ಮುನಿರಾಬಾದ್: ಹಿಟ್ನಾಳ ಹೋಬಳಿ ಕೇಂದ್ರ ಮತ್ತು ಸುತ್ತಲಿನ ಗ್ರಾಮಗಳ ಅನೇಕ ರೋಗಿಗಳು ವ್ಯಾಪಕ ಡೆಂಗೆ ರೋಗಕ್ಕೆ ತುತ್ತಾಗಿ ವಿವಿಧ ಆಸ್ಪತ್ರೆಗಳಿಗೆ ಸೇರಿದ್ದು ಸಾರ್ವಜನಿಕರು ಭಯ ಭೀತರಾಗಿದ್ದಾರೆ. ಸುಮಾರು ಎರಡು ತಿಂಗಳಿನಿಂದ ಇಲ್ಲಿನ ಅನೇಕ ಜನ ಶಂಕಿತ ಡೆಂಗೆ ಜ್ವರದಿಂದ ಬಳಲಿ ನಂತರ ಆಸ್ಪತ್ರೆಗೆ ಸೇರಿದ್ದಾರೆ.
ಆ ಪೈಕಿ ಕಳೆದ ತಿಂಗಳು ಸಮೀಪದ ಬೇವಿನಹಳ್ಳಿಯ ಯಂಕನಗೌಡ ಪೊಲೀಸ್ ಪಾಟೀಲ್ ಬಳ್ಳಾರಿಯ ಆಸ್ಪತ್ರೆಯಲ್ಲಿ, ಹಿಟ್ನಾಳ ಗ್ರಾಮದ ಹುಲುಗಜ್ಜ ವಡ್ರ ಇವರ ಮಗಳು, ಹೊಸಳ್ಳಿಯ ಭರಮಣ್ಣ ಕುರುಳಿ ಮತ್ತು ಕುಣಿಕೇರಿಯ ಯಮನೂರಪ್ಪ ಹಳ್ಳಿಕೇರಿ ಹಾಗೂ ಇದೇ ಗ್ರಾಮದ ಹನುಮೇಶ್ ಸಬರದ ಧಾರವಾಡದ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಬೇವಿನಹಳ್ಳಿಯ ಯಮನೂರಪ್ಪ ಶೆಲೂಡಿ ಸದ್ಯ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಬಂಧಿಕ ರೋಗಿಯ ಜೊತೆ ತೆರಳಿದ್ದ ಬೇವಿನಹಳ್ಳಿಯ ರೈತ ಮುಖಂಡ ಸೋಮಲಿಂಗಪ್ಪ ಕಾಮನೂರ, `ಕೊಪ್ಪಳ ತಾಲ್ಲೂಕಿನ ಅನೇಕ ಜನ ಇದೇ ರೋಗಕ್ಕೆ ತುತ್ತಾಗಿ ಧಾರವಾಡದ ಆಸ್ಪತ್ರೆಗೆ ದಿನಕ್ಕೆ ಕನಿಷ್ಟ ಇಬ್ಬರಾದರೂ ಬಂದೇ ಬರುತ್ತಾರೆ ಎಂದು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಅಪಾಯಕಾರಿ ಡೆಂಗೆ ರೋಗ ಹರಡದಂತೆ ಸ್ಥಳೀಯ ಸಂಸ್ಥೆಗಳು ಮತ್ತು ಆರೋಗ್ಯ ಇಲಾಖೆ ರೋಗಪೀಡಿತ ಗ್ರಾಮಗಳಲ್ಲಿ ಸಂಚರಿಸಿ ಜನ ಜಾಗೃತಿ ಮೂಡಿಸಬೇಕು.
ಚರಂಡಿಗಳನ್ನು ಸ್ವಚ್ಛಗೊಳಿಸಿ ಎಲ್ಲಾ ಗ್ರಾಮಗಳಲ್ಲಿ `ಧೂಮೀಕರಣ~(ಫಾಗಿಂಗ್) ಮಾಡಿ ಸೊಳ್ಳೆಗಳ ನಿಯಂತ್ರಣ ಮಾಡಬೇಕು. ಶಂಕಿತ ರೋಗಿಗಳ ಪಟ್ಟಿಮಾಡಿ ಆರೋಗ್ಯ ಇಲಾಖೆಯೇ ಮುಂದೆ ಬಂದು ಅವರ ಚಿಕಿತ್ಸೆಗೆ ಸಂಬಂಧಪಟ್ಟ ಆಸ್ಪತ್ರೆಯಲ್ಲಿ ದಾಖಲಿಸಿ ನೆರವಾಗಬೇಕು ಎಂದು ಹಿಟ್ನಾಳ ಗ್ರಾಮದ ಯುವ ಮುಖಂಡ ಬಸಪ್ಪ ತಿಪ್ಪವನವರ್, ಬೇವಿನಹಳ್ಳಿಯ ಸೋಮಲಿಂಗಪ್ಪ ಕಾಮನೂರ ಹಾಗೂ ಇದೇ ರೋಗದಿಂದ ಚೇತರಿಸಿಕೊಂಡಿರುವ ಹೊಸಳ್ಳಿಯ ಭರಮಣ್ಣ ಕುರುಳಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.