ADVERTISEMENT

ಮಧುಚಂದ್ರದ ನೆನಪಿಗಾಗಿ ವಿದೇಶಿ ಜೋಡಿ ವಿಶ್ವ ಪರ್ಯಟನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2016, 10:04 IST
Last Updated 1 ಮಾರ್ಚ್ 2016, 10:04 IST
ಗಂಗಾವತಿಯ ಗ್ಯಾನ್ ಅಧ್ಯಕ್ಷ ಸೂರ್ಯನಾರಾಯಣ ಅವರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿದೇಶಿ ಜೋಡಿ
ಗಂಗಾವತಿಯ ಗ್ಯಾನ್ ಅಧ್ಯಕ್ಷ ಸೂರ್ಯನಾರಾಯಣ ಅವರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿದೇಶಿ ಜೋಡಿ   

ಗಂಗಾವತಿ: ಮಧುಚಂದ್ರದ ನೆನಪಿನಲ್ಲಿ  ಬೈಸಿಕಲ್‌ನಲ್ಲಿ ವಿಶ್ವ ಪರ್ಯಟನೆ ಹಮ್ಮಿಕೊಳ್ಳುವ ಮೂಲಕ ವಿದೇಶಿ ಜೋಡಿಯೊಂದು ಇಲ್ಲಿಗೆ ಬಂದು ಗಮನ ಸೆಳೆದಿದೆ.

ರಷ್ಯದ ಆರ್ಕಾಂಗಿಲಸ್ಕಿ ಪಟ್ಟಣದ ಹಡುಗು ನಿರ್ಮಾಣ ತಜ್ಞ (ಶಿಪ್ ಎಂಜಿನಿಯರ್) ನಿಕಿತಾ ಹಾಗೂ ಉಕ್ರೇನ್ ದೇಶದ ವಾಸ್ತುಶಿಲ್ಪಿ ‘ಎಲ್ಲ’ ಅವರು  2015ರ ಏಪ್ರಿಲ್ 21ರಿಂದ ಬೈಸಿಕಲ್‌ನಲ್ಲಿ ವಿಶ್ವ ಪರ್ಯಟನೆ ಮಾಡುವ ಸಂಕಲ್ಪದಿಂದ ಹೊರಟಿದ್ದಾರೆ. 

ಕಜಕಿಸ್ತಾನ, ಉಜ್ಬೆಕಿಸ್ತಾನ, ತಜಕಿಸ್ತಾನ, ಕಿರ್ಗಿಸ್ತಾನ ಮೊದಲಾದ ದೇಶಗಳನ್ನು ಈಗಾಗಲೇ ಸುತ್ತಿರುವ ಈ ಜೋಡಿ, 2015ರ ನವೆಂಬರ್ 26ರಂದು ದೆಹಲಿಗೆ ಬಂದಿದೆ. ಒಟ್ಟು ಆರು ತಿಂಗಳ ಕಾಲ ಭಾರತದಲ್ಲಿ ಇರಲು ಪ್ರವಾಸಿವೀಸಾ ಪಡೆದ ಈ ಜೋಡಿ ಆಂಧ್ರಪ್ರದೇಶದ ಹಲವು ಜಿಲ್ಲೆ ಸುತ್ತಿ ನಗರಕ್ಕೆ ಆಗಮಿಸಿದೆ. 

ಆಂಧ್ರದ ವಿಶಾಖಪಟ್ಟಣಂನಲ್ಲಿ ಸ್ಥಳೀಯರು, ಈ ವಿದೇಶಿ ಜೋಡಿಯ ಸಾಹಸಕ್ಕೆ ಮೆಚ್ಚಿ ಗಂಗಾವತಿಯಲ್ಲಿರುವ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ರಾಜ್ಯ ಪ್ರವಾಸದ ಸಂದರ್ಭದಲ್ಲಿ ವಸತಿ ವ್ಯವಸ್ಥೆ ಮಾಡುವಂತೆ ಹೇಳಿದ್ದಾರೆ. ಅದರಂತೆ  ಗ್ಯಾನ್ ಸಂಸ್ಥೆಯ ಅಧ್ಯಕ್ಷ ಸೂರ್ಯನಾರಾಯಣ ಜಯನಗರದ ತಮ್ಮ ಮನೆಯಲ್ಲಿ ಒಂದು ವಾರ ತಂಗಲು ಅವಕಾಶ ನೀಡಿದ್ದಾರೆ.

‘ದಿನಕ್ಕೆ 70ರಿಂದ 90ಕಿ.ಮೀ. ಪ್ರಯಾಣ ಮಾಡುವ ನಾವು ಕತ್ತಲಾಗುತ್ತಿದ್ದಂತೆಯೇ ಎಲ್ಲಿ ಸ್ಥಳಾವಕಾಶ ದೊರೆಯುತ್ತದೆಯೋ ಅಲ್ಲಿಯೇ ತಂಗುತ್ತೇವೆ. ಮಾರನೇ ದಿನ ಯಥಾರೀತಿ ಪ್ರಯಾಣ ಮುಂದುವರಿಯುತ್ತದೆ ಎಂದು  ‘ಎಲ್ಲ’ ತಮ್ಮ ದಿನಚರಿ ವಿವರಿಸಿದರು.

‘ಅಗತ್ಯವಸ್ತುಗಳನ್ನು ಬೈಸಿಕಲ್‌ನಲ್ಲಿ ಅಳವಡಿಸಿಕೊಂಡು ಪ್ರಯಾಣ ಮಾಡುತ್ತೇವೆ. ಇಂಡಿಯಾದ ನಾನಾ ರಾಜ್ಯಗಳಿಗೆ ಭೇಟಿ ನೀಡಿದಾಗ ಪ್ರಾಂತೀಯ ಭಾಷೆಯಿಂದಾಗಿ ಸ್ಥಳೀಯರೊಂದಿಗೆ ಸಂವಹನ ಸಾಧ್ಯವಾಗಿಲ್ಲ. ಆದರೂ ವಿವಿಧತೆಯಲ್ಲಿ ಏಕತೆ ಎಂಬ ಭಾರತದ ಧ್ಯೇಯ ನಿಜಕ್ಕೂ ಅರ್ಥಗರ್ಭಿತ’ ಎಂದು ನಿಕಿತ ಹೇಳಿದರು.   

ಆತಿಥ್ಯ ನೀಡುತ್ತಿರುವ ಹೋಮಿಯೋಪಥಿ ವೈದ್ಯ ಪ್ರಸನ್ನ ಆಚಾರ್ಯ ಮಾತನಾಡಿ, ‘ಈ ಜೋಡಿರೊಟ್ಟಿ, ಚಪಾತಿಯಂಥ ಯಾವುದೇ ಆಹಾರ ನೀಡಿದರೂ ಸ್ವೀಕರಿಸುತ್ತಾರೆ. ‘ಎಲ್ಲ’ ಸಸ್ಯಹಾರಿ ಮಹಿಳೆ. ತಾವು ಪ್ರವಾಸ ಮಾಡಿದ ಎಲ್ಲ ಪ್ರದೇಶದ ಮಾಹಿತಿ ಕಿರುಚಿತ್ರದ ಮೂಲಕ ಯುಟೂಬ್‌ಗೆ ಅಪ್‌ಲೋಡ್ ಮಾಡುತ್ತಾರೆ’ ಎಂದರು.

ಮಾರ್ಚ್‌3 ಅಥವಾ 4ರಂದು ನಗರದಿಂದ ಹೊರಟು ಗೋವಾ, ಕೇರಳದಲ್ಲಿ ಪ್ರವಾಸ ಮುಗಿಸಿ ತಿರುಚಿನಾಪಲ್ಲಿಯಿಂದ ಮಲೇಷಿಯಾಕ್ಕೆ ಹೋಗುವ ಯೋಜನೆ ರೂಪಿಸಿಕೊಂಡಿರುವುದಾಗಿ  ಅವರು ಹೇಳಿದರು.  ‘2015ರ ಜ.17ರಂದು ಫೇಸ್‌ಬುಕ್‌ನಲ್ಲಿ ಸ್ನೇಹಿತರಾದೆವು. ಸ್ನೇಹ ಪ್ರೀತಿಗೆ ತಿರುಗಿ ಮದುವೆಯ ಮೂಲಕ ವಿಶ್ವ ಪರ್ಯಾಟನೆಯ ಪಯಣ ಆರಂಭವಾಯಿತು. ಇಬ್ಬರೂ ಸೈಕ್ಲಿಸ್ಟುಗಳು. ಇಬ್ಬರ ಅಭಿರುಚಿ ಒಂದಾಗಿದ್ದರಿಂದ ವಿಶ್ವ ಪ್ರದಕ್ಷಿಣೆ ಯೋಜನೆ ಆರಂಭವಾಯಿತು ಎಂದು ನಿಕಿತಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.