ಗಂಗಾವತಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆ ಅಷ್ಟಕಷ್ಟೆ, ಶಿಕ್ಷಕರು ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ ಎಂಬ ದೂರು ದುಮ್ಮಾನಕ್ಕೆ ಇಲ್ಲೊಂದು ಶಾಲೆ ಅಪರೂಪದ ಸಾಧನೆ ಮಾಡುತ್ತಿದೆ. ಶಾಲೆಯ ಗೋಡೆಗಳನ್ನು ತೆರೆದ ಪುಸ್ತಕದಂತೆ ಮಾಡಿ ಮಕ್ಕಳ ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ವೃದ್ಧಿಗೆ ಯತ್ನಿಸಿದೆ.
ಶಾಲೆಯ ಆವರಣಕ್ಕೆ ಕಾಲಿಟ್ಟರೆ ಸಾಕು ಶಾಲೆಯ ಗೋಡೆಯ ಸುತ್ತಲೂ ಇರುವ ಅಲಂಕಾರಿಕ ಹೂ–ಗಿಡಗಳು ಸ್ವಾಗತಿಸುತ್ತವೆ. ಮಕ್ಕಳನ್ನು ಸೂಜಿಗಲ್ಲಂತೆ ಸೆಳೆದಿಡಬಲ್ಲ ಮಿಕ್ಕಿ ಮೌಸ್‌ನಂತ ಹತ್ತಾರು ವ್ಯೆಂಗ್ಯ ಚಿತ್ರ ಗಮನ ಸೆಳೆಯುತ್ತವೆ. ಇಷ್ಟಕ್ಕೂ ಆ ಶಾಲೆ ಗಂಗಾವತಿ ನಗರದ ಚಲುವಾದಿ ಓಣಿಯಲ್ಲಿರುವ ನಮ್ಮೂರ ಸರ್ಕಾರಿ ಶಾಲೆ.
ಶಾಲೆಯ ಆವರಣ ಪ್ರವೇಶಿಸಿ ತರಗತಿ, ಶಿಕ್ಷಕರ ಹಾಗೂ ಮುಖ್ಯಗುರುಗಳ ಕೊಠಡಿಗಳಿಗೆ ತೆರಳಿದರೆ ಇದು ಸರ್ಕಾರಿ ಶಾಲೆ ಹೌದೆ, ಅಲ್ಲವೆ ಎಂಬ ಅನುಮಾನ ಮೂಡುತ್ತದೆ. ಎಕೆಂದರೆ ಇದು ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಮೂಲ ಸೌಕರ್ಯ ಪಡೆದಿದೆ.
ಮಕ್ಕಳನ್ನು ಕೇವಲ ಪಠ್ಯದ ಹುಳುವಾಗಿಸಿದರೆ ಬೌದ್ಧಿಕ ಸಾಮರ್ಥ್ಯ ವೃದ್ಧಿ ಅಸಾಧ್ಯ ಎಂದರಿತರ ಇಲ್ಲಿನ ಶಿಕ್ಷಕರು, ಮಕ್ಕಳ ತಲೆಗೆ ನೇರವಾಗಿ ಹೋಗಲಿ ಎಂಬ ಕಾರಣಕ್ಕೆ ಇಡೀ ಶಾಲೆಯ ಹೊರ–ಒಳ ಗೋಡೆ ಮಾಹಿತಿಯ ಕಣಜವಾಗಿದೆ.
12ನೇ ಶತಮಾನದ ಸಾಮಾಜಿಕ ಕ್ರಾಂತಿಕಾರರು, ಸ್ವಾತಂತ್ರ್ಯ ಸೇನಾನಿಗಳು, ಆಧ್ಯಾತ್ಮ ಚಿಂತಕರು, ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲ, ರಾಷ್ಟ್ರಪತಿ, ಮುಖ್ಯಮಂತ್ರಿ, ಮಹಿಳಾ ಪ್ರಮುಖರು, ಮೇಧಾವಿ ಹೀಗೆ ಸಾಲು ಸಾಲು ಗಣ್ಯರು ಚಲುವಾದಿ ಓಣಿ ಶಾಲೆಯ ಗೋಡೆಯಲ್ಲಿ ವಿರಾಜಮಾನರಾಗಿದ್ದಾರೆ.
ಮಕ್ಕಳಿಗೆ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಲು ಶಾಲೆಯ ಒಂದು ಬದಿಯಲ್ಲಿ ಕೈತೋಟ ಬೆಳೆಸಲಾಗಿದ್ದು, ಪಾಲಕ್, ಮೂಲಂಗಿ, ಕೊತ್ತಂಬರಿ, ಮೆಂತ್ಯೆ, ಸಬ್ಸಗಿ, ಟೊಮೊಟೊ ಸೇರಿದಂತೆ ಇತರ ತರಕಾರಿ, ಸೊಪ್ಪು ಬೆಳೆಯಲು ಮಕ್ಕಳನ್ನು ತೊಡಗಿಸಲಾಗುತ್ತಿದೆ.
ಶಾಲೆಯ ಕೊಠಡಿಯೊಳಗೆ ಕಾಲಿಟ್ಟರೆ ಸಾಕು ಮಕ್ಕಳ ಜ್ಞಾನ ವಿಕಾಸಕ್ಕೆ ಪೂರಕವಾಗಬಲ್ಲ, ಗಣಿತದ ಸೂತ್ರಗಳು, ಕನ್ನಡ ವ್ಯಾಕರಣ, ಇಂಗ್ಲಿಷಿನ ವಿರುದ್ಧಾರ್ಥ ಪದಗಳು, ಸಂಧಿಗಳು, ಕಾಲ, ಕನ್ನಡ ಸಾರಸ್ವತ ಲೋಕವನ್ನು ಉಜ್ವಲಗೊಳಿಸಿದ ನೂರಾರು ಸಾಹಿತಿ–ಕವಿಗಳ ಚಿತ್ರಣ ಅನಾವರಣಗೊಳ್ಳುತ್ತವೆ.
ನಾಡಿನ ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳು, ಕರ್ನಾಟಕ, ಜಿಲ್ಲಾ, ತಾಲ್ಲೂಕು ದರ್ಶನದ ವಿಭಾಗದಲ್ಲಿ ಆಯಾ ಭಾಗದಲ್ಲಿನ ಪ್ರವಾಸಿತಾಣಗಳ ಮಾಹಿತಿ ಮಕ್ಕಳಲ್ಲಿ ಆಸಕ್ತಿ ಮೂಡಿಸುತ್ತಿವೆ. ಶಾಲೆಯಲ್ಲೊಂದು ಸುಸಜ್ಜಿತ ಸಭಾಂಗಣ ನಿರ್ಮಿಸಿದ ಹೆಗ್ಗಳಿಕೆ ಈ ಶಾಲೆಯ ಶಿಕ್ಷಕರದ್ದು.
ಶಾಲೆಯ ಪ್ರತಿಯೊಂದು ಕೊಠಡಿಗೆ ನೆಲಹಾಸು ಹಾಕಲಾಗಿದೆ. ಮುಖ್ಯ ಶಿಕ್ಷಕರ ಕೊಠಡಿಯಂತೂ ಕ್ಷೇತ್ರ ಶಿಕ್ಷಣಾಧಿಕಾರಿಗಿಲ್ಲದಂತ ಸೌಲಭ್ಯಗಳಿಂದ ಕೂಡಿದೆ. ಸುಸಜ್ಜಿತ ಗಣಕಯಂತ್ರ ಕೊಠಡಿ ಹಾಗೂ ಬೋಧನೆಗೆ 2013ರ ಅಕ್ಟೋಬರ್‌ನಲ್ಲಿ ಅತ್ಯುತ್ತಮ ಶಾಲೆ ಎಂಬ ರಾಜ್ಯಮಟ್ಟದ ಪ್ರಶಸ್ತಿ ದೊರೆತಿದೆ.
ಸರ್ಕಾರಿ ಶಾಲೆಯ ಈ ಸಾಧನೆಗೆ ಮುಖ್ಯ ಶಿಕ್ಷಕ, ರಾಜ್ಯ ಪ್ರಶಸ್ತಿ ವಿಜೇತ ಸಂಗಪ್ಪ ಗಾಜಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಖಾದರಸಾಬ ಹುಲ್ಲೂರು ಅವರ ಆಸಕ್ತಿ, ಪರಿಶ್ರಮ ಕಾರಣ. ಹಿಂದುಳಿದ ಚಲುವಾದಿ ಓಣಿಯ ನಮ್ಮೂರ ಶಾಲೆ ಇತರ ಸರ್ಕಾರಿ–ಖಾಸಗಿ ಶಾಲೆಗೆ ಮಾದರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.