ADVERTISEMENT

ಭಾಗ್ಯನಗರದಲ್ಲೇ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 7:00 IST
Last Updated 22 ಸೆಪ್ಟೆಂಬರ್ 2011, 7:00 IST

ಕೊಪ್ಪಳ: ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಈ ಉಪಚುನಾವಣೆಯಲ್ಲಿ ಗೆಲ್ಲುವುದು ಖಚಿತ. ಫಲಿತಾಂಶ ಪ್ರಕಟಗೊಂಡ ನಂತರ ಇದೇ ಗ್ರಾಮದಲ್ಲಿ ವಿಜಯೋತ್ಸವ ಹಮ್ಮಿಕೊಂಡು ನಿಮ್ಮಂದಿಗೆ ಸಂಭ್ರಮಿಸುವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸಹ ವಿಜಯೋತ್ಸವದಲ್ಲಿ ಪಾಲ್ಗೊಳ್ಳುವರು. ಕ್ಷೇತ್ರದ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ವಿವಿಧ ಕಾರ್ಯಗಳ ಕುರಿತು ಅವರಿಂದ ಸ್ಪಷ್ಟ ಭರವಸೆ ಕೊಡಿಸುವೆ ಎಂದು ಹೇಳಿದರು.
ಅವರು ತಾಲ್ಲೂಕಿನ ಭಾಗ್ಯನಗರ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಹಣ, ಮದ್ಯ ಹಂಚುವ ಮೂಲಕ ಬಿಜೆಪಿ ಚುನಾವಣೆ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದ್ದಾರೆ. ಆದರೆ, ಕಾಂಗ್ರೆಸ್‌ನವರು ಹಣ-ಹೆಂಡ ಹಂಚಿಲ್ಲವೇ. ನೀವೇನು `ಕತ್ತಲೆ ರಾತ್ರಿ~ ಮಾಡಿಲ್ಲವೇ ಎಂದೂ ಪ್ರಶ್ನಿಸಿದರು.

ಒಂದೇ ವೇದಿಕೆಯಲ್ಲಿ ಎಲ್ಲ ಪಕ್ಷದವರೂ ಕುಳಿತು ಈ ಬಗ್ಗೆ ಚರ್ಚಿಸೋಣ. ಎಲ್ಲರೂ ಕ್ಷೇತ್ರ ತೊರೆಯೋಣ. ಆಯಾ ಪಕ್ಷಗಳ ಅಭ್ಯರ್ಥಿಗಳು, ಮತದಾರರನೇ ಚುನಾವಣೆ ನಡೆಸಲಿ. ಫಲಿತಾಂಶ ಕಾದು ನೋಡೋಣ ಎಂದೂ ಅವರು ಸವಾಲು ಹಾಕಿದರು.

ಅಭ್ಯರ್ಥಿ ಸಂಗಣ್ಣ ಕರಡಿ ಮಾತನಾಡಿ, ನನ್ನ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಸೇರಿದ್ದೇನೆಯೇ ಹೊರತು ಹಣಕ್ಕಾಗಿ ನನ್ನನ್ನು ಮಾರಾಟ ಮಾಡಿಕೊಂಡಿಲ್ಲ ಎಂದು ಹೇಳಿದರು.

ಈ ಮಾತನ್ನು ಆತ್ಮಸಾಕ್ಷಿಯಾಗಿ ಹೇಳುತ್ತಿದ್ದೇನೆ. ನನ್ನ ಚಾರಿತ್ರ್ಯ ನಿಮಗೆ ಗೊತ್ತು. ನೀವೇ ನನ್ನನ್ನು ಬೆಳೆಸಿದ್ದು. ಸಚಿವನಾಗುವ ಆಸೆ ಸಹ ಇಲ್ಲ. ಆದರೆ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಕನಸು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುರಿತು ವಿರೋಧ ಪಕ್ಷದವರು ಹಗುರವಾಗಿ ಮಾತನಾಡುತ್ತಿದ್ದು, ಇದಕ್ಕೆ ಈ ಉಪಚುನಾವಣೆಯೇ ತಕ್ಕ ಉತ್ತರ ನೀಡಲಿದೆ ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಯಡಿಯೂರಪ್ಪ ಅವರನ್ನು ನಾನು ಮಾಜಿ ಮುಖ್ಯಮಂತ್ರಿ ಎಂಬುದಾಗಿ ಕರೆಯುವುದಿಲ್ಲ. ಅವರು ಈಗಲೂ ನಮ್ಮ ಮುಖ್ಯಮಂತ್ರಿ. ಅವರು ಮಾಜಿ ಆಗುವುದಿಲ್ಲ ಎಂದರು.

ಸಣ್ಣ ಕೈಗಾರಿಕೆಗಳ ಸಚಿವ ರಾಜೂಗೌಡ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಹೆಸರಿನಿಂದಲೇ ಈ ಉಪಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಲಿದೆ ಎಂದರು.

ಜವಳಿ ಸಚಿವ ವರ್ತೂರು, ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಮಾತನಾಡಿದರು.
ಬಿಜೆಪಿ ಮುಖಂಡರಾದ ರಾಘವೇಂದ್ರ ಪಾನಘಂಟಿ, ಅಂದಣ್ಣ ಅಗಡಿ, ಶಾಸಕ ಬೇಳೂರು ಗೋಪಾಲಕೃಷ್ಣ, ತುಂಗಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ, ಸಂಗಪ್ಪ ವಕ್ಕಳದ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.