ADVERTISEMENT

ಮಳೆ: ಜಲಾವೃತಗೊಂಡ ಶಾಲಾ ಆವರಣ 

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:51 IST
Last Updated 16 ಜೂನ್ 2018, 9:51 IST

ಯಲಬುರ್ಗಾ (ಕೊಪ್ಪಳ): ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಮಳೆಗೆ ನೀಲಮ್ಮ ಶಿವಶಂಕರರಾವ್ ದೇಸಾಯಿ ಸರ್ಕಾರಿ ಪ್ರೌಢಶಾಲೆ ಆವರಣ ಸಂಪೂರ್ಣ ಜಲಾವೃತಗೊಂಡಿದೆ.

‘ಗುರುವಾರ ಶಾಲೆ ಬಿಡುತ್ತಿದ್ದಂತೆ ಶುರುವಾದ ಮಳೆ ಸುಮಾರು 4 ಗಂಟೆ ಸತತವಾಗಿ ಸುರಿದ ಪರಿಣಾಮ ಶಾಲೆಯ ಪಕ್ಕದಲ್ಲಿದ್ದ ಹಳ್ಳದ ನೀರು ಶಾಲೆಯ ಆವರಣಕ್ಕೆ ಹರಿದಿದೆ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಸಯ್ಯ ತಿಳಿಸಿದ್ದಾರೆ.

ಮಳೆ ಬಂದ ಕಾರಣ ಶಿಕ್ಷಕರು ಶಾಲೆಯಲ್ಲಿಯೇ ಉಳಿದುಕೊಂಡಿದ್ದರಿಂದ ಗ್ರಾಮಸ್ಥರು ಹಾಸಿಗೆ ಮತ್ತು ಊಟ ಪೂರೈಸಿದರು.

ADVERTISEMENT

‘ಮಳೆ ಬಂದಾಗಲೆಲ್ಲಾ ಶಾಲಾ ಆವರಣ ಕೆರೆಯಾಗಿ ಮಾರ್ಪಡುತ್ತದೆ. ಸುಮಾರು ವರ್ಷಗಳಿಂದಲೂ ಈ ಸಮಸ್ಯೆ ಹಾಗೆಯೇ ಇದೆ. ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ನೀರು ನಿಂತಾಗ ಭೇಟಿ ನೀಡುವ ಅಧಿಕಾರಿಗಳು ಕೂಡಲೇ ಬಗೆಹರಿಸುವುದಾಗಿ ಹೇಳಿ ಹೋಗುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ, ಇದರಿಂದಾಗಿ ಈ ಶಾಲೆಯ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ’ ಎಂದು ಗ್ರಾಮದ ಮುಖಂಡ ಶರಣಯ್ಯ ಮುಳ್ಳೂರಮಠ ದೂರಿದರು.

8ರಿಂದ 10ನೇ ತರಗತಿವರೆಗೆ ಸುಮಾರು 250 ಮಕ್ಕಳು ಓದುತ್ತಿದ್ದಾರೆ. ಶಾಲೆಯ ಆವರಣಕ್ಕೆ ನೀರು ಬರದಂತೆ ತಡೆಯಲು ಸಂಬಂಧಪಟ್ಟ ಇಲಾಖೆ ಶೀಘ್ರ ತಡೆಗೋಡೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.