ADVERTISEMENT

ಬೆಲೆ ಏರಿಕೆ ಖಂಡಿಸಿ ಆರ್‌ವೈಎಫ್‌ಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 9:05 IST
Last Updated 7 ಫೆಬ್ರುವರಿ 2012, 9:05 IST

ಕೊಪ್ಪಳ: ಭ್ರಷ್ಟಾಚಾರ, ಬೆಲೆ ಏರಿಕೆ ಹಾಗೂ ಭೂ ಕಬಳಿಕೆಯನ್ನು ಖಂಡಿಸಿ ಭಾರತ ಕ್ರಾಂತಿಕಾರಿ ಯುವ ಜನ ಒಕ್ಕೂಟದ (ಆರ್‌ವೈಎಫ್‌ಐ) ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಆಶ್ರಯ ಕಾಲೋನಿಯಿಂದ ಗಡಿಯಾರ ಕಂಬದ ವರೆಗೆ ಮೆರವಣಿಗೆ ನಡೆಸಿದ ಸಂಘಟನೆಯ ಕಾರ್ಯಕರ್ತರು ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
 
ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಬಿ.ಬಸವಲಿಂಗಪ್ಪ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ ಜನರ ಜೀವನವನ್ನು ದುಸ್ತರಗೊಳಿಸಿವೆ. ಅಭಿವೃದ್ಧಿ ಹೆಸರಿನಲ್ಲಿ ಆಳುವ ಸರ್ಕಾರಗಳು ಜಾರಿಗೆ ತರುತ್ತಿರುವ ಉದಾರವಾದಿ ನೀತಿಗಳೇ ಇಂತಹ ಸ್ಥಿತಿಗೆ ಕಾರಣ ಎಂದು ಟೀಕಿಸಿದರು.

ಕಾರ್ಪೋರೇಟ್ ಕುಟುಂಬಗಳ ಹಾಗೂ ರಾಜಕಾರಣಿಗಳ ಅಕ್ರಮ ಆಸ್ತಿಯನ್ನು ಕೂಡಲೇ ಜಪ್ತಿ ಮಾಡಬೇಕು. ಎಲ್ಲ ಹಂತದಲ್ಲಿ ಬೇರು ಬಿಟ್ಟಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಜನರು ಬೀದಿಗಿಳಿದು ಹೋರಾಟ ನಡೆಸಬೇಕು ಎಂದರು.ಸಂಘಟನೆಯ ಜಿಲ್ಲಾ ಅಧ್ಯಕ್ಷ ರವಿ ಕಡೇಮನಿ, ಜಿಲ್ಲಾ ಕಾರ್ಯದರ್ಶಿ ತುಳಜಪ್ಪ ಮತ್ತಿತರರು ನೇತೃತ್ವ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.