಗಸ್ ಫಲಾನುಭವಿಗಳು ನುಸುಳುವುದನ್ನು ತಡೆಯುವ ಉದ್ದೇಶದಿಂದ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಈ ಹೊಸ ವ್ಯವಸ್ಥೆ ಜಾರಿಗೆ ತಂದ್ದ್ದಿದು ಸರಿ, ಆದರೆ ಗ್ರಾಮಾಂತರ ಪ್ರದೇಶದಲ್ಲಿ ಅದಕ್ಕೆ ತಕ್ಕಂತೆ ದೂರವಾಣಿ ಮತ್ತು ಅಗತ್ಯ ತಾಂತ್ರಿಕ ವ್ಯವಸ್ಥೆ ಇಲ್ಲದಿರುವುದು ಬಡ ಜನರನ್ನು ತೀವ್ರ ತೊಂದರೆಗೆ ಸಿಲುಕಿಸಿದೆ.

ಬಹುತೇಕ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ದೂರವಾಣಿ ವಿನಿಮಯ ಕೇಂದ್ರ ಇಲ್ಲದ ಕಾರಣ ಬ್ರಾಡ್‌ಬ್ಯಾಂಡ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹಾಗಾಗಿ ಆಯಾ ಗ್ರಾಮ ಪಂಚಾಯಿತಿಯವರು ಪಟ್ಟಣ ಅಥವಾ ಬ್ರಾಡ್‌ಬ್ಯಾಂಡ್ ವ್ಯವಸ್ಥೆ ಇರುವ ಕಡೆ ನೋಂದಾಯಿತ ಪಡಿತರದಾರರ ಭಾವಚಿತ್ರವನ್ನು ಆನ್‌ಲೈನ್ ವ್ಯವಸ್ಥೆಯಲ್ಲಿ ತೆಗೆದು ಅರ್ಜಿ ನೋಂದಾಯಿಸುವ ಕೆಲಸವನ್ನು ಖಾಸಗಿ ವ್ಯಕ್ತಿಗಳಿಗೆ ವಹಿಸಿದ್ದಾರೆ.

ಅಂಥ ಸ್ಥಳಗಳಲ್ಲಿ ತಾತ್ಕಾಲಿಕ ದೂರವಾಣಿ ಸಂಪರ್ಕ ಪಡೆಯುವ ಖಾಸಗಿಯವರು ಪ್ರಕ್ರಿಯೆ ಆರಂಭಿಸಿದ್ದು, ಸಂಬಂಧಿಸಿದ ಗ್ರಾ.ಪಂ ಗಳ ವ್ಯಾಪ್ತಿಯ 12 ವರ್ಷ ಮೇಲ್ಪಟ್ಟವರು ಕುಟುಂಬ ಸಮೇತ ಅಲ್ಲಿಗೆ ಬರುವುದು ಅನಿವಾರ್ಯವಾಗಿದೆ. ಮುದೇನೂರು ಗ್ರಾ.ಪಂ ಸಹ ಅವುಗಳಲ್ಲಿ ಒಂದಾಗಿದ್ದು ಐದಾರು ಹಳ್ಳಿಯ ಜನ ದೋಟಿಹಾಳಲ್ಲಿ ತೆರೆದಿರುವ ಕೇಂದ್ರಕ್ಕೆ ಬರುತ್ತಿದ್ದಾರೆ.

ಆದರೆ ಅಲ್ಲಿಯೂ ಅವ್ಯವಸ್ಥೆ ತಾಂಡವಾಡುತ್ತಿದೆ, ಸರ್ಕಾರಿ ಸಿಬ್ಬಂದಿ ಇಲ್ಲದ ಕಾರಣ ಖಾಸಗಿಯವರು ಮನಬಂದಂತೆ ವರ್ತಿಸುತ್ತಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಬಂದು ಸಂಜೆವರೆಗೆ ಕಾದು ಕುಳಿತರೂ ಸರದಿ ಬರುವುದಿಲ್ಲ, ಒಂದೇ ಗಣಕಯಂತ್ರ ಇದೆ, ಜನ ಹೆಚ್ಚಾದರೆ ಆಪರೇಟರ್‌ಗು ರಾತ್ರಿ ಬನ್ನಿ ಎನ್ನುತ್ತಾರೆ, ಹಾಗಾಗಿ ಭಾವಚಿತ್ರ ತೆಗೆಯಿಸಿಕೊಳ್ಳುವುದಕ್ಕಾಗಿ ರಾತ್ರಿಯೂ ಇರುವಂಥ ಸ್ಥಿತಿ ಇದ್ದು ಯಾರೂ ಹೇಳೋರು ಕೇಳೋರು ಇಲ್ಲ ಎಂದು ಜನ ಅಳಲು ತೋಡಿಕೊಂಡರು.

ಬಿಸಿಲು, ಮಳೆಗಾಳಿ ಲೆಕ್ಕಿಸದೇ ಗರ್ಭಿಣಿಯರು, ಬಾಣಂತಿಯರು, ಮಕ್ಕಳು, ವೃದ್ಧರು ಸರದಿಯಲ್ಲಿ ನಿಂತಿದ್ದರೂ ಅವರನ್ನು ಬಿಟ್ಟು ಪ್ರಭಾವಿ ವ್ಯಕ್ತಿಗಳಿಗೆ, ಹೆಚ್ಚು ಹಣ ಕೊಟ್ಟವರಿಗೆ ಅವಕಾಶ ಮಾಡಿಕೊಡಲಾಗುತ್ತದೆ ನಮ್ಮ ಗೋಳು ಯಾರ ಮುಂದೆ ಹೇಳಬೇಕು ಎಂದು ಜನ ತೊಂದರೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.