ADVERTISEMENT

ಬಿಎಸ್‌ಎನ್‌ಎಲ್‌ಗೆ ಶಿಕ್ಷಣ ಇಲಾಖೆ 46.28 ಲಕ್ಷ ಬಾಕಿ:ನೌಕರರ ವೇತನ ಕತ್ತರಿಗೆ ಆದೇಶ

ಪ್ರಜಾವಾಣಿ ವಿಶೇಷ
Published 18 ಆಗಸ್ಟ್ 2012, 7:25 IST
Last Updated 18 ಆಗಸ್ಟ್ 2012, 7:25 IST

ಕುಷ್ಟಗಿ: ಎರಡು ವರ್ಷದ ಹಿಂದೆ ಕೊಪ್ಪಳ ಜಿಲ್ಲಾ ಪಂಚಾಯಿತಿಯು ಶಿಕ್ಷಣ ಇಲಾಖೆ ನೌಕರರಿಗೆ ನೀಡಿದ್ದ ಮೊಬೈಲ್ ಸಿಮ್‌ಗಳಿಗೆ ಸಂಬಂಧಿಸಿದಂತೆ ರೂ 46.28 ಲಕ್ಷ ದೂರವಾಣಿ ಬಿಲ್ ಪಾವತಿಯಾಗದೇ ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಎಸ್‌ಎನ್‌ಎಲ್ ಜಿ.ಪಂ ಗೆ ಪತ್ರಬರೆದಿದ್ದು ಅಧಿಕ ಮೊತ್ತದ ಬಾಕಿಯನ್ನು ಕೂಡಲೇ ಪಾವತಿಸುವುದಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಆದರೆ ಬಿಲ್ ಪಾವತಿಸದ ಶಿಕ್ಷಣ ಇಲಾಖೆ ಕ್ರಮವನ್ನು ಜಿ.ಪಂನ ಹಾಲಿ ಸಿಇಒ ಆಕ್ಷೇಪಿಸಿದ್ದಾರೆ ಎಂದು ತಿಳಿದಿದೆ.

ಈ ಹಿನ್ನೆಲೆಯಲ್ಲಿ ಡಿಡಿಪಿಐ `ಅತಿ ಜರೂರು~ ಸುತ್ತೋಲೆ ಹೊರಡಿಸಿದ್ದು,  ಬಿಲ್ ಪಾವತಿಸದ ಪ್ರೌಢ, ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರು, ಬ್ಲಾಕ್ ಮತ್ತು ವಲಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ನೌಕರರ ವೇತನವನ್ನು ತಡೆ ಹಿಡಿದು ಒಂದೇ ಕಂತಿನಲ್ಲಿ ದೂರವಾಣಿ ಬಿಲ್ ಬಾಕಿ ಪಾವತಿಗೆ ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ.

ವರ್ಷದ ಅವಧಿಯಲ್ಲಿನ ದೂರವಾಣಿ ಬಳಕೆಗೆ ಸಂಬಂಧಿಸಿದಂತೆ ಈ ತಾಲ್ಲೂಕಿ ಬಾಕಿ ಮೊತ್ತ ರೂ 8,77,864 ಇದ್ದರೆ ಜಿಲ್ಲೆಯ ಶಿಕ್ಷಣ ಇಲಾಖೆಯ ಒಟ್ಟು ರೂ 46,28,530 ಲಕ್ಷ ರೂ ಬಾಕಿ ಇದ್ದು ತಕ್ಷಣ ಪಾವತಿಸುವಂತೆ ಬಿಎಸ್‌ಎನ್‌ಎಲ್ ಜಿ.ಪಂ ಮೇಲೆ ಒತ್ತಡ ಹೇರುತ್ತಿದೆ.

ಈ ಮಧ್ಯೆ ಬಾಕಿ ಪಾವತಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿರುವ ಡಿಡಿಪಿಐ, ಸಂಬಂಧಿಸಿದವರ ವೇತನದಲ್ಲಿ ಬಾಕಿ ಮೊತ್ತವನ್ನು ಕಡಿತ ಮಾಡಿ ಬಿಎಸ್‌ಎನ್‌ಎಲ್‌ಗೆ ಜಮೆ ಮಾಡಿದ ರಸೀದಿಯನ್ನು ತಲುಪಿಸುವಂತೆ ಆದೇಶಿಸಿದ್ದಾರೆ. ಒಂದುವೇಳೆ ಬಾಕಿ ಜಮೆಯಾಗದಿದ್ದರೆ ನಿಮ್ಮನ್ನೆ ಹೊಣೆಗಾರರನ್ನಾಗಿಸುವುದಾಗಿ ಬಿಇಒಗೆ ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕಿನ ಶಿಕ್ಷಕರು ಸೇರಿ 141 ನೌಕರರಿಗೆ ನೋಟಿಸ್ ನೀಡಿರುವ ಬಿಇಒ, ತಕ್ಷಣ ಬಾಕಿ ಪಾವತಿಸಿ ಇಲ್ಲವಾದರೆ ವೇತನ ಕಡಿತ ಶಿಕ್ಷೆ ಅನುಭವಿಸಿ ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಶಿಕ್ಷಣ ಇಲಾಖೆ ಆಡಳಿತವನ್ನು ಚುರುಕುಗೊಳಿಸಿ ಮುಖ್ಯಶಿಕ್ಷಕರಿಂದ ಹಿಡಿದು ಶಿಕ್ಷಣ ಮತ್ತು ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳೊಂದಿಗೆ ಮೊಬೈಲ್ ದೂರವಾಣಿ ಮೂಲಕ ನಿರಂತರ ಸಂಪರ್ಕ, ಸಂವಹನ ವ್ಯವಸ್ಥೆಗೆ ಅನುಕೂಲ ಕಲ್ಪಿಸಲು ಮತ್ತು `ಕಾಗದ ರಹಿತ ಸರ್ಕಾರಿ ಕಚೇರಿ~ ಪರಿಕಲ್ಪನೆಯೊಂದಿಗೆ 2008ರಲ್ಲಿ ಜಿ.ಪಂ ಸಿಇಒ ಆ್ಯಂಟನಿ ಮೆಂಡೋನ್ಸಾ ಅವರ ಅವಧಿಯಲ್ಲಿ ಇಲಾಖೆಯಿಂದಲೇ ಏಕರೂಪದ ಸಿಮ್ ನೀಡುವ ಯೊಜನೆ ಜಾರಿಗೆ ಬಂದಿತ್ತು.

ಸ್ಥಗಿತ: ಮಾದರಿ ಎಂದು ಹೇಳಲಾದ ಈ ವ್ಯವಸ್ಥೆ ಜಾರಿಗೆ ಬಂದ ಒಂದು ವರ್ಷದಲ್ಲೇ ಎಲ್ಲ ಸಿಮ್‌ಕಾರ್ಡ್‌ಗಳನ್ನು ಲಾಕ್ ಮಾಡಿದ್ದು ವಿಪರ್ಯಾಸವಾಗಿದೆ. ಅಚ್ಚರಿಯಂದರೆ, ಸಿಮ್‌ಗಳು ನೌಕರರ ಕೈಗೆ ಸಿಗುವ ಮೊದಲೇ ಆ್ಯಕ್ಟಿವೇಶನ್ ಆಗಿದ್ದರಿಂದ ಬಳಸದಿದ್ದರೂ ಸಾಕಷ್ಟು ಬಿಲ್ ಬಂದಿದೆ ಎಂದು ನೌಕರರು ಹೇಳಿದ್ದಾರೆ.

ಈ ಮಧ್ಯೆ ಇಲಾಖೆ ನೋಟಿಸ್‌ನಿಂದ ಅಮಾಯಕ ನೌಕರರು ಕಂಗಾಲಾಗಿದ್ದಾರೆ. ಬಹುತೇಕ ನೌಕರರು ವರ್ಗವಾಗಿರುವುದು, ಕೆಲವರು ನಿವೃತ್ತಿಹೊಂದಿರುವುದು ಇನ್ನೂ ಕೆಲವರು ಮೃತರಾಗಿರುವುದು ಗೊಂದಲ ಸೃಷ್ಟಿಸಿದೆ. ಆರಂಭದಲ್ಲಿ ರೂ 350-500 ಎರಡು ಗರಿಷ್ಟ ಮಿತಿಯ ಬಳಕೆ ವರ್ಗಗಳನ್ನು ಗುರುತಿಸಲಾಗಿತ್ತು.

ಸದರಿ ಹಣವನ್ನು ಶಾಲೆಯ ಸಂಚಿತ ನಿಧಿಯಲ್ಲಿ ಹೆಚ್ಚಿದ್ದರೆ ಬಿಲ್‌ನ್ನು ಸಂಬಂಧಿಸಿದವರೇ ವೈಯಕ್ತಿಕವಾಗಿ ಪಾವತಿಸುವ ನಿರ್ಬಂಧ ಹೇರಿದ್ದರೂ ಕೆಲವರು ಕೆಲವರು ಮನಬಂದಂತೆ ಮೊಬೈಲ್ ಬಳಸಿದರೂ ಬಿಲ್ ಪಾವತಿಸಿಲ್ಲ. ಹಾಗಾಗಿ ರೂ 10 ರಿಂದ ರೂ 19 ಸಾವಿರದ ವರೆಗಿನ ಬಿಲ್ ಬಾಕಿದಾರ ನೌಕರರ ಪಟ್ಟಿಯೇ ಸಿದ್ಧವಾಗಿದೆ.

ಅಳಲು: ಮೊಬೈಲ್ ಬಳಕೆ ಮಿತಿ ಹೇರಿದ ಆದೇಶವನ್ನು ಬಿಇಒ ಕಚೇರಿ ನೀಡಿಯೇ ಇಲ್ಲ, ಹಾಗಾಗಿ ಕೆಲವರು ಮನಬಂದಂತೆ ಬಳಸಿದ್ದಾರೆ, ಬಿಲ್ ಪಾವತಿಗೆ ಎಸ್‌ಡಿಎಂಸಿಗಳೂ ಅವಕಾಶ ನೀಡಿಲ್ಲ, ಕೆಲ ಶಾಲೆಗಳ ದಾಖಲೆಯಲ್ಲಿ ಖರ್ಚಾದರೂ ಬಿಲ್ ಪಾವತಿಯಾಗದ ಉದಾಹರಣೆಗಳಿವೆ.

ಹಾಗಾಗಿ ಯಾರೋ ಮಾಡದ ತಪ್ಪಿಗೆ ಇನ್ನಾರೋ ಶಿಕ್ಷೆ ಅನುಭವಿಸುವಂತಾಗಿದೆ ಎಂದು ಕೆಲ ನೌಕರರು ಅಳಲು ತೋಡಿಕೊಂಡಿದ್ದಾರೆ. ಆದರೆ 2009ರಲ್ಲೇ ಬಳಕೆ ಕುರಿತು ಸುತ್ತೋಲೆ ಹೊರಡಿಸಲಾಗಿತ್ತು ಎಂದು ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.