ಗಂಗಾವತಿ: ಗಂಗಾವತಿ ಜನತೆಯ ಬಹು ದಿನದ ಕನಸಾದ ಗಿಣಿಗೇರಾ- ರಾಯಚೂರು ಮಾರ್ಗದ ರೈಲ್ವೆ ಕಾಮಗಾರಿ ಶೇ70ರಷ್ಟು ಮುಕ್ತಾಯವಾಗಿದ್ದು, ಗುರುವಾರ ಗಿಣಿಗೇರಾದಿಂದ ತಾಲ್ಲೂಕಿನ ಚಿಕ್ಕಬೆಣಕಲ್ ಗ್ರಾಮದವರೆಗೆ ಪರೀಕ್ಷಾರ್ಥ ರೈಲು ಸಂಚಾರ ಕೈಗೊಳ್ಳಲಾಯಿತು.
ಬೆಳಗ್ಗೆ 11ಕ್ಕೆ ಗಿಣಿಗೇರಾದಿಂದ ಹೊರಟ ಪರೀಕ್ಷಾರ್ಥ ರೈಲ್ವೆ ಎಂಜಿನ್, ಮುಕ್ಕುಂಪಿ ಮಾರ್ಗವಾಗಿ 27 ಕಿ.ಮೀ. ಅಂತರದ ಚಿಕ್ಕಬೆಣಕಲ್ ಗ್ರಾಮಕ್ಕೆ ಒಂದು ಗಂಟೆಯಲ್ಲಿ ತಲುಪಿತು. ಪರೀಕ್ಷಾರ್ಥವಾಗಿದ್ದರಿಂದ ವಾಹನದ ವೇಗದ ಮಿತಿಯನ್ನು ಗಂಟೆಗೆ 30 ಕಿ.ಮೀ. ಮಾತ್ರ ಸೀಮಿತಮಾಡಲಾಗಿತ್ತು.
ದಕ್ಷಿಣ–ಪಶ್ಚಿಮ ನೈರುತ್ಯ ರೈಲ್ವೆ ವಲಯಕ್ಕೊಳಪಡುವ ಈ ಮಾರ್ಗದಲ್ಲಿ ಗುರುವಾರ ನಡೆದ ಪರೀಕ್ಷಾರ್ಥ ಸಂಚಾರದಲ್ಲಿ ಇಲಾಖೆಯ ಉಪ ಮುಖ್ಯ ಎಂಜಿನಿಯರ್ ವಿಷ್ಣುಭೂಷಣ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಕುಮಾರ ಮೊದಲಾದವರು ಇದ್ದರು.
‘ಮೊದಲ ಬಾರಿಗೆ ರೈಲ್ವೆ ಎಂಜಿನ್ ಮುಕ್ಕುಂಪಿ ಗ್ರಾಮ ಸೀಮೆಗೆ ಪ್ರವೇಶ ಪಡೆದ ಕಾರಣ ಗ್ರಾಮಸ್ಥರು ಅಧಿಕಾರಿಗಳಿಗೆ ಹೂವಿನ ಹಾರಹಾಕಿ ಸಂಭ್ರಮ ವ್ಯಕ್ತಪಡಿಸಿದರು. ಯುವಕರು ಹಾಗೂ ಮಕ್ಕಳ ಸಂಭ್ರಮ ಮುಗಿಲ ಮುಟ್ಟಿತ್ತು’ ಎಂದು ಗ್ರಾಮದ ಹನುಮಂತ ಮುಕ್ಕುಂಪಿ ತಿಳಿಸಿದರು.
‘ಚಿಕ್ಕಬೆಣಕಲ್ ಗ್ರಾಮದಿಂದ ಗಂಗಾವತಿ ನಗರಕ್ಕೆ ಕೇವಲ 12 ಕಿ.ಮೀ. ಅಂತರವಿದ್ದು, ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಮುಗಿಯುವ ನಿರೀಕ್ಷೆಯಿದೆ. ಆ ಬಳಿಕ 2016ರ ಡಿಸಂಬರ್ ಅಂತ್ಯಕ್ಕೆ ಗಂಗಾವತಿ ಗಿಣಿಗೇರಾ ಮಾರ್ಗದಲ್ಲಿ ರೈಲು ಓಡಿಸುವ ಗುರಿ ಇದೆ ಎಂದು ಅಧಿಕಾರಿಗಳು ’ಪ್ರಜಾವಾಣಿ’ಗೆ ತಿಳಿಸಿದರು.
‘ರೈಲ್ವೆ ಕಾಮಗಾರಿಯ ಪ್ರತಿ ಕಿ.ಮೀ.ಗೆ ₹8.80 ಕೋಟಿ ವ್ಯಯಿಸಲಾಗುತ್ತಿದ್ದು, ಈಗಾಗಲೆ ನಗರದಲ್ಲಿ ಬಹುತೇಕ ಭಾಗದಲ್ಲಿ ಕಾಮಗಾರಿಯ ಶೇ 90ರಷ್ಟು ಪೂರ್ಣಗೊಂಡಿದೆ. ವಿದ್ಯಾನಗರದ ಬಳಿ ಸೇತುವೆ ಮತ್ತು ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
***
ಕಾಮಗಾರಿಯ ಗುಣಮಟ್ಟ ಪರೀ ಕ್ಷಾರ್ಥ ಸಂಚಾರ ಯಶಸ್ವಿಯಾಗಿದೆ. ಡಿಸೆಂಬರ್ ಅಂತ್ಯಕ್ಕೆ ಗಂಗಾವತಿಯಿಂದ ಗಿಣಿಗೇರಾ ಮಾರ್ಗವಾಗಿ ಕೊಪ್ಪಳಕ್ಕೆ ರೈಲು ಓಡಿಸಲಾಗುವುದು.
-ಶಿವಕುಮಾರ, ಕಾರ್ಯ ನಿರ್ವಾಹಕ ಎಂಜಿನಿಯರ್ ನೈರುತ್ಯ ರೈಲ್ವೆ ವಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.