ADVERTISEMENT

ಮುಖ್ಯಮಂತ್ರಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ

ಸಿದ್ಧತೆ ಪರಿಶೀಲಿಸಿದ ಶಾಸಕ ಶಿವರಾಜ ತಂಗಡಗಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 7:38 IST
Last Updated 14 ಡಿಸೆಂಬರ್ 2017, 7:38 IST
ಕನಕಗಿರಿ ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುತ್ತಿರುವ ಹಿನ್ನೆಲೆಯಲ್ಲಿ ಗಂಗಾವತಿ–ಲಿಂಗಸಗೂರು ರಸ್ತೆಯಲ್ಲಿ ಹಾಕಿರುವ ಸ್ವಾಗತ ಕಮಾನು
ಕನಕಗಿರಿ ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುತ್ತಿರುವ ಹಿನ್ನೆಲೆಯಲ್ಲಿ ಗಂಗಾವತಿ–ಲಿಂಗಸಗೂರು ರಸ್ತೆಯಲ್ಲಿ ಹಾಕಿರುವ ಸ್ವಾಗತ ಕಮಾನು   

ಕನಕಗಿರಿ: ರಾಜ್ಯ ಸರ್ಕಾರ ಕ್ಷೇತ್ರದಲ್ಲಿ ಕೈಗೊಂಡ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಡಿಸೆಂಬರ್‌ 14ರ ಗುರುವಾರ ನಡೆಯಲಿದ್ದು, ಅಂತಿಮ ಸಿದ್ಧತೆ ಭರದಿಂದ ಸಾಗಿದೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ 12. 30ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತೆರಳುವ ರಸ್ತೆಯಲ್ಲಿನ ನಾರಾಯಣಪ್ಪ ಪಾತ್ರದ ಅವರ ಹೊಲದಲ್ಲಿ ಬೃಹತ್‌ ವೇದಿಕೆ ವೇದಿಕೆ ನಿರ್ಮಾಣ ಮಾಡಲಾಗಿದೆ. 50 ಸಾವಿರ ಜನ ಬರುವ ನಿರೀಕ್ಷೆ ಇದ್ದು, 30 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ’ ಎಂದು ಶಾಸಕ ಶಿವರಾಜ ತಂಗಡಗಿ ಹೇಳಿದ್ದಾರೆ.

ಸಚಿವ, ಶಾಸಕರ ದಂಡು: ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ, ಸಚಿವರಾದ ಎಚ್‌. ಕೆ. ಪಾಟೀಲ, ಎಚ್‌. ಸಿ ಮಹದೇವಪ್ಪ, ರಮೇಶಕುಮಾರ, ಡಿ. ಕೆ. ಶಿವಕುಮಾರ್‌, ಡಾ. ಶರಣಪ್ರಕಾಶ ಪಾಟೀಲ, ಎಸ್‌. ಎಸ್‌. ಮಲ್ಲಿಕಾರ್ಜುನ, ಟಿ. ಬಿ. ಜಯಚಂದ್ರ, ಈಶ್ವರ ಖಂಡ್ರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ , ಶಾಸಕರಾದ ರಾಘವೇಂದ್ರ ಹಿಟ್ನಾಳ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ, ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರು, ಜಿಪಂ ಉಪಾಧ್ಯಕ್ಷೆ ಲಕ್ಷ್ಮವ್ವ ನೀರ್ಲೂಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿರೂಪಾಕ್ಷಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರವಿ ಭಜಂತ್ರಿ, ಪುರಸಭೆ ಪ್ರಭಾರ ಅಧ್ಯಕ್ಷೆ ಮಹಾದೇವಿ ಭಜಂತ್ರಿ , ವಿಶೇಷ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಶಿಧರಗೌಡ ಪಾಟೀಲ ಭಾಗವಹಿಸುವರು.

ADVERTISEMENT

ಪಟ್ಟಣದ ಎಲ್ಲಾ ಮುಖ್ಯ ರಸ್ತೆ, ವೃತ್ತಗಳಲ್ಲಿ ಬೃಹತ್ ಪ್ರಮಾಣದ ಸ್ವಾಗತ ಕಮಾನು ನಿರ್ಮಿಸಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಶಾಸಕ ಶಿವರಾಜ ತಂಗಡಗಿ ಸೇರಿದಂತೆ ಇತರೆ ಜನಪ್ರತಿನಿಧಿಗಳು ಭಾವಚಿತ್ರಗಳು ರಾರಾಜಿಸುತ್ತಿವೆ.

ಸುಗಮ ಸಂಚಾರಕ್ಕೆ ರಸ್ತೆ ಸಹ ದುರಸ್ತಿ ಮಾಡಲಾಗಿದ್ದು, ಸ್ವಚ್ಛತೆ ಕಾಪಾಡಲಾಗಿದೆ. ಪ್ರವಾಸಿ ಮಂದಿರದ ವಿಐಪಿ ಕೊಠಡಿ ನವ ವಧುವಿನಂತೆ ಶೃಂಗಾರಗೊಂಡಿದೆ.

‘ವೇದಿಕೆ ಪಕ್ಕದಲ್ಲಿ 50 ಸಾವಿರ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಗೋಧಿ ಹುಗ್ಗಿ, ಬದನೆಕಾಯಿ ಪಲ್ಲೆ, ಅನ್ನ, ಸಾಂಬಾರು, ಚಟ್ನಿ ಹಾಗೂ ಮೊಸರನ್ನದ ವ್ಯವಸ್ಥೆ ಮಾಡಲಾಗಿದೆ’ ಎಂದು ಅಡುಗೆ ಉಸ್ತುವಾರಿ ವಹಿಸಿಕೊಂಡಿರುವ ತಂಗಡಗಿ ಟ್ರಸ್ಟ್ ಸದಸ್ಯರಾದ ನಾಗರಾಜ ತಂಗಡಗಿ, ಪ್ರಭು ಉಪನಾಳ ತಿಳಿಸಿದರು.

ಭದ್ರತೆಗಾಗಿ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದು, ಒಬ್ಬರು ಡಿವೈಎಸ್ಪಿ, ಸಿಪಿಐ–10, ಪಿಎಸ್ಐ–20, ಎಎಸ್ಐ–46, 333 ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್, 30 ಮಹಿಳಾ ಪೊಲೀಸ್‌ ಸಿಬ್ಬಂದಿ, 200 ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ ರಾಜ್ಯ ಮೀಸಲು ಪೊಲೀಸ್ ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳು ಸ್ಥಳದಲ್ಲಿ ಮೊಕ್ಕ ಹೂಡಿವೆ.

ಶಾಸಕ ಶಿವರಾಜ ತಂಗಡಗಿ, ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ಆರ್‌ ರಾಠೋಡ್, ಕೂಡ್ಲಗಿ ಡಿವೈಎಸ್‌ಪಿ ಬಸವೇಶ್ವರ, ಗ್ರಾಮೀಣ ವೃತ್ತ ನಿರೀಕ್ಷಕ ದೀಪಕ್ ಬೂಸರಡ್ಡಿ, ತಹಶೀಲ್ದಾರ ಎಲ್‌. ಡಿ. ಚಂದ್ರಕಾಂತ ಅವರು ವೇದಿಕೆಯ ಅಂತಿಮ ಸಿದ್ಧತೆಯನ್ನು ಪರಿಶೀಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.