ADVERTISEMENT

ಮಂಗಳಮುಖಿಯರ ಅಭಿನಯದ ಮೂರನೇ ಕಣ್ಣು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 9:32 IST
Last Updated 20 ಡಿಸೆಂಬರ್ 2017, 9:32 IST
ಮೂರನೇ ಕಣ್ಣು ಚಿತ್ರೀಕರಣದ ನೋಟ
ಮೂರನೇ ಕಣ್ಣು ಚಿತ್ರೀಕರಣದ ನೋಟ   

ಅನಿಲ್‌ ಬಾಚನಹಳ್ಳಿ

ಕೊಪ್ಪಳ: ಮಂಗಳಮುಖಿಯರು ಎಂದರೆ ಬರೀ ಕೆಟ್ಟವರಲ್ಲ ನಮ್ಮಲ್ಲಿಯೂ ಒಳ್ಳೆಯ ಗುಣಗಳು ಮತ್ತು ಮನಸ್ಸು ಇದೆ ಅದನ್ನು ಅರ್ಥಮಾಡಿಕೊಳ್ಳುವ ಸಮಾಜ ನಿರ್ಮಾಣ ಆಗಬೇಕಿದೆ. ನಮಗೆ ಮನೆ ಬಾಡಿಗೆ ಕೊಡಲು ಹಿಂದೆ ಮುಂದು ನೋಡಿ, ಬಾಡಿಗೆ ಕೊಟ್ಟ 8 ದಿನ, ಒಂದು ತಿಂಗಳ ಕಾಲ ಸಮ್ಮನಿದ್ದು, ಬಳಿಕ ಮನೆ ಬಿಡಿಸುತ್ತಾರೆ. ಹೀಗೆ ದಿನನಿತ್ಯ ಸಮಾಜದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದೇವೆ... ಕ್ಯಾಮೆರಾ ಮುಂದೆ ಹೀಗೊಂದು ಡೈಲಾಗ್‌ ಹೇಳಿ ಅಭಿನಯಿಸಿದವರು ಅದೇ ಸಮಸ್ಯೆ ಎದುರಿಸುತ್ತಿರುವ ಮಂಗಳಮುಖಿ.

ಹೌದು ಮಂಗಳಮುಖಿಯರ ಜೀವನಾಧಾರಿತ ಅನೇಕ ಚಲನಚಿತ್ರಗಳು ಹಾಗೂ ಕಿರುಚಿತ್ರಗಳು ಮೂಡಿಬಂದಿವೆ. ಅದಕ್ಕೆ ತಾಜಾ ಉದಾಹರಣೆ ಎಂದರೆ ‘ನಾನು ಅವನಲ್ಲ ಅವಳು’ ಚಿತ್ರ. ಈ ಚಿತ್ರ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. ಅದರಲ್ಲಿ ಮಂಗಳಮುಖಿಯ ಪಾತ್ರದಲ್ಲಿ ಅಭಿನಯಿಸಿದ ಸಂಚಾರಿ ವಿಜಯ್‌ ಅವರು ಕೂಡ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಅದೇ ರೀತಿಯ ಕಥೆಯುಳ್ಳ ಕಿರುಚಿತ್ರವೊಂದು ಕೊಪ್ಪಳದಲ್ಲಿ ನಿರ್ಮಾಣದ ಹಂತದಲ್ಲಿದೆ.

ADVERTISEMENT

ಈ ಚಿತ್ರದಲ್ಲಿ ಮಂಗಳಮುಖಿಯೇ ನಾಯಕಿಯಾಗಿ ನಟಿಸಿದ್ದಾರೆ. ಮೂವರು ಮಂಗಳಮುಖಿಯರು ಸಹನಟಿಯರಾಗಿದ್ದಾರೆ. ಕೊಪ್ಪಳದ ಉತ್ಸಾಹಿ ಯುವಕರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಪೋಲಿ ಹುಡುಗರು ನಾವು ಬಿಕ್ಷಾಟನೆಗೆ ಹೋದಾಗ ಕಾಡಿಸುವುದು, ಹೀಯಾಳಿಸುವುದು, ಕೀಳಾಗಿ ನೋಡಿ ನಮ್ಮನ್ನು ಅವಮಾನಿಸುತ್ತಿರುತ್ತಾರೆ. ಅಂತಹ ಶ್ರೀಮಂತ ಪೋಲಿ ಹುಡುಗನ ಜೀವ ಉಳಿಸುವ ಮಂಗಳಮುಖಿಯ ಭಾವನೆ ಮತ್ತು ಒಳ್ಳೆಯ ಮನಸ್ಸನ್ನು ಅರ್ಥಮಾಡಿಕೊಂಡು ತನ್ನೆಲ್ಲಾ ಶ್ರೀಮಂತಿಕೆಯನ್ನು ತೊರೆದು ಮಂಗಳಮುಖಿಯನ್ನೇ ಪ್ರೀತಿಸಿ, ಮದುವೆಯಾಗುವ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ರವಾನಿಸುವುದೇ ಚಿತ್ರದ ಆಶಯ. ಯಾವ ರೀತಿಯಾಗಿ ಕಿರುಚಿತ್ರದ ನಾಯಕ, ಪೋಲಿ ಹುಡುಗನ ಮನಪರಿವರ್ತನೆ ಆಗುತ್ತದೆ. ಮಂಗಳಮುಖಿಯರು ಅನುಭವಿಸುವ ಕಷ್ಟಗಳೇನು ಎಂಬ ಬಗ್ಗೆ ಕಿರುಚಿತ್ರದಲ್ಲಿ ಕಾಣಬಹುದು ಎನ್ನುತ್ತಾರೆ ಚಿತ್ರದ ನಾಯಕಿ ಗಂಗಾ.

ಈ ಕಿರುಚಿತ್ರಕ್ಕೆ ಉತ್ತಮ ಗುಣಮಟ್ಟದ ಕ್ಯಾಮೆರಾ ಬಳಸಲಾಗಿದೆ. ಸ್ಥಳೀಯವಾಗಿ ನಿರ್ಮಾಣ ಆಗುತ್ತಿರುವ ‘ನಮ್ಮ ಸಂಸ್ಕೃತಿ’ ಎಂಬ ಕಿರುಚಿತ್ರ ಕೆಲ ದಿನಗಳ ಹಿಂದೆ ಚಿತ್ರೀಕರಣ ಪೂರ್ಣಗೊಂಡಿದೆ. ಉತ್ತಮ ಕಥೆ, ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸುವ ಕಿರುಚಿತ್ರಗಳಿಗೆ ಕ್ಯಾಮೆರಾ ಹಿಡಿದಿರುವ ಪ್ರಕಾಶ ಮುಳವಳ್ಳಿ ಅವರೇ ಈ ಚಿತ್ರಕ್ಕೆ ಆಸಕ್ತಿ ವಹಿಸಿದ್ದಾರೆ.

ಪರಮೇಶ್ವರ(ಶಿವ) ಮತ್ತು ಪಾರ್ವತಿ ಎರಡು ದೇಹ ಮತ್ತು ಭಾವನೆಗಳನ್ನು ಹೊಂದಿದ ದೇವರು ಅರ್ಧನಾರೀಶ್ವರ. ಹಾಗಾಗಿಯೇ ಮಂಗಳಮುಖಿಯರು ಅರ್ಧನಾರೀಶ್ವರನನ್ನು ಪೂಜಿಸುತ್ತಾರೆ. ಸಮಾಜದಲ್ಲಿ ಮಂಗಳಮುಖಿಯರು ಎಂದರೆ ಬೇರೆ ರೀತಿಯಲ್ಲಿಯೇ ಕಾಣುತ್ತಾರೆ. ಆದರೆ ಕಾಣದೇ ಇರುವ ಒಳಮನಸ್ಸಿನ ಕಣ್ಣು ತೆರೆದು ನೋಡಿದರೇ ಅವರು ಸಾಮಾನ್ಯವಾಗಿಯೇ ಕಾಣುತ್ತಾರೆ. ಅದಕ್ಕಾಗಿ ಈ ಕಿರುಚಿತ್ರಕ್ಕೆ ಮೂರನೇ ಕಣ್ಣು ಎಂದು ಹೆಸರಿಡಲಾಗಿದೆ ಎಂದರು ಚಿತ್ರದ ನಿರ್ದೇಶಕ, ನಾಯಕ ಕೆ.ಎನ್‍.ನಜೀರ್‍ .

ಅಮರೇಶ್ವರ ಸಿನಿ ಪ್ರೊಡಕ್ಷನ್ಸ್ ಬ್ಯಾನರ್‍ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ. ಈ ಕಿರುಚಿತ್ರಕ್ಕೆ ಸುಮಾರು ₹  80 ಸಾವಿರ ವ್ಯಯಿಸಲಾಗಿದೆ. ಇದರಲ್ಲಿ 20 ಜನ ಯುವಕರು, 3 ಜನ ಮಂಗಳಮುಖಿಯರು ಅಭಿನಯಿಸಿದ್ದಾರೆ. ಜಿಲ್ಲೆಯ ಭಾಗ್ಯನಗರ, ಮುನಿರಾಬಾದ್‍, ಭಾನಾಪುರ, ಕೊಪ್ಪಳ, ಕಾಮನೂರಿನಲ್ಲಿ ಚಿತ್ರೀಕರಣ ನಡೆದಿದೆ. ಜ. 14ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ನಜೀರ್‌ ಮಾಹಿತಿ ನೀಡಿದರು.

ಇದು ನಮ್ಮ ಸಮುದಾಯಕ್ಕೆ ಸಂಬಂಧಿಸಿದ ಕಥೆ ಆಗಿದೆ. ಅದಕ್ಕಾಗಿ ಕಿರುಚಿತ್ರದ ನಿರ್ದೇಶಕರು ಕಥೆ ಹೇಳಿದ ತಕ್ಷಣ ಅಭಿನಯಿಸಲು ಒಪ್ಪಿಕೊಂಡಿದ್ದೇವೆ. ನಮ್ಮ ಸಮುದಾಯದಲ್ಲೂ ಒಳ್ಳೆಯವರು, ಕೆಟ್ಟವರಿದ್ದಾರೆ. ಅಂಥವರಿಗೆ ಕಿರುಚಿತ್ರ ಒ‍ಳ್ಳೆಯ ಮಾರ್ಗದರ್ಶನ ನೀಡಲಿದೆ ಎಂದು ಕಿರುಚಿತ್ರದ ನಾಯಕಿ, ಮಂಗಳಮುಖಿ ಗಂಗಾ ಹೇಳಿದರು.

ಮಂಗಳಮುಖಿಯರಾದ ಗಂಗಾ(ನಾಯಕಿ), ರೋಶನಿ, ರಾಧಿಕಾ, ಸ್ಥಳೀಯ ಕಲಾವಿದರಾದ ಮಂಜು ಕುಕನೂರು, ಶಿವಕುಮಾರ್‍ ಆಡೂರ, ವಿನೋದ್‍, ಸ್ವಾಮಿ, ಸಲೀಂ ಭಾನಾಪುರ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ.

* * 

ಇದು ನಮ್ಮ ಸಮುದಾಯಕ್ಕೆ ಸಂಬಂಧಿಸಿದ ಕಥೆ ಆಗಿದೆ. ಅದಕ್ಕಾಗಿ ಕಿರುಚಿತ್ರದ ನಿರ್ದೇಶಕರು ಕಥೆ ಹೇಳಿದ ತಕ್ಷಣ ಅಭಿನಯಿಸಲು ಒಪ್ಪಿಕೊಂಡಿದ್ದೇವೆ.
ಗಂಗಾ, ಚಿತ್ರದ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.