ADVERTISEMENT

`ಬೆಂಬಲಿಗರಿಗೆ ಡೆಡ್‌ಲೈನ್-ಮಾಧ್ಯಮ ಸೃಷ್ಟಿ'

​ಪ್ರಜಾವಾಣಿ ವಾರ್ತೆ
Published 11 ಜನವರಿ 2013, 6:47 IST
Last Updated 11 ಜನವರಿ 2013, 6:47 IST
ಕೇಂದ್ರದ ಮಾಜಿ ಸಚಿವ ಹಾಗೂ ಕೆಜೆಪಿ ಮುಖಂಡ ಬಸವರಾಜ ಪಾಟೀಲ್ ಅನ್ವರಿ ಅವರನ್ನು (ಚಿತ್ರದಲ್ಲಿ ಬಲದಿಂದ ಮೂರನೇ ವ್ಯಕ್ತಿ) ಗಂಗಾವತಿಯಲ್ಲಿ ಗುರುವಾರ ಭೇಟಿ ಮಾಡಿದ ಸಿಂಧನೂರು, ಕಾರಟಗಿ, ಯಲಬುರ್ಗಾದ ಕಾರ್ಯಕರ್ತರು ಶಿವರಾಜ ಪಾಟೀಲ್ ಗುಂಜಳ್ಳಿಗೆ (ಎಡದಿಂದ ಐದನೇ ವ್ಯಕ್ತಿ) ಕೊಪ್ಪಳ ಲೋಕಸಭಾ ಕ್ಷೇತ್ರದ ಉಸ್ತವಾರಿ ವಹಿಸುವಂತೆ ಒತ್ತಾಯಿಸಿದರು
ಕೇಂದ್ರದ ಮಾಜಿ ಸಚಿವ ಹಾಗೂ ಕೆಜೆಪಿ ಮುಖಂಡ ಬಸವರಾಜ ಪಾಟೀಲ್ ಅನ್ವರಿ ಅವರನ್ನು (ಚಿತ್ರದಲ್ಲಿ ಬಲದಿಂದ ಮೂರನೇ ವ್ಯಕ್ತಿ) ಗಂಗಾವತಿಯಲ್ಲಿ ಗುರುವಾರ ಭೇಟಿ ಮಾಡಿದ ಸಿಂಧನೂರು, ಕಾರಟಗಿ, ಯಲಬುರ್ಗಾದ ಕಾರ್ಯಕರ್ತರು ಶಿವರಾಜ ಪಾಟೀಲ್ ಗುಂಜಳ್ಳಿಗೆ (ಎಡದಿಂದ ಐದನೇ ವ್ಯಕ್ತಿ) ಕೊಪ್ಪಳ ಲೋಕಸಭಾ ಕ್ಷೇತ್ರದ ಉಸ್ತವಾರಿ ವಹಿಸುವಂತೆ ಒತ್ತಾಯಿಸಿದರು   

ಗಂಗಾವತಿ: ಬಿಜೆಪಿಯಲ್ಲಿರುವ ಬಿ.ಎಸ್. ಯಡಿಯೂರಪ್ಪ ಬೆಂಬಲಿಗರಿಗೆ ಕೆಜೆಪಿ ಸೇರುವಂತೆ ಪಕ್ಷದಿಂದ ಯಾವುದೆ ಅಂತಿಮ ಗಡುವು ವಿಧಿಸಿಲ್ಲ. ಇದು ಕೇವಲ ಮಾಧ್ಯಮಗಳ ಡೆಡ್‌ಲೈನ್ ಎಂದು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ ಹೇಳಿದರು.

ಗುರುವಾರ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜ. 24ಕ್ಕೆ ಪಕ್ಷದ ಕಾರ್ಯಕಾರಿ ಮತ್ತು ಸಲಹಾ ಸಮಿತಿ (ಕೋರ್ ಕಮಿಟಿ) ಸಭೆ ಇದೆ. ಇದನ್ನೆ ಮಾಧ್ಯಮ ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳು ತಪ್ಪಾಗಿ ಅರ್ಥೈಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಹಾಲಿ ಶಾಸಕ ಪರಣ್ಣ ಮುನವಳ್ಳಿ ಅವರನ್ನು ಕೆಜೆಪಿಗೆ ಆಹ್ವಾನಿಸಲಾಗುತ್ತದೆ. ಅವರು ಬಂದರೆ ಟಿಕೆಟ್ ಅವರಿಗೆ ಅಂತಿಮ. ಆಕಸ್ಮಿಕ ಅವರು ಬಾರದೇ ಹೋದಲ್ಲಿ ಬಿಜೆಪಿ ಸಂಸದ ಶಿವರಾಮಗೌಡರ ಪುತ್ರ ಶಿವರಾಜಗೌಡ ಅಥವಾ ತಾವು ಕಣಕ್ಕಿಳಿಯುವುದಾಗಿ ಹೇಳಿದರು.

ಡರ್ಟಿ ಪಾಲಿಟಿಕ್ಸ್: ಸದ್ಯದ ಬಿಜೆಪಿ ಸರ್ಕಾರದಲ್ಲಿ ಎರಡು ವರ್ಗದ ರಾಜಕಾರಣಿಗಳಿದ್ದಾರೆ. ಒಂದು ಇದ್ದಷ್ಟು ಕಾಲ ಅಧಿಕಾರ ಅನುಭವಿಸಬೇಕು ಎನ್ನುವವರದ್ದು ಒಂದು ವರ್ಗವಾದರೆ, ಇದ್ದದ್ದು ಬಿದ್ದದ್ದು ಬಾಚಿಕೊಂಡು ಎದ್ಹೇಳಬೇಕು ಎಂಬುವರದ್ದು ಎರಡನೇ ಗುಂಪು.

ಮೇಲ್ನೋಟಕ್ಕೆ ಮಾತ್ರ ಬಿಜೆಪಿಯಲ್ಲಿ ಇರುತ್ತೇವೆ ಎನ್ನುವ ಶಿವನಗೌಡ ನಾಯಕ, ರಾಜೂಗೌಡ ಸೇರಿದಂತೆ ಬಹುತೇಕ ಸಚಿವ, ಶಾಸಕರು ಸಾರ್ವಜನಿಕವಾಗಿ ಯಡಿಯೂರಪ್ಪ ಅವರನ್ನು ಶ್ಲಾಘಿಸುತ್ತಾರೆ. ಅತ್ತ ಬಿಜೆಪಿ ಇತ್ತ ಕೆಜೆಪಿ ಎಂದು ಜಪಿಸುತ್ತಾ ಹೊಲಸು ರಾಜಕಾರಣ ಮಾಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಸರ್ಕಾರ ಉರುಳಿದ ನಂತರ ಬಿಜೆಪಿ ಪಕ್ಷದ ಅಸ್ತಿತ್ವವೇ ಅಯೋಮಯವಾಗಲಿದೆ. ಬಹುತೇಕ ಶಾಸಕ, ಸಚಿವರು ಕಾಂಗ್ರೆಸ್ ಇಲ್ಲವೆ ಕೆಜೆಪಿಯತ್ತ ವಾಲುತ್ತಾರೆ ಕಾದು ನೋಡಿ ಎಂದು ಬಸವರಾಜ ಪಾಟೀಲ್ ಅನ್ವರಿ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.