ADVERTISEMENT

ಮನಸ್ಥಿತಿ ಬದಲಾದರೆ ಪ್ಲಾಸ್ಟಿಕ್‌ ನಿಯಂತ್ರಣ

ನಗರದ ವಿವಿಧೆಡೆ ಸಸಿ ನೆಟ್ಟ ವಿದ್ಯಾರ್ಥಿಗಳು, ಪ್ಲಾಸ್ಟಿಕ್‌ ನಿಷೇಧಕ್ಕೆ ಪ್ರತಿಜ್ಞೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 12:58 IST
Last Updated 6 ಜೂನ್ 2018, 12:58 IST

ಕೊಪ್ಪಳ: ಪ್ಲಾಸ್ಟಿಕ್‌ ಬಳಸುವ ಜನರ ಮನಸ್ಥಿತಿ ಬದಲಾದರೆ ಜಿಲ್ಲೆ ಪ್ಲಾಸ್ಟಿಕ್‌ ಮುಕ್ತವಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಹೇಳಿದರು.

ನಗರದ ಈಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ ಹಾಗೂ ನಗರಸಭೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಡೆದ ಸಸಿ ನೆಡುವ ಹಾಗೂ ಪ್ಲಾಸ್ಟಿಕ್‌ ವಸ್ತುಗಳ ನಿಷೇಧಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ವರ್ಷವೂ ವಿಶ್ವ ಪರಿಸರ ದಿನಾಚರಣಯ ದಿನ ಪ್ಲಾಸ್ಟಿಕ್‌ ಬಳಕೆ ನಿಷೇಧ ಮಾಡುತ್ತೇವೆ. ಒಂದು ತಿಂಗಳು ಕಾಲ ಅದನ್ನು ವಶ ಪಡಿಸಿಕೊಂಡು ಬರುತ್ತದೆ. ಆದರೆ ಕೆಲ ದಿನಗಳ ಬಳಿಕ ಮತ್ತೆ ವರ್ತಕರು ಪ್ಲಾಸ್ಟಿಕ್‌ ಬಳಸುತ್ತಾರೆ. ಗ್ರಾಹಕರೂ ಉಪಯೋಗಿಸುತ್ತಾರೆ. 2 ವರ್ಷದಿಂದ ಇದೇ ಆಗುತ್ತಿದೆ. ಮೊದಲು ಬಳಕೆ ಮಾಡುವವರ ಮನಸ್ಥಿತಿ ಬದಲಾಗಬೇಕಿದೆ. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ನಗರದಲ್ಲಿ ಪ್ಲಾಸ್ಟಿಕ್‌ ನಿಷೇಧಿಸುತ್ತೇವೆ ಎಂದರು.

ADVERTISEMENT

ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಸಂಬಂಧಿ ಸಿದಂತೆ ನಗರದಲ್ಲಿ ಇಂದಿನಿಂದ ಪ್ಲಾಸ್ಟಿಕ್‌ ನಿಷೇಧಿಸಲಾಗಿದೆ. ವರ್ತಕರು ಪ್ಲಾಸ್ಟಿಕ್‌ ಬಳಕೆ ಮಾಡಬಾರದು. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲವಾದರೇ ಅಧಿಕಾರಿಗಳು ದಾಳಿ ನಡೆಸಿ ಪ್ಲಾಸ್ಟಿಕ್‌ ವಶಕ್ಕೆ ಪಡೆಯುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನ್ಯಾಯಾಧೀಶ ಸಂಜಯ್‌ ಕುಲಕರ್ಣಿ ಮಾತನಾಡಿ, ಅರಣ್ಯ ಉತ್ಪನ್ನಗಳನ್ನು ದುರ್ಬಳಕೆ ಮಾಡಿಕೊಳ್ಳುವುದರ ಮೂಲಕ ಅರಣ್ಯವನ್ನು ನಾಶಮಾಡಲಾಗುತ್ತಿದೆ. ಅಲ್ಲದೆ ನಗರೀಕರಣ, ಜಾಗತೀಕರಣ, ಕೈಗಾರೀಕರಣದಿಂದಾಗಿ ವಾಯು ಹಾಗೂ ಜಲ ಮಾಲಿನ್ಯ ಆಗುತ್ತಿದೆ. ಕೈಗಾರಿಕೆಗಳು ರಾಸಾಯನಿಕಯುಕ್ತ ಹೊಗೆಯನ್ನು ನದಿಗಳಿಗೆ ಬಿಡಲಾಗುತ್ತದೆ. ಇದರಿಂದ ಜಲಮಾನ್ಯ ಆಗುತ್ತಿದೆ. ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಇದಕ್ಕೆ ತಕ್ಕಂರೆ ವಾಹನ ದಟ್ಟಣೆಯೂ ಹೆಚ್ಚುತ್ತಿದೆ. ವಾಹನಗಳು ಹೊರಸೂಸುವ ಹೊಗೆಯಿಂದಾಗಿ ವಾಯು ಮಾಲಿನ್ಯ ಉಂಟಾಗುತ್ತಿದೆ. ಇದರಿಂದಾಗಿ ಆಮ್ಲಜನಕದ ಕೊರತೆ ಉಂಟಾಗುತ್ತಿದೆ ಎಂದರು.

1986ರಲ್ಲಿ ಪರಿಸರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಯಿತು. ಭಾರತ ಕೃಷಿ ಪ್ರಧಾನ ದೇಶ. ಅದಕ್ಕಾಗಿ ಅರಣ್ಯೀಕರಣ ಹೆಚ್ಚಿಸುವುದರ ಮೂಲಕ ಮಳೆ ಪ್ರಮಾಣ ಹೆಚ್ಚು ಮಾಡಬಹುದು. ಇದರಿಂದ ರೈತರಿಗೆ ಅನೂಕುಲವಾಗುತ್ತದೆ ಎನ್ನುವ ಉದ್ದೇಶದಿಂದ ಈ ಕಾಯ್ದೆ ಜಾರಿಗೊಳಿಸಲಾಗಿದೆ ಎಂದರು.

ಹಿರಿಯ ನ್ಯಾಯಾಧೀಶ ಟಿ.ಶ್ರೀನಿವಾಸ್‌, ಮಾಲಿನ್ಯ ನಿಯಂತ್ರಣ ಮಂಡಳಿಯ ಕೆ.ಎಸ್‌.ಮಂಜುನಾಥ, ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತದ ಉಪಾಧ್ಯಕ್ಷ ಪಿ.ನಾರಾಯಣ, ಡಿಡಿಪಿಐ ಹನುಮಂತಪ್ಪ, ಆರ್‌ಎಫ್‌ಎ ಆರ್‌.ರಾಜೇಶ, ನಗರಸಭೆ ಪೌರಾಯುಕ್ತ ಸುನೀಲ್‌ ಪಾಟೀಲ್‌, ಕ್ಷೇತ್ರ ಶಿಕ್ಷಣಾಧಿಕಾರಿ ಇದ್ದರು.

ನಿರುತ್ಸಾಹ...

ವಿಶ್ವ ಪರಿಸರ ದಿನದಂದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೃಕ್ಷೋತ್ಥಾನ, ಮ್ಯಾರಾಥಾನ್, ಸಸಿ ನೆಡುವುದು, ಸಸಿ ವಿತರಣೆ, ಜಾಗೃತಿ ಜಾಥಾ ಮುಂತಾದ ಕಾರ್ಯಕ್ರಮ ಸಂಪ್ರದಾಯದಂತೆ ನಡೆದವು.

ತಿಳಿವಳಿಕೆ ಕೊರತೆಯಿಂದ ಮ್ಯಾರಾಥಾನ್‌ಗೆ ನಿರೀಕ್ಷಿತ ಪ್ರೋತ್ಸಾಹ ದೊರೆಯಲಿಲ್ಲ. ಬೆರಳಣಿಕೆಯಲ್ಲಿ ಭಾಗವಹಿಸಿದ್ದ ಮಕ್ಕಳು ಉತ್ಸಾಹದಿಂದ ಓಡಿದರು. ಬೆಳಿಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಓಟ, 8.30ಕ್ಕೆ ಆರಂಭವಾಯಿತು. ಖಾಸಗಿ ಕಂಪೆನಿ ಟೀ ಶರ್ಟ್, ಕ್ಯಾಪ್ ವಿತರಿಸಿದರು. ಕಾವ್ಯಾನಂದ ಉದ್ಯಾನದಲ್ಲಿ ಅರಣ್ಯ ಇಲಾಖೆ ಯಿಂದ ಉಚಿತ ಸಸಿ ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.