ADVERTISEMENT

ಮುಕ್ತ, ನ್ಯಾಯಸಮ್ಮತ ಚುನಾವಣೆ ಆಶಯ

ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅಧ್ಯಕ್ಷತೆಯಲ್ಲಿ ವಿಧಾನಸಭಾ ಚುನಾವಣಾ ವೆಚ್ಚ ವೀಕ್ಷಕರ ಸಭೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 9:03 IST
Last Updated 20 ಏಪ್ರಿಲ್ 2018, 9:03 IST
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಚುನಾವಣಾ ವೆಚ್ಚ ವೀಕ್ಷಕರ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಮಾತನಾಡಿದರು
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಚುನಾವಣಾ ವೆಚ್ಚ ವೀಕ್ಷಕರ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಮಾತನಾಡಿದರು   

ಕೊಪ್ಪಳ: ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಪ್ರಸಕ್ತ ವಿಧಾನಸಭಾ ಚುನಾವಣೆ ನಡೆಸಲು ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಚುನಾವಣೆ ನಡೆಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕರೊಂದಿಗೆ ನಡೆಸಿದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

'ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚಲು ಸೆಕ್ಟರ್ ಅಧಿಕಾರಿಗಳನ್ನು ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 6 ತಂಡಗಳಂತೆ ಫ್ಲೈಯಿಂಗ್ ಸ್ಕ್ವಾಡ್‍ಗಳನ್ನು ನೇಮಕ ಮಾಡಲಾಗಿದೆ. ಅಲ್ಲದೆ ಪ್ರತಿ ಫ್ಲೈಯಿಂಗ್ ಸ್ಕ್ವಾಡ್‍ತಂಡದಲ್ಲಿ ವಿಡಿಯೋ ಸರ್ವೆಲನ್ಸ್ ತಂಡ ಸಹ ಕಾರ್ಯನಿರ್ವಹಿಸಿ, ವಿವಿಧ ಅಕ್ರಮಗಳ ಬಗ್ಗೆ ವಿಡಿಯೋ ಚಿತ್ರೀಕರಣ ನಡೆಸಲಿದೆ. ಈ ವಿಡಿಯೋ ಚಿತ್ರಗಳನ್ನು ವೀಕ್ಷಿಸಿ, ವರದಿ ಸಲ್ಲಿಸಲು ವಿಡಿಯೋ ವೀಕ್ಷಣಾ ತಂಡ ಸಹ ರಚಿಸಲಾಗಿದೆ' ಎಂದರು.

ADVERTISEMENT

'ಯಾವುದೇ ಕಾರಣಕ್ಕೂ ಮದ್ಯ ಹಾಗೂ ಹಣ ಹಂಚಿಕೆ ಪ್ರಕರಣಗಳು ನಡೆಯದಂತೆ ಅಗತ್ಯ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಗಡಿ ಭಾಗಗಳಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಹಣ, ಮದ್ಯ ಹಾಗೂ ಇತರ ಸಾಮಗ್ರಿಗಳು ಬರುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿ ಚೆಕ್‍ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಬಗೆಯ ವಾಹನಗಳನ್ನೂ ಪರಿಶೀಲಿಸಲಾಗುತ್ತಿದ್ದು, ಕೃಷಿ ಉತ್ಪನ್ನಗಳ ಸಾಗಾಣಿಕೆ ವಾಹನಗಳನ್ನೂ ಕೂಡ ಪರಿಶೀಲನೆ ಮಾಡಲಾಗುತ್ತಿದೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಣ ಹಾಗೂ ಮದ್ಯ, ಇನ್ನಿತರ ಸಾಮಗ್ರಿ ಹಂಚಿಕೆ ತಡೆಗಟ್ಟಲು ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಅಬಕಾರಿ ಇಲಾಖೆಯವರು ಅಕ್ರಮ ಮದ್ಯ ಸಾಗಾಣಿಕೆಯನ್ನು ಪತ್ತೆ ಹಚ್ಚಲು ಹೆಚ್ಚಿನ ನಿಗಾ ವಹಿಸಿದ್ದು, ಅಬಕಾರಿ ಇಲಾಖೆ ಹಾಗೂ ಪೊಲೀಸ್ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯ ಬ್ಯಾಂಕ ಅಧಿಕಾರಿಗಳ ಸಭೆ ಕೈಗೊಂಡು, ₹ 1 ಲಕ್ಷಕ್ಕೂ ಹೆಚ್ಚಿನ ಶಂಕಾಸ್ಪದ ಹಣದ ವ್ಯವಹಾರಗಳ ಕುರಿತು ದಿನನಿತ್ಯ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ' ಎಂದರು.

ಕುಷ್ಟಗಿ ಹಾಗೂ ಯಲಬುರ್ಗಾ ಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕ ಮನೀಶ್ ಅವರು ಮಾತನಾಡಿ, 'ಜಿಲ್ಲೆಯ ಎಟಿಎಂಗಳಲ್ಲಿ ಹಣ ಇಲ್ಲ ಎಂಬುದಾಗಿ ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದು, ಎಟಿಎಂಗಳಲ್ಲಿ ಹಣ ಇಲ್ಲ ಎಂದಾದರೆ, ಹೆಚ್ಚಿನ ಮೊತ್ತದ ಹಣ ಮನೆಗಳಲ್ಲಿ ಸಂಗ್ರಹಣೆಯಾಗುತ್ತಿದೆ ಎಂಬ ಶಂಕೆ ಮೂಡುತ್ತದೆ. ಸತತವಾಗಿ ಪದೇ ಪದೇ ಹಣ ಡ್ರಾ ಮಾಡುತ್ತಿರುವವರ ಬಗ್ಗೆಯೂ ಮಾಹಿತಿ ಸಂಗ್ರಹಣೆ ಹಾಗೂ ವರದಿ ಚುನಾವಣಾಧಿಕಾರಿಗಳಿಗೆ ಲಭ್ಯವಾಗಬೇಕು' ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ, ಅಬಕಾರಿ ಉಪಅಧೀಕ್ಷಕ ನಾರಾಯಣ ನಾಯ್ಕ, ಕೊಪ್ಪಳ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕ ನೀರಜ್‌ಕುಮಾರ್, ಗಂಗಾವತಿ ಮತ್ತು ಯಲಬುರ್ಗಾ ಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕ ಮಹಮ್ಮದ್ ಇರ್ಫಾನ್ ಅಜೀಜ್, ಚುನಾವಣಾ ವೆಚ್ಚ ನೋಡಲ್ ಅಧಿಕಾರಿ ವಾಗೀಶ್ ಇದ್ದರು.

**

ಯಾವುದೇ ಕಾರಣಕ್ಕೂ ಮದ್ಯ ಹಾಗೂ ಹಣ ಹಂಚಿಕೆ ಪ್ರಕರಣಗಳು ನಡೆಯದಂತೆ ಅಗತ್ಯ ಹಾಗೂ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ – ಎಂ.ಕನಗವಲ್ಲಿ, ಜಿಲ್ಲಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.