ADVERTISEMENT

ಪೊಲೀಯೊ ಮುಕ್ತ ನವ ಭಾರತ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 8:05 IST
Last Updated 16 ಏಪ್ರಿಲ್ 2012, 8:05 IST

ಗಂಗಾವತಿ: ಪೊಲಿಯೋ ಮುಕ್ತ ನವ ಭಾರತ ನಿರ್ಮಾಣದ ಉದ್ದೇಶದೊಂದಿಗೆ ದೇಶದಲ್ಲಿ ಇಂದು ಎರಡನೇ ಸುತ್ತಿನ ಪಲ್ಸ್ ಪೊಲಿಯೋ ಕಾರ್ಯಕ್ರಮ ನಡೆಯುತ್ತಿದೆ ಎಂದು ನಗರದ ಸರ್ಕಾರಿ ಉಪ ವಿಭಾಗದ ಆಡಳಿತ ವೈದ್ಯಾಧಿಕಾರಿ ಎಚ್. ರಾಮಕೃಷ್ಣ ಹೇಳಿದರು.

ಕೇಂದ್ರ ಸರ್ಕಾರದ ರಾಷ್ಟ್ರೀಯ ಕಾರ್ಯಕ್ರಮವಾದ ಎರಡನೇ ಹಂತದ ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಭಾನುವಾರ ಶಾಸಕ ಪರಣ್ಣ ಮುನವಳ್ಳಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಾಲನೆ ನೀಡಿದ ಬಳಿಕ ಅಧಿಕಾರಿ ಮಾಹಿತಿ ನೀಡಿದರು.

ವಿಶ್ವ ಆರೋಗ್ಯ ಸಂಸ್ಥೆಯ ಮಾನಕಗಳ ಪ್ರಕಾರ ಭಾರತ ಸೇರಿದಂತೆ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ನೈಜಿರೀಯಾ ಮತ್ತು ಅಪ್ಘಾನಿಸ್ತಾನದಲ್ಲಿ ಪೊಲಿಯೋ ಪೀಡಿತ ಮಕ್ಕಳ ಸಂಖ್ಯೆ ಅಧಿಕ ಪ್ರಮಾಣದಲ್ಲಿದೆ. ಈ ಹಿನ್ನೆಲೆ ಪೊಲಿಯೋ ಮುಕ್ತ ರಾಷ್ಟ್ರ ನಿರ್ಮಾಣದ ಗುರಿ ಸರ್ಕಾರ ಹೊಂದಿದೆ.

ಮುಂದಿನ ಕೇವಲ ಬೆರಳೆಣಿಕೆಯಷ್ಟು ವರ್ಷದಲ್ಲಿ ಭಾರತವೂ ಪೊಲಿಯೋ ಮುಕ್ತ ಸಶಕ್ತ ರಾಷ್ಟ್ರವಾಗಿ ಹೊರ ಹೊಮ್ಮಲಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಈ ವರ್ಷದ ಎರಡನೇ ಮತ್ತು ಕೊನೆಯ ಸುತ್ತಿನ ಪಲ್ಸ್ ಪೊಲಿಯೋ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿದೆ ಎಂದರು.

ಮೊದಲ ದಿನ ಕೇಂದ್ರದಲ್ಲಿ ಮಾತ್ರ ಒಂದು ದಿನದಿಂದ ಐದು ವರ್ಷದವರೆಗಿನ ಎಲ್ಲ ಮಕ್ಕಳಿಗೆ ಪಲ್ಸ್  ಹನಿ ಹಾಕಿಸಬೇಕು. ಉಳಿದ ಮೂರು ದಿನ ಕಾರ್ಯಕರ್ತರು ಮನೆಮನೆಗೆ ತೆರಳಿ ಮಕ್ಕಳಿಗೆ ಪಲ್ಸ್ ಹನಿ ಹಾಕುವರು ಎಂದು ಅಧಿಕಾರಿ ತಿಳಿಸಿದರು.

ವೈದ್ಯರಿಂದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದ ಶಾಸಕ ಪರಣ್ಣ ಮುನವಳ್ಳಿ, ನಗರದಲ್ಲಿ ಒಟ್ಟು 63 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 130 ಸಿಬ್ಬಂದಿಯನ್ನು ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಡಾ. ಹಂದ್ರಾಳ, ಸರ್ಜನ್ ಡಾ. ಜುಬ್ಬೇರ ಅಹ್ಮದ್, ಶಿಕ್ಷಕ ನಿಜಲಿಂಗಪ್ಪ ಮೆಣಸಿಗಿ, ರೈತ ಮುಖಂಡ ಹುಸೇನಸಾಬ ಮಲ್ಲಾಪುರ, ಸಿಬ್ಬಂದಿಗಳಾದ ಪಿ. ವೆಂಕಟೇಶ, ಜಾಫರ್, ಪದ್ಮಾ, ಮಂಜುಳಾ, ಗೌರಮ್ಮ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.