ADVERTISEMENT

ಮರೆಯಾದ ತುಂಗಭದ್ರೆಯ ಹಿನ್ನೀರ ವೈಭವ

ರವಿ ಎಸ್.ಬಳೂಟಗಿ
Published 7 ಮಾರ್ಚ್ 2018, 10:20 IST
Last Updated 7 ಮಾರ್ಚ್ 2018, 10:20 IST
ಮರೆಯಾದ ತುಂಗಭದ್ರೆಯ ಹಿನ್ನೀರ ವೈಭವ
ಮರೆಯಾದ ತುಂಗಭದ್ರೆಯ ಹಿನ್ನೀರ ವೈಭವ   

ಕೊಪ್ಪಳ: ಮೂರು ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯದ ಹಿನ್ನೀರು ಗಣನೀಯವಾಗಿ ಇಳಿಮುಖವಾಗಿದೆ. ವಿದೇಶಿ ಪಕ್ಷಿಗಳ ಕಲರವವೂ ಕಾಣಸಿಗುತ್ತಿಲ್ಲ.

ಜಲಾಶಯದಲ್ಲಿ ಮಂಗಳವಾರ 8.44 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು. ಜಲಾಶಯದ ಹಿನ್ನೀರಿನ ಗ್ರಾಮಗಳ ಸಮೀಪ ನೀರು ಕಡಿಮೆ ಆಗಿರುವುದಿಂದ ಇಡೀ ಪ್ರದೇಶದ ವೈಭವ ಮರೆಯಾಗಿದೆ. ಅಗಾಧ ಜಲರಾಶಿ, ಪಕ್ಷಿಗಳ ಹಿಂಡು ಮರೀಚಿಕೆಯಾಗಿವೆ.

ಬೆಳ್ಳಕ್ಕಿ, ಬಕ ಪಕ್ಷಿ, ಕೊಕ್ಕರೆ ಹಾಗೂ ಅಪರೂಪದ ರಿವರ್ ಟರ್ನ್ ಹಕ್ಕಿಗಳು ಇಲ್ಲಿ ಕಂಡುಬರುತ್ತವೆ. ವಿದೇಶಿ ಹಕ್ಕಿಗಳ ವಲಸೆಯ ದೇಶದ ಪ್ರಮುಖ ತಾಣವಿದು. ಬೇಸಿಗೆ ಆರಂಭವಾಗುತ್ತಿದ್ದಂತೆ ವಿದೇಶಿ ಹಕ್ಕಿಗಳು ಮರಳಿ ಗೂಡು ಸೇರಿವೆ. ಆದರೆ, 100ಕ್ಕೂ ಹೆಚ್ಚು ಸ್ವದೇಶಿ ಹಕ್ಕಿಗಳು ಹಿನ್ನೀರಲ್ಲಿ ಕಂಡುಬರುವ ಹಸಿರು ಹುಲ್ಲಿನಲ್ಲಿ ಮೊಟ್ಟೆ ಇಡುತ್ತಿವೆ.

ADVERTISEMENT

‘ಹಿನ್ನೀರು ಕಡಿಯಾಗುವುದಕ್ಕೂ ಪಕ್ಷಿಗಳು ವಲಸೆ ಹೋಗುವುದಕ್ಕೂ ಸಂಬಂಧವಿಲ್ಲ. ವಿದೇಶಿ ಹಕ್ಕಿಗಳು ಫೆಬ್ರುವರಿ, ಮಾರ್ಚ್‌ ತಿಂಗಳಲ್ಲಿಯೇ ಇಲ್ಲಿಂದ ನಿರ್ಗಮಿಸುತ್ತವೆ. ಆದರೆ, ವಿವಿಧ ಜಾತಿಯ ಸ್ವದೇಶಿ ಹಕ್ಕಿಗಳನ್ನು ಮಾತ್ರ ನೋಡಬಹುದು' ಎನ್ನುತ್ತಾರೆ ಪಕ್ಷಿತಜ್ಞ ಅಬ್ದುಲ್‌ ಸಮದ್‌ ಕೊಟ್ಟೂರು.

ಕಾಸನಕಂಡಿ ಗ್ರಾಮದ ಸಮೀಪದಿಂದ ಅಣೆಕಟ್ಟೆ ಕಾಣುತ್ತಿದೆ. ಬೆರಳೆಣಿಕೆಯಷ್ಟು ಮೀನುಗಾರರು ‘ಮೀನು ಶಿಖಾರಿ’ಯಲ್ಲಿ ತೊಡಗಿದ್ದಾರೆ. ನೀರು ಇಳಿಮುಖವಾಗಿದ್ದರಿಂದ ಪ್ರವಾಸಿಗರು ಇತ್ತ ಸುಳಿಯುತ್ತಿಲ್ಲ. ಬಂಡೆಗಳು, ತೇವಗೊಂಡ ಮಣ್ಣು, ಹಸಿರು ಹುಲ್ಲು ಕೊಂಚ ನೆಮ್ಮದಿ ನೀಡಬಲ್ಲದು. ನೀರು ಸರಿದು ಹೋದ ಜಾಗದಲ್ಲಿ ಮೇವು ಬೆಳೆದಿದೆ. ಹೀಗಾಗಿ ಕುರಿಗಳ ಹಿಂಡು ಅಲ್ಲಿಗೆ ಲಗ್ಗೆ ಹಾಕುತ್ತಿವೆ. ಮಂಗಳವಾರ 400ಕ್ಕೂ ಹೆಚ್ಚು ಕುರಿಗಳು ಕಂಡವು.

‘ಕುರಿಗಳಿಗೆ ಮೇವು ಅರಸಿ ಅಲೆಯುತ್ತಿದ್ದೇವೆ. ಇನ್ನು 15 ದಿನ ಇಲ್ಲಿಯೇ ನೆಲೆನಿಲ್ಲುವ ಯೋಚನೆ ಇದೆ’ ಎಂದು ಕುರಿಗಾಹಿ ಶರಣಪ್ಪ ಹೇಳಿದರು.

ಭರ್ಜರಿ ಕೃಷಿ: ನೀರು ಕಡಿಮೆ ಆಗಿರುವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಅನೇಕ ಗ್ರಾಮಗಳ ರೈತರು ಭರ್ಜರಿ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಸಂಕ್ಲಾಪುರ, ಚಿಕ್ಕಬಗನಾಳ, ಹಿರೇಬಗನಾಳ, ಮಣ್ಣುರು, ನಿಂಗಾಪುರ, ಕರ್ಕಿಹಳ್ಳಿ, ಹ್ಯಾಟಿ, ಕಾತರಕಿ-ಗುಡ್ಲಾನೂರು, ಕಾಸನಕಂಡಿ ಗ್ರಾಮಗಳ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಶೇಂಗಾ, ಹೆಸರು, ಅಲಸಂದಿ, ಸಜ್ಜಿ, ಜೋಳ ಮೊದಲಾದ ಬೆಳೆಗಳನ್ನು ಬೆಳೆಯಲಾಗಿದೆ.

‘ನೀರು ಇಳಿದರೆ ನಮಗೆ ಕೈತುಂಬಾ ಕೆಲಸ. ಎರಡು ವರ್ಷದ ಹಿಂದೆ ನೀರು ಬೇಗನೆ ಕಡಿಮೆಯಾಗಿತ್ತು. ಈ ಬಾರಿ ತಡವಾಗಿದೆ. ಹೀಗಾಗಿ ಒಂದು ಬೆಳೆ ಮಾತ್ರ ಕೈಸೇರುವ ನಿರೀಕ್ಷೆ ಇದೆ’ ಎಂದು ಕಾಸನಕಂಡಿಯ ರೈತ ಯಂಕಪ್ಪ ಬಿಸನಳ್ಳಿ ಹೇಳಿದರು.

ಯಂಕಪ್ಪ ಅವರ ಹೊಲ ತೇವಾಂಶದಿಂದ ಕೂಡಿದೆ. ನಾಲ್ಕು ಎಕರೆಯಲ್ಲಿ ಶೇಂಗಾ ಬಿತ್ತನೆ ಮಾಡಿದ್ದಾರೆ. ಫಸಲು ಕೈಸೇರುವ ಹಂತದಲ್ಲಿದೆ. ನೀರಿನ ಕೊರತೆ ನೀಗಿಸಲು ಕೊಳವೆಬಾವಿ ಸಹ ಕೊರೆಯಿಸಿದ್ದಾರೆ. ‘ಇದು ನಮ್ಮ ಪೂರ್ವಜರ ಹೊಲ. ಜಲಾಶಯ ನಿರ್ಮಾಣಕ್ಕೆ ನೀಡಿದ್ದೇವೆ. ನೀರು ಕಡಿಮೆಯಾದರೆ ಕೃಷಿ ಕೈಗೊಳ್ಳುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ಜಲಾಶಯದಲ್ಲಿ ನೀರು ಸಂಗ್ರಹ ಕಡಿಮೆ ಆಗುತ್ತಿದೆ. ನೀರಿನೊಂದಿಗೆ ಬರುವ ಹೂಳು, ತ್ಯಾಜ್ಯದಿಂದ ಉತ್ತಮ ಬೆಳೆ ಕೈಸೇರುತ್ತಿಲ್ಲ’ ಎನ್ನುತ್ತಾರೆ ಅವರು.

ನೀರು ಇಳಿದರೆ ಇಲ್ಲಿನ ರೈತರಿಗೆ ಸಂತಸ. ಸುತ್ತಮುತ್ತಲಿನ ಹಳ್ಳಿಗಳ ರೈತರು ವಿವಿಧ ಬೆಳೆಗಳನ್ನು ಬೆಳೆದು ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದಾರೆ.

*

ಜಲರಾಶಿಯ ಜತೆಗೆ ದಡದಲ್ಲಿ ಸಿಗುವ ಕಪ್ಪೆಚಿಪ್ಪುಗಳು, ಹುಳುಗಳ ಸವಿಯಲು ಸ್ವದೇಶಿ ಪಕ್ಷಿಗಳು ಬರುತ್ತವೆ. ನೀರಿನ ಮಾಲಿನ್ಯ ಅವುಗಳ ಸಂತಾನೋತ್ಪತ್ತಿಗೆ ತಡೆಯೊಡ್ಡಿದೆ.

ಅಬ್ದುಲ್‌ ಸಮದ್‌ ಕೊಟ್ಟೂರು,  ಪಕ್ಷಿ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.