ADVERTISEMENT

ಬಾಲಕಿಯರ ಬಾಲ ಮಂದಿರಕ್ಕೆ ಅನಾಥ ಮಗು

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 8:35 IST
Last Updated 2 ಜೂನ್ 2011, 8:35 IST

ಗಂಗಾವತಿ: ಎರಡು ತಿಂಗಳಿಂದ ಇಲ್ಲಿನ ಬೇರೂನಿ ಅಬಾದಿ ಮಸೀದಿ ಬಳಿ ಅನಾಥವಾಗಿದ್ದ ಆರು ವರ್ಷದ ರೇಷ್ಮಾ ಎಂಬ ಮಗುವನ್ನು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಬುಧವಾರ ತಮ್ಮ ಸುಪರ್ದಿಗೆ ತೆಗೆದುಕೊಂಡರು.

ಬಳಿಕ `ಕೊಪ್ಪಳದಲ್ಲಿ ಇದೇ ಪ್ರಸಕ್ತ ಸಾಲಿನಿಂದ ಪ್ರಾರಂಭವಾದ ಬಾಲಕಿಯರ ಬಾಲ ಮಂದಿರಕ್ಕೆ ಈ ಮಗುವನ್ನು ಕಳುಹಿಸಿ ಕೊಡಲಾಗುವುದು~ ಎಂದು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ತಾಲ್ಲೂಕು ಅಧಿಕಾರಿ ಎನ.ಎಸ್. ಖಾಜಿ ತಿಳಿಸಿದರು.

ಸಹಜವಾಗಿ ಎಲ್ಲಿಯಾದರು ಅನಾಥ ಮಕ್ಕಳು ಪತ್ತೆಯಾದರೆ, ಸಾರ್ವಜನಿಕರು ನೇರವಾಗಿ `ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ~ಗೆ ಒಪ್ಪಿಸಬೇಕು. ಸಮಿತಿ ಮಗುವಿನ ಪೂರ್ವಪರ ವಿಚಾರಣೆಯ ಬಳಿಕ ಪಾಲಕರನ್ನು ಪತ್ತೆ ಹಚ್ಚುವ ಕಾರ್ಯ ಕೈಗೊಳ್ಳುತ್ತದೆ.

ಆಕಸ್ಮಿಕ ಪಾಲಕರು ಪತ್ತೆಯಾಗದಿದ್ದಲ್ಲಿ, ಆ ಮಗು ಸರ್ಕಾರದ ಆಸ್ತಿಯಾಗಲಿದೆ. ಸರ್ಕಾರವೇ ಮಗುವಿನ ಸಂಪೂರ್ಣ ಹೊಣೆ ಹೊತ್ತು ಶಿಕ್ಷಣ, ಆರೋಗ್ಯ, ವಸತಿ, ಊಟ ಸಹಿತಿ ಶಿಕ್ಷಣ ಕೊಡಿಸುತ್ತದೆ ಎಂದು ಅಧಿಕಾರಿ ವಿವರಣೆ ನೀಡಿದರು.  ಸುಮಾರು ಒಂದು ವರ್ಷದಿಂದ ತಾಯಿಯೊಂದಿಗೆ ಈ ಮಗು ಇಲ್ಲಿಯೆ ವಾಸವಾಗಿತ್ತು. ಆದರೆ ಎರಡು ತಿಂಗಳ ಹಿಂದೆ ಮಾನಸಿಕ ಅಸ್ವಸ್ಥಗೊಂಡ ತಾಯಿ ನಾಪತ್ತೆಯಾಗಿದ್ದರಿಂದ ಮಗು ಅನಾಥವಾಗಿತ್ತು ಎಂದು ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಬಾಲಕಿಯ ಪೂರ್ವಪರದ ಬಗ್ಗೆ ಅಧಿಕಾರಿಗಳು ವಿಚಾರಿಸಿದರೆ ಸೂಕ್ತ ಮಾಹಿತಿ ದೊರೆಯಲಿಲ್ಲ. ಕಳೆದ ಎರಡು ತಿಂಗಳಿಂದ ಅನ್ನ ಕೊಟ್ಟು ಸಲುಹಿದ್ದಾಗಿ ಮಸೀದಿಯ ಮುಜಾವರ ನೂಸ್ರತ್ ಮತ್ತು ಸೇವಾಕರ್ತ ಸಾಧೀಕ್ ತಿಳಿಸಿದರು.

ಕಾನೂನು ಪ್ರಕಾರ ಕಡತಗಳನ್ನು ಸಿದ್ದಮಾಡಿ ಬಾಲಕಿಯನ್ನು ಕೊಪ್ಪಳಕ್ಕೆ ಕಳುಹಿಸುವುದಾಗಿ ಅಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಸಿ.ಡಿ.ಪಿ.ಓ ಕಾರ್ಯಾಲಯದ ಸಹಾಯಕ ಅಧಿಕಾರಿ ಅಶೋಕ, ರಾಯಚೂರುಕರ್ ಮೊದಲಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.