ADVERTISEMENT

ಭತ್ತದ ಕಣ ಶಾಲಾ–ಕಾಲೇಜು ಮೈದಾನ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 9:30 IST
Last Updated 10 ಡಿಸೆಂಬರ್ 2013, 9:30 IST

ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆ ಆಶ್ರಿಯಿತ ತಾಲ್ಲೂಕಿನ ನೀರಾವರಿ ಪ್ರದೇಶದ ನಾಟಿ ಮಾಡಿದ್ದ ಭತ್ತದ ಬೆಳೆ ಈಗ ಕೊಯ್ಲು ಹಂತಕ್ಕೆ ಬಂದಿದೆ. ಆದರೆ ರೈತರು ಕುಯ್ಲು ಮಾಡಿದ ಧಾನ್ಯದ ಸಂಗ್ರಹಕ್ಕೆ ಸೂಕ್ತ ಕಣದ ವ್ಯವಸ್ಥೆ ಇಲ್ಲದ್ದರಿಂದಾಗಿ ಬಯಲಿನ ಆವರಣವೇ ಕಣವಾಗಿ ಮಾರ್ಪಡುತ್ತಿದೆ.

ಗಂಗಾವತಿಯಿಂದ ಕನಕಗಿರಿ ರಸ್ತೆ ಮಾರ್ಗದಲ್ಲಿ ಸಂಚರಿಸಿದರೆ ರಸ್ತೆ­ಯೂದ್ದಕ್ಕೂ ಹೇರೂರು, ಕೇಸರಹಟ್ಟಿ ಸೇರಿದಂತೆ ನಾನಾ ಗ್ರಾಮಗಳಲ್ಲಿನ ರೈತರು, ಕೊಯ್ದ ಭತ್ತವನ್ನು ರಸ್ತೆಯ ಬದಿಗೆ ತಂದು ಸುರಿದು ಬಳಿಕ ಚೀಲಗಳಲ್ಲಿ ತುಂಬಿ ಸಾಗಿಸುತ್ತಿರುವುದು ಕಂಡು ಬರುತ್ತಿದೆ.

‘ಕೃಷಿ ಉತ್ಪನ್ನ ಮಾರುಕಟ್ಟೆ ಗ್ರಾಮೀಣ ಭಾಗದಲ್ಲಿ ಎರಡು ದಶಕಗ­ಳಿಂದಲೂ ಧಾನ್ಯ ಸಂಗ್ರಹಣ ಕಟ್ಟೆ ಅಥವಾ ಕಣಗಳನ್ನು ನಿರ್ಮಿಸುತ್ತಿದೆ. ಆದರೆ ಎಪಿಎಂಸಿ ನಿರ್ಮಿಸುತ್ತಿರುವ ಕಣ ಅವೈಜ್ಞಾನಿಕ ಹಾಗೂ ರೈತರ ಅನುಕೂಲಕ್ಕೆ ಪೂರಕವಾಗಿಲ್ಲ’ ಎಂದು ಬಾಪಿರೆಡ್ಡಿಕ್ಯಾಂಪಿನ ರೈತ ಡಿ. ಸಾಂಬಮೂರ್ತಿ ಹೇಳಿದರು.  

ಪರಿಣಾಮ ರೈತರು ಪ್ರತಿ ವರ್ಷವೂ ಎರಡು ಬಾರಿ ಬೆಳೆದ ಭತ್ತವನ್ನು ರಸ್ತೆ ಬದಿ ತಂದು ಸುರಿದು ಸಂಗ್ರಹಿಸುತ್ತಾರೆ. ಬಳಿಕ ತೂಕ ಮಾಡಿ ಚೀಲಕ್ಕೆ ತುಂಬುತ್ತಾರೆ. ರಸ್ತೆ ಬದಿಯಿಂದಲೇ ವಾಹನಗಳ ಮೂಲಕ ಮಾರುಕಟ್ಟೆಗೆ ಸಾಗಿಸುತ್ತಾರೆ.  ಕೇವಲ ರಸ್ತೆ ಮಾತ್ರವಲ್ಲ ಗ್ರಾಮದ ಸಾರ್ವಜನಿಕ ಸ್ಥಳ, ಗ್ರಾಮ ಪಂಚಾಯಿತಿ ಆವರಣ, ಸರ್ಕಾರಿ ಕಚೇರಿಗಳ ಮುಂದೆಯೂ ನೆಲ್ಲಿನ ರಾಶಿ ಕಂಡು ಬರುತ್ತದೆ. ಕೆಲ ಬಾರಿ ಶಾಲಾ–ಕಾಲೇಜಿನ ಆವರಣದಲ್ಲಿಯೂ ರೈತರು ಭತ್ತ ಸುರಿದು ರಾಶಿ ಮಾಡುತ್ತಿರುವುದು ಕಂಡು ಬರುತ್ತದೆ.

ಹೊಲಗದ್ದೆಗಳಲ್ಲಿ ಸೂಕ್ತ ಕಣದ ವ್ಯವಸ್ಥೆ ಇಲ್ಲದ್ದರಿಂದಾಗಿ ರೈತರು ರಸ್ತೆಯ ಬದಿ ಹಾಗೂ ಸಾರ್ವಜನಿಕ ಬಯಲು ಆವರಣದ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಸಾರಿಗೆ ಸಂಸ್ಥೆ ವಾಹನ ಹಾಗೂ ಸಾರ್ವಜನಿಕರ ಓಡಾಟಕ್ಕೆ ಅಡಚಣೆ ಉಂಟಾಗುತ್ತಿದೆ. ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ರೈತರ ಸಂಕಷ್ಟ ದೂರ ಮಾಡುವ ನಿಟ್ಟಿನಲ್ಲಿ ಸಾಮೂಹಿಕ ಬಳಕೆಗೆ ಉಪಯೋಗವಾಗುವ ರೀತಿ­ಯಲ್ಲಿ ಕಣಗಳನ್ನು ನಿರ್ಮಿಸಬೇಕಿದೆ ಎಂದು ಬಸವಪಟ್ಟಣದ ರೈತರಾದ ಶರಣಪ್ಪ ಮಾಲಿಪಾಟೀಲ್‌, ಶೇಖರಗೌಡ ತಗ್ಗಿನಮನಿ ಇತರರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.