ADVERTISEMENT

ಪಾರಮ್ಮನ ದುಃಖಕ್ಕೆ ಪಾರವೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2011, 5:50 IST
Last Updated 3 ಆಗಸ್ಟ್ 2011, 5:50 IST
ಪಾರಮ್ಮನ ದುಃಖಕ್ಕೆ ಪಾರವೇ ಇಲ್ಲ!
ಪಾರಮ್ಮನ ದುಃಖಕ್ಕೆ ಪಾರವೇ ಇಲ್ಲ!   

ಕುಷ್ಟಗಿ: ಮೇಲ್ನೋಟಕ್ಕೆ ದನದ ಕೊಟ್ಟಿಗೆಗಿಂತ ಕೀಳಾಗಿದ್ದರೂ ಅದೊಂದು ಕುಟುಂಬದ ಕಾಯಂ ವಾಸಸ್ಥಳ, ಗಟ್ಟಿಮುಟ್ಟಾಗಿರದ ಛಾವಣಿ ಮಳೆ ಬಂದರೆ ಸಾಮಾನು ಸರಂಜಾಮು, ಬಟ್ಟೆ ಕಾಳುಕಡಿ, ಮಕ್ಕಳು ಮುದುಕರೆಲ್ಲ ಮೂಲೆಯಲ್ಲಿ ರಕ್ಷಣೆ ಪಡೆಯಬೇಕಾಗುತ್ತದೆ ಭಾರಿ ಗಾಳಿ ಮಳೆ ಬಂದರಂತೂ ಈ ಕುಟುಂಬ ಕೈಯಲ್ಲಿ ಜೀವ ಹಿಡಿದುಕೊಂಡು ಕುಳಿತುಕೊಳ್ಳುವಂಥ ಪರಿಸ್ಥಿತಿ”!.

ತಾಲ್ಲೂಕಿನ ಚಳಗೇರಿ ಗ್ರಾಮದಲ್ಲಿನ ಪಾರಮ್ಮ (ಪಾರ್ವತೆಮ್ಮ) ಪಂಚಾಕ್ಷರಯ್ಯ ಹಿರೇಮಠ ಎಂಬ ಬಡ ವೃದ್ಧೆಯ ಕುಟುಂಬಕ್ಕೆ ಸೇರಿದ ಮನೆ ಇದು. ಬಾಹ್ಯನೋಟಕ್ಕೆ ಇದು ಮನೆ ಎಂದು ಯಾರೂ ನಂಬಲಾಗುವುದಿಲ್ಲ, ಒಳಗೆ ಇಣುಕಿದರೆ ಪರಿಸ್ಥಿತಿ ಅಯೋಮಯ. ಅಂಥ ಮನೆಯಲ್ಲೇ ಈ ಬಡ ಕುಟುಂಬ ಶ್ರಾವಣ ಮೊದಲ ಸೋಮವಾರದ ಸಡಗರದಲ್ಲಿದ್ದುದು ಅಚ್ಚರಿ ಮೂಡಿಸಿತು.

ಇದ್ದೊಂದು ಹಳೆಮನೆ ಅತಿವೃಷ್ಟಿಯಲ್ಲಿ ನೆಲಸಮವಾಗಿದ್ದು ಮುಂದಿನ ಬಯಲಲ್ಲೇ ಈ ಕುಟುಂಬದ ವಾಸ. ಸುತ್ತಲೂ ಕಲ್ಲುಚಪ್ಪಡಿಗಳು, ತಗಡು, ಕಟ್ಟಿಗೆ, ಪ್ಲಾಸ್ಟಿಕ್ ಹೊದಿಕೆಯ ಛಾವಣಿಯ ಈ ಮನೆಗೆ ಸಂದಿಗೊಂದಿಗಳೇ ಕಿಟಕಿ ಬಾಗಿಲುಗಳು. ಹಾವು, ಚೇಳು, ನಾಯಿ ದನಕರುಗಳು ಸಲೀಸಾಗಿ ಒಳಗೆ ಪ್ರವೇಶಿಸುತ್ತವೆ. `ಹಗಲು ಹೇಗೋ ಕಾಲ ಕಳೆಯಬಹುದು ಆದರೆ ರಾತ್ರಿ ವೇಳೆ ದೇವರ ಮೇಲೆ ಭಾರ ಹಾಕಿ ಮಲಗಬೇಕು. ಬೇರೆ ಮನೆ ಕಟ್ಟಿಸಿಕೊಳ್ಳಬಹುದಲ್ಲ ಎಂದು ಕೇಳಿದರೆ `ದುಡಿಕೋಂಡ ತಿನ್ನೋ ನಮ್ಮಂತ ಬಡವ್ರ ಅಷ್ಟೊಂದು ರೊಕ್ಕಾ ಎಲ್ಲಿಂದ ತರಬೇಕ್ರಿ~ ಎಂದೆ ಪಾರಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾಳೆ.

ಗ್ರಾಮ ಪಂಚಾಯತಿ ಕೇಂದ್ರ ಸ್ಥಳವಾಗಿರುವ ಈ ಗ್ರಾಮದಲ್ಲಿ ಅನೇಕ ವಸತಿ ಯೋಜನೆಗಳ ಹೆಸರಿನಲ್ಲಿ ಸಾಕಷ್ಟು ಹಣ ಖರ್ಚಾಗಿದೆ. ಮನೆ ಇದ್ದವರು, ಉಳ್ಳವರೂ ಯೋಜನೆಯ `ಫಲ~ ಉಂಡಿರುವ ಸಾಕಷ್ಟು ಉದಾಹರಣೆಗಳಿವೆ. ಓಣಿಗೊಬ್ಬ ಗ್ರಾ.ಪಂ ಸದಸ್ಯರಿದ್ದಾರೆ, ಅಧ್ಯಕ್ಷರು ಅದೇ ಊರಿನವರು. ಆದರೆ ದುಸ್ಥಿತಿಯಲ್ಲಿರುವ ಮನೆಯಲ್ಲೇ ಕಣ್ಣೀರಿನಿಂದ ಕೈತೊಳೆಯುತ್ತ ಬದುಕು ಸವೆಸುತ್ತಿರುವ ಈ ಪಾರಮ್ಮನ ಕುಟುಂಬದತ್ತ ಯಾರೊಬ್ಬರೂ ಕಣ್ಣು ಹಾಯಿಸದಿರುವುದು ವಿಪರ್ಯಾಸ.

ಜನರ ನೋವು ನಲಿವುಗಳಿಗೆ ಸ್ಪಂದಿಸಬೇಕಾದ ಪ್ರತಿನಿಧಿಗಳು ಇಂಥ ವಿಷಯದಲ್ಲಿ ನಿರ್ಲಕ್ಷ್ಯವಹಿಸುತ್ತಾರೆ. ತಾಲ್ಲೂಕಿನ ಅಧಿಕಾರಿಗಳೂ ಈ ಬಗ್ಗೆ ಗಮನಹರಿಸುವುದಿಲ್ಲ ಆದರೆ ಸ್ವತ ಮಹಿಳೆಯೇ ಆಗಿರುವ ಜಿಲ್ಲಾಧಿಕಾರಿ ಎಂ.ತುಳಸಿ ಅವರಾದರೂ ಈ ವೃದ್ಧೆಯ ಕಂಬನಿಯೊರೆಸುವರೆ? ಎಂಬುದು ಗ್ರಾಮದ ಕೆಲ ಹಿರಿಯರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.