ADVERTISEMENT

ಪದವೀಧರರಿಗೆ ಗ್ರಾಮೀಣ ಕೃಷಿ ಪರಿಚಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 9:35 IST
Last Updated 11 ಜನವರಿ 2012, 9:35 IST

ಗಂಗಾವತಿ: ಕೇವಲ ಕೊಠಡಿಯ ಪಾಠ, ತಾಂತ್ರಿಕ ಸಲಕರಣೆಗಳ ನೋಟಕ್ಕೆ ಸೀಮಿತವಾಗಿದ್ದ ಕೃಷಿ ವಿಷಯ ಬೋಧನೆಗೆ ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯವು ಹೊಸ ರೂಪ ನೀಡಲು ಯತ್ನಿಸುತ್ತಿದೆ. `ಕೃಷಿ~ ಅಧ್ಯಯನ ನಿರತ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸುವ ವಿನೂತನ ಪ್ರಯೋಗಕ್ಕೆ ಕೈಹಾಕಿದೆ.

ಪದವಿ ಹಂತದಲ್ಲಿ ಕೃಷಿ ವಿಷಯ ಐಚ್ಛಿಕವಾಗಿ ಪಡೆದು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ `ಗ್ರಾಮೀಣ ಕೃಷಿ ಪರಿಚಯ~ ಎಂಬ ವಿಷಯದಡಿ ಕ್ಷೇತ್ರ ಅಧ್ಯಯನ ಕೈಗೊಳ್ಳುವಂತೆ ಮಾಡುವಲ್ಲಿ ವಿ.ವಿ. ಕಾರ್ಯ ಪ್ರವೃತ್ತವಾಗಿದೆ.

ನಗರದದಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಸಂಶೋಧನಾ ಕೇಂದ್ರಕ್ಕೆ ಕಾಲಿಟ್ಟಿರುವ ಅಂತಿಮ ವರ್ಷದ ಕೃಷಿ ವಿಜ್ಞಾನ ಪದವೀಧರರ ತಂಡ, ಆರು ವಾರ ಕಾಲ ಇಲ್ಲಿ ತಂಗಲಿದೆ. ಗ್ರಾಮೀಣ ಪ್ರದೇಶಕ್ಕೆ ಭೇಟಿ ನಿಡಿ ಅಲ್ಲಿನ ಕೃಷಿಯ ಬಗ್ಗೆ ಪ್ರಾಯೋಗಿಕ ತರಬೇತಿ ಪಡೆಯಲಿದೆ.

ಕೃಷಿ ವಿಜ್ಞಾನ ಪದವಿಧರ ವಿದ್ಯಾರ್ಥಿಗಳು ಅಧ್ಯಯನ ಮುಗಿಸಿ ಹೊರಬಿದ್ದ ನಂತರ ಉದ್ಯೋಗ ಅರಸುವ ಬದಲಿಗೆ ಸ್ವಾವಲಂಬನೆಯೇ ಮೂಲ ಮಂತ್ರವಾಗಿಸಿಕೊಳ್ಳಬೇಕೆಂಬ ಉದ್ದೇಶಕ್ಕೆ ಗ್ರಾಮೀಣ ಕೃಷಿ ಪರಿಚಯ ಹಮ್ಮಿಕೊಂಡಿರುವುದಾಗಿ ವಿ.ವಿ.ಯ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಪ್ರಾಯೋಗಿಕ ಹಂತದ ತರಬೇತಿ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಣ್ಣು, ಮಣ್ಣಿನ ವಿಧಗಳು, ಅದರ ಬಳಕೆ, ಸಂರಕ್ಷಣೆ, ರೈತರ ಪರಿಚಯ, ಗ್ರಾಮೀಣ ಭಾಗದ ತರಹೇವಾರಿ ಬೇಸಾಯ ಪದ್ಧತಿಗಳು, ಅನುಸರಿಸುವ ಕ್ರಮಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ.

ಯಶಸ್ವಿ ರೈತರ ಸಂಪರ್ಕ, ಸಂದರ್ಶನ, ಕೃಷಿಯ ಏಳು-ಬೀಳು ರೈತರಿಂದಲೇ ಕೇಳುವ ಅವಕಾಶ ಕಲ್ಪಿಸಲಾಗಿದೆ. ವಿಭಿನ್ನ ರೈತರ ಯಶೋಗಾಥೆಗಳನ್ನು ದಾಖಲಿಸುವ ಕೆಲಸ ಅಧ್ಯಯನ ನಿರತ ತಂಡದ ವಿದ್ಯಾರ್ಥಿಗಳು ಮಾಡಬೇಕಿದೆ. ಈ ವರದಿ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತಿದೆ.

`ಕೇವಲ ಕೃಷಿ ಮಾತ್ರವಲ್ಲ, ಪದವಿ ಮುಗಿಸಿ ಹೊರ ಬೀಳುವ ವಿದ್ಯಾರ್ಥಿಗಳಿಗೆ ಬೇಸಾಯ ಆಧಾರಿತ ಉದ್ಯಮಗಳಲ್ಲಿ ಇರುವ ಅವಕಾಶದ ಮಾಹಿತಿ ನೀಡಲು ಉದ್ಯಮ ಕೇಂದ್ರಕ್ಕೂ ಕರೆದೊಯ್ಯಲಾಗುತ್ತಿದೆ~ ಎಂದು ಶಿಕ್ಷಣ ನಿರ್ದೇಶಕ ಡಾ. ಎಲ್.ಬಿ. ಹೂಗಾರ ಹೇಳಿದರು.

ಒಟ್ಟು 18 ವಿದ್ಯಾರ್ಥಿಗಳುಳ್ಳ ತಂಡಕ್ಕೆ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ರೋಗ ತಜ್ಞ ಡಾ.ಎಸ್.ಬಿ. ಗೌಡರ್, ಬೇಸಾಯ ಶಾಸ್ತ್ರಜ್ಞ ಡಾ. ಕೊಪ್ಪಳಕರ್, ಕೃಷಿ ಸಂಶೋಧನಾ ಕೇಂದ್ರದ ಮಣ್ಣು ವಿಜ್ಞಾನಿಗಳಾದ ಡಾ.ಜೆ. ವಿಶ್ವನಾಥ, ಡಾ. ರಾಜೇಶ ಮಾರ್ಗದರ್ಶನ ನೀಡುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.