ಕೊಪ್ಪಳ: ಪಕ್ಷದ ಗೆಲುವಿನ ಹಿತದೃಷ್ಟಿಯಿಂದ ಭಿನ್ನಾಭಿಪ್ರಾಯ ಬದಿಗಿಟ್ಟು ಕಾರ್ಯಕರ್ತರು ಒಟ್ಟಾಗಿ ಶ್ರಮಿಸಬೇಕು ಎಂದು ಬುಧವಾರ ಇಲ್ಲಿ ನಡೆದ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವಿವಿಧ ಮುಖಂಡರು ಕರೆ ನೀಡಿದರು.
 
 ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಮಾ. 25ರಂದು ಪಕ್ಷದ ಅಭ್ಯರ್ಥಿ ಕೆ.ಬಸವರಾಜ ಹಿಟ್ನಾಳ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರೂ ಅಂದು ಬರಲಿದ್ದಾರೆ. ಕಾರ್ಯಕರ್ತರು ನಗರದಲ್ಲಿ ಬೈಕ್ ರ್‍ಯಾಲಿ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
 
 ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಲೋಕಸಭೆಯನ್ನೇ ನೋಡದ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಚಾಯ್‌ಪೆ ಚರ್ಚಾ ಹಮ್ಮಿಕೊಂಡು ಪ್ರಚಾರ ನಡೆಸುತ್ತಿದೆ. ಚಹಾ ಕುಡಿದರೆ ಹೊಟ್ಟೆ ತುಂಬುತ್ತದೆಯೇ? ಎಲ್ಲ ದೃಷ್ಟಿಯಿಂದಲೂ ಬಿಜೆಪಿಯವರು ವಿಶ್ವಾಸದ್ರೋಹಿಗಳು ಎಂದು ಚುಚ್ಚಿದರು.
 ರಾಯರಡ್ಡಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ. ಸ್ಪಷ್ಟ ಲೆಕ್ಕಾಚಾರದ ಆಧಾರದ ಮೇಲೆ ಹೇಳುತ್ತೇನೆ. ಇಲ್ಲಿ ಚುನಾವಣೆ ಉಳ್ಳವರು– ಇಲ್ಲದವರು ಎಂಬ ವರ್ಗದ ಆಧಾರದಲ್ಲಿ ನಡೆಯುತ್ತದೆಯೇ ವಿನಃ ಜಾತಿ ಆಧಾರದಲ್ಲಿ ಅಲ್ಲ. ಈ ಹಿಂದಿನ ಚುನಾವಣೆಗಳ ಫಲಿತಾಂಶ ಇದಕ್ಕೆ ನಿದರ್ಶನವಾಗಿವೆ. ಲಿಂಗಾಯತರಲ್ಲಿ ಕಡುಬಡವರಿದ್ದಾರೆ. ಕುರುಬರಲ್ಲಿ ಶ್ರೀಮಂತರಿದ್ದಾರೆ. ಒಂದು ಕುರಿಗೆ ₨5 ಸಾವಿರ ಬೆಲೆ ಇದೆ ಎಂದು ಅಭ್ಯರ್ಥಿ ಬಸವರಾಜ ಹಿಟ್ನಾಳ್ ಅವರತ್ತ ಲಘುವಾಗಿ ಕುಟುಕಿದರು.
 
 ಈಗ ಬೇರೆ ಯಾವುದೇ ಬಂಡವಾಳ ಇಲ್ಲದವರು ಜಾತಿ ಲೆಕ್ಕಾಚಾರದ ಮಾತನಾಡುತ್ತಿದ್ದಾರೆ. ಶೇ 99ರಷ್ಟು ನರೇಂದ್ರಮೋದಿ ಅವರು ಪ್ರಧಾನಿ ಆಗಲಾರರು. ವಾರಣಾಸಿಯಲ್ಲಿ ಅರವಿಂದ ಕೇಜ್ರಿವಾಲ್ ವಿರುದ್ಧ ಸೋತರೂ ಆಶ್ಚರ್ಯವಿಲ್ಲ ಎಂದು ಹೇಳಿದರು.
 
 ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, ನಮಗೇನಾದರೂ ಗೌರವ ಇಲ್ಲ ಎಂದು ಅನಿಸಿದರೆ ದಯವಿಟ್ಟು ಪಕ್ಷ ಬಿಟ್ಟು ಬೇರೆಡೆಗೆ ಹೋಗಿ. ಆದರೆ ಪಕ್ಷದಲ್ಲಿದ್ದುಕೊಂಡು ದ್ರೋಹ ಮಾಡಬೇಡಿ ಎಂದು ಕೋರಿದರು.
 
 ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ್ ಮಾತನಾಡಿ, ಪಕ್ಷ ಗೆದ್ದಿದ್ದರೆ ಕಾಂಗ್ರೆಸ್‌ನಿಂದ, ಸೋತಿದ್ದರೆ ಮುಖಂಡರ ಲೋಪಗಳಿಂದ ಎಂದರು.
 
 ಅಭ್ಯರ್ಥಿ ಕೆ.ಬಸವರಾಜ ಹಿಟ್ನಾಳ್, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಬಿ.ಎಂ.ನಾಗರಾಜ್, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಜಿ.ಪಂ. ಅಧ್ಯಕ್ಷ ಟಿ.ಜನಾರ್ದನ ಹುಲಿಗಿ, ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರ, ಇಂದಿರಾ ಬಾವಿಕಟ್ಟಿ ಇದ್ದರು.
 
 ಸಭಾಂಗಣದ ಹೊರಗೆ ಅಪಸ್ವರ
ಕುಷ್ಟಗಿಯ ಮಾಜಿ ಶಾಸಕ ಹಸನ್ ಸಾಬ್ ದೋಟಿಹಾಳ ಅವರು ವೇದಿಕೆ ಏರಿದ್ದನ್ನು ವಿರೋಧಿಸಿ ಕುಷ್ಟಗಿಯ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಸಭಾಂಗಣದ ಹೊರಗೆ ಪ್ರತಿಭಟನೆ ನಡೆಸಿದರು. ದೋಟಿಹಾಳ ಅವರು ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಬಿಜೆಪಿ ಪರ ಕೆಲಸ ಮಾಡಿದ್ದರು. ಆದ್ದರಿಂದ ಅವರು ವೇದಿಕೆಯಲ್ಲಿರುವುದು ಸೂಕ್ತವಲ್ಲ ಎಂದು ಕುಷ್ಟಗಿಯ ಕಾಂಗ್ರೆಸ್ ಮುಖಂಡ ಯಲ್ಲಪ್ಪ ಬಾಗಳಿ (ಅಮರೇಗೌಡ ಬಯ್ಯಾಪುರ ಬೆಂಬಲಿಗರು) ಅವರು ತಮ್ಮ ಬೆಂಬಲಿಗರೊಡನೆ ಸೇರಿ ಸಭೆ ಬಹಿಷ್ಕರಿಸಿ ಹೊರ ನಡೆದರು. ಹೊರಗೆ ಮಾಧ್ಯಮದವರಿಗೆ ಹೇಳಿಕೆ ಕೊಡುತ್ತಿದ್ದಾಗ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಬಂದು ಕಾರ್ಯಕರ್ತರನ್ನು ಸಮಾಧಾನಿಸಲು ಯತ್ನಿಸಿದರು. ಈ ಸಂದರ್ಭ ಕೆಲಕಾಲ ನೂಕಾಟ ತಳ್ಳಾಟ ನಡೆದು ಕೊನೆಗೂ ಪರಿಸ್ಥಿತಿ ತಿಳಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.