ADVERTISEMENT

ಮತ್ತೆ ಶುರುವಾದ ಪಡಿತರ ಚೀಟಿ ಪಡಿಪಾಟಲು

ಆಹಾರ ಇಲಾಖೆ ಕಚೇರಿ ಮುಂದೆ ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 6:00 IST
Last Updated 5 ಜುಲೈ 2013, 6:00 IST

ಗಂಗಾವತಿ: ಕಳೆದ ಹತ್ತಾರು ದಿನಗಳಿಂದ ತಣ್ಣಗಿದ್ದ ಪಡಿತರ ಚೀಟಿದಾರರ ಪಡಿಪಾಟಲು ಬುಧವಾರದಿಂದ ಮತ್ತೆ
ಆರಂಭವಾಗಿದ್ದು, ತಹಶೀಲ್ದಾರ್  ಕಾರ್ಯಾಲಯದಲ್ಲಿರುವ ಆಹಾರ ಇಲಾಖೆ ಕಚೇರಿಯ ಮುಂದೆ ನೂಕುನುಗ್ಗಲು ಉಂಟಾಗಿತ್ತು.

ನಗರದ ವಿವಿಧ ವಾರ್ಡ್ ಸೇರಿದಂತೆ ತಾಲ್ಲೂಕಿನ ನಾನಾ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆ ಮತ್ತು ಪುರುಷರು ಏಕಕಾಲಕ್ಕೆ ಕಚೇರಿಯ ಮುಂದೆ ಜಮಾಯಿಸಿದ್ದರಿಂದ ತಹಶೀಲ್ ಕಚೇರಿಯ ಇತರ ಕಾರ್ಯಾಲಯಗಳಿಗೆ ಬರುವ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿತ್ತು.

ಬೆಳಗ್ಗೆ 8ಗಂಟೆಯಿಂದಲೆ ವೃದ್ಧರು, ಮಕ್ಕಳು, ಮರಿಗಳೊಂದಿಗೆ ಆಗಮಿಸಿದ್ದ ಮಹಿಳೆಯರು ಸರದಿ ಸಾಲಲ್ಲಿ ನಿಂತಿದ್ದರು. ಕೂರುವ ಆಸನ, ಕುಡಿಯುವ ನೀರು, ಗಾಳಿ ಯಾವುದೊಂದು ಸೌಲಭ್ಯವಿಲ್ಲದ್ದರಿಂದ ಮಹಿಳೆಯರು ಪರಿತಪಿಸುತ್ತಿದ್ದರು. 

ಅಧಿಕಾರಿಗಳ ಬೇಜವಾಬ್ದಾರಿಗೆ ಆಕ್ರೋಶಗೊಂಡ ನಾಗರಿಕರು, `ಇಷ್ಟು ಸಂಖ್ಯೆಯ ಜನ ಪಡಿತರ ಚೀಟಿಗಾಗಿ ಬರುತ್ತಿರುವ ಬಗ್ಗೆ ಮಾಹಿತಿಯಿದ್ದರೂ ಕಂಪ್ಯೂಟರ್, ಸಿಬ್ಬಂದಿಗಳ ಸಂಖ್ಯೆ ಹೆಚ್ಚಿಸುವತ್ತ ಅಧಿಕಾರಿಗಳು ಗಮನ ಹರಿಸಿಲ್ಲ' ಎಂದು ಆರೋಪಿಸಿದರು.

`ಗ್ರಾಮೀಣ ಭಾಗದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ ಬಹುತೇಕ ಗ್ರಾಮಗಳಲ್ಲಿ ಹೆಬೆಟ್ಟು ಮುದ್ರೆ ಪಡೆಯುವ ಯಂತ್ರ ಸ್ಥಗಿತವಾಗಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ' ಎಂದು ಮುರಾರಿಕ್ಯಾಂಪಿನ ವಿರೇಶಪ್ಪ ದೂರಿದರು.

`ನಿತ್ಯ ಹತ್ತಾರು ಗಂಟೆ ಮಹಿಳೆಯರು ಸರದಿ ಸಾಲಲ್ಲಿ ನಿಲ್ಲಲು ಆಗದು. ಅಧಿಕಾರಿಗಳು ಪರ್ಯಾಯ ಕ್ರಮ ಕೈಗೊಳ್ಳಬೇಕು' ಎಂದು ಹಣವಾಳದ ದತ್ತಾತ್ರೆಯ, ಜೀರಾಳದ ಇಸ್ಮಾಯಿಲ್, ನಾಗರಾಜ ಪ್ರಗತಿನಗರ, ಹುಸೇನಬಿ, ಪಾರ್ವತಿ, ರಾಜಮ್ಮ, ಮುಬಿನಾ, ಮೌಲಾಬಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆಹಾರ ನಿರೀಕ್ಷಕಿ ನಂದಾ ಪಲ್ಲೇದ, `ಕೇವಲ ಎರಡು, ಮೂರು ಗಂಟೆಯಲ್ಲೆ ಫಲಾನುಭವಿಗಳು ಹೆಬ್ಬೆಟ್ಟು ಮುದ್ರೆ ಕೊಟ್ಟು ಹೋಗುತ್ತಾರೆ. ಕಳೆದ ಮೂರು ದಿನದಿಂದ ಸರ್ವರ್‌ನ ಸಮಸ್ಯೆ ಇದ್ದರಿಂದ ತೊಂದರೆಯಾಗಿತ್ತು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.