ಕುಕನೂರು: ಇಲ್ಲಿಯ ಗುದ್ನೆಪ್ಪನಮಠದಲ್ಲಿ ಇರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಅದ್ಧೂರಿಯಾಗಿ ನಡೆಯಿತು.
ಜಿಲ್ಲಾ ಪಂಚಾಯತಿ ಸದಸ್ಯ ಈರಪ್ಪ ಕುಡಗುಂಟಿ ಭವ್ಯ ಸಮಾರಂಭ ಉದ್ದೇಶಿಸಿ ಮಾತನಾಡಿ, ಬಡ ಕುಟುಂಬದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ ಸರ್ಕಾರ ವಿಶೇಷ ಯೋಜನೆಯನ್ನು ರೂಪಿಸಿ, ಕೇಂದ್ರ ಸರ್ಕಾರದ ಜವಾಹರ ನವೋದಯ ವಸತಿ ಶಾಲೆಯ ಮಾದರಿಯಲ್ಲಿ ರಾಜ್ಯದಲ್ಲೆಡೆ ಆರಂಭಿಸಲಾಗಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದರ ಪರಿಣಾಮದಿಂದ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದುತ್ತಿರುವುದನ್ನು ಶ್ಲ್ಯಾಘಿ ಸಿದ ಅವರು, ಮುಂದಿನ ವರ್ಷದ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಶಾಲಾ ಕಂಪೌಂಡ್ ನಿರ್ಮಾಣ ಮಾಡಿಸುವುದಾಗಿ ಭರವಸೆ ನೀಡಿದರು.
ಬಿ.ಸಿ.ಎಂ ಇಲಾಖೆ ಜಿಲ್ಲಾ ಅಧಿಕಾರಿ ಬಿ.ಕಲ್ಲೇಶ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ವಸತಿ ಶಾಲೆಗಳ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ. ಆದಾಗ್ಯೂ ಕೂಡ ಇನ್ನೂ ಹೆಚ್ಚಿನ ಸೌಲಭ್ಯವನ್ನು ನೀಡಲು ವಿಶೇಷ ಕಾಳಜಿ ವಹಿಸಲಾಗುವುದು ಎಂದರು.
ಕಳೆದ ಸಾಲಿನ ಎಸ್ಸೆಎಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಯ ಫಲಿತಾಂಶ ನೂರಕ್ಕೆ ನೂರು ಆಗಿದ್ದಕ್ಕೆ ಕುಕನೂರಿನ ಅಂಜುಮನ್ ಕಮಿಟಿಯಿಂದ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು. ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಷಮ್‌ಶ್ಯಾದಬೇಗಂ, ಮಂಜುನಾಥ ದಿವಟರ್ ಹಾಗೂ ವೀರನಗೌಡ ಅವರನ್ನು ಶಾಲೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಪ್ರಾಚಾರ್ಯ ಪಿ.ಬಿ.ಕರೆಹೊಳಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯತಿ ಸದಸ್ಯ ಶೇಖರಪ್ಪ ವಾರದ, ರೇಣುಕಾ ಬೆದವಟ್ಟಿ, ದ್ಯಾಮಣ್ಣ ಜಮಖಂಡಿ, ಕರಬಸಯ್ಯ ಬಿನ್ನಾಳ, ರಸೀದ್ ಮುಬಾರಕ್, ರಸೀದ್ ಹಣಜಗೇರಿ, ನೂರಅಹ್ಮದ್ ಹಣಜಗೇರಿ, ಗ್ರಾಮ ಪಂಚಾಯತಿ ಸದಸ್ಯರಾದ ಶರಣಯ್ಯ ಬಂಡಿ, ಬಸವನಗೌಡ ತೊಂಡಿಹಾಳ, ವೆಂಕಟೇಶ ಭೋವಿ, ಎಪಿಎಂಸಿ ಸದಸ್ಯ ದಾವಲಸಾಬ ಕುದರಿ, ಶಿವಕುಮಾರ ನಾಗಲಾಪುರಮಠ, ವೀರಯ್ಯ ದೇವಗಣಮಠ, ಚನ್ನಬಸಯ್ಯ ಓಲಿ ಇತರೆ ಗಣ್ಯರು ವೇದಿಕೆಯಲ್ಲಿದ್ದರು.
ಮಕ್ಕಳಿಂದ ಯೋಗಾಸನ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಿಲಯ ಪಾಲಕ ಡಾ.ಶಿವಶಂಕರ್ ಕರಡಕಲ್ ಪ್ರಾಸ್ತಾವಿಕ ಮಾತನಾಡಿದರು. ಶಿವಲೀಲಾ ಸ್ವಾಗತಿಸಿದರು. ಸಾಬೇರಾಬೇಗಂ ನಿರೂಪಿಸಿದರು. ನೂರಾರು ವಿದ್ಯಾರ್ಥಿಗಳು ಹಾಗೂ ಪಾಲಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.