ADVERTISEMENT

ಮೊದಲ ಮಳೆಗೇ ಕರಗಿದ ಜಿನುಗುಕೆರೆ!

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 6:15 IST
Last Updated 9 ಜೂನ್ 2011, 6:15 IST
ಮೊದಲ ಮಳೆಗೇ ಕರಗಿದ ಜಿನುಗುಕೆರೆ!
ಮೊದಲ ಮಳೆಗೇ ಕರಗಿದ ಜಿನುಗುಕೆರೆ!   

ಕುಷ್ಟಗಿ: ತಾಲ್ಲೂಕಿನ ವಣಗೇರಿ ಬಳಿ ಜಲಸಂಪನ್ಮೂಲ ಇಲಾಖೆ ನಿರ್ಮಿಸುತ್ತಿರುವ ರೂ 26 ಲಕ್ಷ ವೆಚ್ಚದ ಜಿನುಗು ಕೆರೆ ಕೋಡಿ ಹಳ್ಳಕ್ಕೆ ಬಂದ ಸಣ್ಣ ಪ್ರಮಾಣದ ಪ್ರವಾಹಕ್ಕೆ ಕೊಚ್ಚಿಹೋಗಿದೆ.

ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಜಿನುಗು ಕೆರೆ ಯೋಜನೆಯನ್ನದು ಇಲಾಖೆ ಅನುಷ್ಟಾನಗೊಳಿಸುತ್ತಿದೆ. ಆದರೆ ಕೆರೆಯಲ್ಲಿ ನೀರು ನಿಲ್ಲದಿರುವುದು ಬೇರೆ ಮಾತು ಕಾಮಗಾರಿ ತೀರಾ ಕಳಪೆಯಾಗಿರುವದರಿಂದ ಮೊದಲ ಮಳೆಗೆ ಬಂದ ಸಣ್ಣ ಪ್ರವಾಹಕ್ಕೆ ಕೆರೆ ಕೋಡಿ ಕಿತ್ತುಹೋಗಿದ್ದು ಸರ್ಕಾರದ ಲಕ್ಷಾಂತರ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ, ಇನ್ನೊಂದು ಮಳೆ ಬಂದರೆ ಕೆರೆ ನಾಪತ್ತೆಯಾದರೂ ಅಚ್ಚರಿ ಪಡಬೇಕಿಲ್ಲ ಎಂದು ಜನ ದೂರಿದ್ದಾರೆ.

ಇಲ್ಲಿ ಜಿನುಗು ಕೆರೆ ನಿರ್ಮಿಸುವ ಅಗತ್ಯವೇ ಇರಲಿಲ್ಲ, ಸ್ಥಳದ ಆಯ್ಕೆಯೂ ಅವೈಜ್ಞಾನಿಕವಾಗಿದೆ, ಕಾಮಗಾರಿಯೂ ಕಳಪೆಯಾಗಿದೆ, ಅಂಗೈನಂತಿರುವ ಕೆರೆಯಲ್ಲಿ ಹನಿ ನೀರು ಸಹ ನಿಲ್ಲುವುದಿಲ್ಲ. ಹೀಗಾದರೆ ಇದಕ್ಕೆ ಜಿನುಗು ಕೆರೆ ಎಂದು ಕರೆಯುವುದಾದರೂ ಹೇಗೆ ಎಂಬುದು ಜನರ ಪ್ರಶ್ನೆ. ಕೆರೆ ನಿರ್ಮಾಣದ ಹಿಂದೆ ಸದುದ್ದೇಶಕ್ಕಿಂತ ಇಲಾಖೆ ಹಣ ಕೊಳ್ಳೆಹೊಡೆಯುವುದಕ್ಕಾಗಿಯೇ ಯೋಜನೆ ರೂಪಿಸಲಾಗಿದೆ ಎಂದು ಜನ ದೂರುತ್ತಾರೆ.

ಗುತ್ತಿಗೆಗಾರರಿಗೆ ಕೆಲಸ ನೀಡುವುದಕ್ಕಾಗಿಯೇ `ಕಂಕಣ~ಬದ್ಧರಾಗಿರುವ ಇಲಾಖೆ ಅಧಿಕಾರಿಗಳು ಅವರೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಚುನಾಯಿತ ಪ್ರತಿನಿಧಿಗಳಿಗೂ ಅದರಲ್ಲಿ ಪಾಲು ದೊರೆಯುತ್ತದೆ. ಹಾಗಾಗಿ ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲ ಎಂಬ ಆರೋಪಗಳು ಕೇಳಿಬಂದವು. ಗುಣಮಟ್ಟ ನಿಯಂತ್ರಕರ ವರದಿ ಆಧಾರದ ಮೇಲೆ ಕಾಮಗಾರಿಯ ಪ್ರತಿ ಹಂತದ ಬಿಲ್ ಸಂದಾಯವಾಗುತ್ತದೆ. ಹಾಗಾದರೆ ನಿಯಂತ್ರಕರೂ ಈ ಕಳಪೆ ಕಾಮಗಾರಿಗೆ `ಸಮ್ಮತಿ~ ವ್ಯಕ್ತಪಡಿಸಿರುವುದು ಅಚ್ಚರಿ ಮೂಡಿಸಿದೆ.

ಸದರಿ ಕಾಮಗಾರಿ ಆರಂಭದಲ್ಲೇ ಜನ ಕಳಪೆಯಾಗಿರುವುದನ್ನು ಶಾಸಕರು ಸಹಿತ ಇತರೆ ಚುನಾಯತಿ ಪ್ರತಿನಿಧಿಗಳು, ನೀರಾವರಿ ಇಲಾಖೆ ಗಮನಕ್ಕೆ ತಂದರೂ ಯಾರೊಬ್ಬರೂ ಅದಕ್ಕೆ ಸ್ಪಂದಿಸಲಿಲ್ಲ. ಅಭಿವೃದ್ಧಿಪರ ಚಿಂತನೆ ನಡೆಸುವಂತೆ ಹೋದಲ್ಲೆಲ್ಲ ಕರೆ ನೀಡುವ ಶಾಸಕ ಅಮರೇಗೌಡ ಬಯ್ಯಾಪೂರ ಅವರು ಇಂಥ ಅದ್ವಾನಗಳನ್ನು ಸಹಿಸಿಕೊಳ್ಳುತ್ತಿರುವುದೇಕೆ ಎಂಬ ಪ್ರಶ್ನೆ ಎದುರಾಗಿದೆ.

ವಣಗೇರಿ ಕೆರೆ ದುರವಸ್ಥೆಯನ್ನು ತನಿಖೆಗೊಳಪಡಿಸಿ ಸಂಬಂಧಿಸಿದ ಎಂಜಿನಿಯರ್‌ಗಳ ಮೇಲೆ ಕ್ರಮ ಜರುಗಿಸಬೇಕು. ಅಲ್ಲದೇ ಗುತ್ತಿಗೆದಾರನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಹಣ ವಸೂಲಿ ಮಾಡಲು ಸಾಧ್ಯವಾದೀತೆ ಎಂಬ ನಿರೀಕ್ಷೆ ಜನರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.