ADVERTISEMENT

ಬೀದಿಯಲ್ಲಿ ಭರ್ಜರಿ ಹೆಲ್ಮೆಟ್‌ ವ್ಯಾಪಾರ

ಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿ ಗ್ರಾಹಕ ಸಮುದಾಯ

ಶರತ್‌ ಹೆಗ್ಡೆ
Published 18 ಜನವರಿ 2016, 8:48 IST
Last Updated 18 ಜನವರಿ 2016, 8:48 IST
ಕೊಪ್ಪಳದಲ್ಲಿ ಹೆಲ್ಮೆಟ್‌ ವ್ಯಾಪಾರದ ನೋಟ
ಕೊಪ್ಪಳದಲ್ಲಿ ಹೆಲ್ಮೆಟ್‌ ವ್ಯಾಪಾರದ ನೋಟ   

ಕೊಪ್ಪಳ: ರಾಜ್ಯ ಸರ್ಕಾರ ಹೆಲ್ಮೆಟ್‌ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದರೂ ನಗರದಲ್ಲಿ ಇನ್ನೂ ಹೆಲ್ಮೆಟ್‌ ಧರಿಸುವಿಕೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಆದರೆ, ಹಂತಹಂತವಾಗಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಖರೀದಿಗೆ ಮುಂದಾಗುತ್ತಿದ್ದಾರೆ. ನಗರದ ಮುಖ್ಯ ರಸ್ತೆಯಲ್ಲಿ ನಾಲ್ಕು ಕಡೆ ಬೀದಿ ಬದಿ ಹೆಲ್ಮೆಟ್‌ ವ್ಯಾಪಾರಿಗಳು ಬೀದಿಬದಿ ಬೀಡುಬಿಟ್ಟಿದ್ದಾರೆ. ಒಲ್ಲದ ಮನಸ್ಸಿನಿಂದಲೇ ಹೋಗುವ ಗ್ರಾಹಕ ಅಷ್ಟೋ ಇಷ್ಟೋ ಚೌಕಾಸಿ ಮಾಡಿ, ಹೆಲ್ಮೆಟ್‌ ಹೊತ್ತು ನಡೆಯುತ್ತಾನೆ. ಅದೂ ಒಂದಲ್ಲ ಎರಡು.

ನಗರದಲ್ಲಿ ರಾಯಚೂರು ಜಿಲ್ಲೆಯಿಂದ ಬಂದ ಕರುಣಾಕರ ದಂಪತಿ ಹಲವಾರು ವರ್ಷಗಳಿಂದ ಹೆಲ್ಮೆಟ್‌ ವ್ಯಾಪಾರದಲ್ಲಿ ತೊಡಗಿದ್ದಾರೆ. ನಾಲ್ಕೈದು ದಿನಗಳ ಹಿಂದೆ ನೂರಾರು ಹೆಲ್ಮೆಟ್‌ ತಂದ ಅವರಿಗೀಗ ಭರ್ಜರಿ ವ್ಯಾಪಾರ. ಈ ಯಶಸ್ಸನ್ನು ಅರಿತ ಇತರ ವ್ಯಾಪಾರಿಗಳು ತೆಲಂಗಾಣ, ಹೈದರಾಬಾದ್‌ ಕಡೆಗಳಿಂದ ಲೋಡುಗಟ್ಟಲೆ ಹೆಲ್ಮೆಟ್‌ ತಂದು ಬಿಕರಿಗಿಟ್ಟಿದ್ದಾರೆ. ` 400ರಿಂದ 750ರವರೆಗಿನ ಹೆಲ್ಮೆಟ್‌ಗಳು  ಇವರಲ್ಲಿ ಮಾರಾಟಕ್ಕಿವೆ.

ಇದು ನಿಜವಾಗಿಯೂ ಗುಣಮಟ್ಟ ಮಾನದಂಡಗಳನ್ನು ಪಾಲಿಸಿದೆಯೇ? ಇದರ ಮೇಲಿನ ಐಎಸ್‌ಐ ಮಾರ್ಕ್ ನೈಜವೇ ಎಂದು ಪ್ರಶ್ನಿಸಿದರೆ, ‘ನಾವು ಮಾರ್ಕ್‌ನ್ನು ನಕಲಿ ಮಾಡಬಹುದು. ಆದರೆ, ಹೆಲ್ಮೆಟ್‌ ತಯಾರಿಕೆ ಸಾಧ್ಯವೇ? ದೆಹಲಿಯ ಉತ್ಪಾದಕರಿಂದ ಸಗಟು ದರದಲ್ಲಿ ಖರೀದಿಸುತ್ತೇವೆ. ಅಲ್ಲಿ ಗುಣಮಟ್ಟದ ಮಾನದಂಡಗಳನ್ನು ಪಾಲಿಸದೇ ಮಾಲು ಹೊರಬರುವಂತಿಲ್ಲ. ಹಾಗಾಗಿ ಈ ಐಎಸ್‌ಐ ಮಾರ್ಕ್‌ ಮೇಲೆ ಖಾತ್ರಿ ಕೊಡಬಹುದು’ ಎಂದು ಪ್ರತಿಕ್ರಿಯಿಸಿದರು ಕರುಣಾಕರ.

ಪ್ರತಿಷ್ಟಿತ ಬ್ರಾಂಡ್‌ಗಳ ಹೆಸರಿನಲ್ಲಿ ಇಲ್ಲಿ ಹೆಲ್ಮೆಟ್‌ಗಳನ್ನು ಮಾರಾಟಕ್ಕಿಡಲಾಗಿದೆ.  ಹೆಲ್ಮೆಟ್‌ ಮಾರಾಟದಲ್ಲಿ ಆಟೋಮೋಬೈಲ್‌ ಬಿಡಿ ಭಾಗಗಳ ವಿತರಕರೇನೂ ಹಿಂದೆ ಬಿದ್ದಿಲ್ಲ. ‘ನಮ್ಮಲ್ಲಿ ಬೀದಿಬದಿ ವ್ಯಾಪಾರಿಗಳಿಗಿಂತ ಸ್ವಲ್ಪ ಹೆಚ್ಚು ಬೆಲೆಯಿದೆ. ನಾವು ಗುಣಮಟ್ಟದ ಖಾತ್ರಿ ನೀಡುತ್ತೇವೆ. ಅವರು ಇಂದು ಮಾರಾಟ ಮಾಡಿ ಹೋಗಿಬಿಡುತ್ತಾರೆ. ಗುಣಮಟ್ಟ ಹಾಗೂ ಸುರಕ್ಷತೆ ಬಗ್ಗೆ ಏನು ಖಾತ್ರಿಯಿದೆ’ ಎಂದು ಹೆಲ್ಮೆಟ್‌ ಡೀಲರೊಬ್ಬರು ಪ್ರಶ್ನಿಸಿದರು.

ಜನ ಇದ್ಯಾವುದರ ಬಗೆಗೂ ತಲೆಕೆಡಿಸಿಕೊಂಡಿಲ್ಲ. ಅಗ್ಗದ ದರ, ಹೆಲ್ಮೆಟ್‌ನ ಅಂದ ಚಂದ, ಮೇಲ್ನೋಟಕ್ಕೆ ಕಾಣುವ ಗುಣಮಟ್ಟ, ಕಾನೂನು ಪಾಲನೆಗಾಗಿ ಸಿಕ್ಕ ಹೆಲ್ಮೆಟ್‌ಗೆ ಮುಗಿಬಿದ್ದಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಬೀದಿ ಬದಿ ಹೆಲ್ಮೆಟ್ ವ್ಯಾಪಾರ ಮಾಡುವವರ ವಸ್ತುವಿನ ಗುಣಮಟ್ಟವನ್ನು ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ತಜ್ಞರ ತಂಡ ಪರಿಶೀಲಿಸಿ ಮತ್ತೆ ಮಾರಾಟಕ್ಕೆ ಅನುಮತಿ ಕೊಡಬೇಕು ಎನ್ನುತ್ತಾರೆ ಬೈಕ್‌ ಸವಾರರು.

***
9 ವರ್ಷಗಳಿಂದ ಬೈಕ್‌ ಓಡಿಸುತ್ತಿದ್ದೇನೆ. ಈ ಬಾರಿ ಅನಿವಾರ್ಯವಾಗಿ ಹೆಲ್ಮೆಟ್‌ ಕೊಳ್ಳಲೇಬೇಕಾಗಿದೆ. ಕಡ್ಡಾಯ ನಿಯಮ ಹೇರಿರುವುದು ಬೇಸರ ತಂದಿದೆ.
-ಮೋಹನ,
ಬಿ.ಟಿ. ಪಾಟೀಲ ನಗರ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.