ಗಂಗಾವತಿ: ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಫಲಾನುಭವಿಗೆ ಸಕಾಲಕ್ಕೆ ತಲುಪಿಸುವಲ್ಲಿ ವಿಫಲವಾದ ಹಾಗೂ ಹಣಕ್ಕೆ ಬೇಡಿಕೆ ಇಡುವ ಗ್ರಾಮ ಲೆಕ್ಕಾಧಿಕಾರಿ ಬಸವರಾಜರನ್ನು ತಕ್ಷಣ ವರ್ಗಾವಣೆ ಮಾಡುವಂತೆ ಚಿಕ್ಕಬೆಣಕಲ್ ಗ್ರಾಮದ ಕೆಲ ಮಹಿಳೆಯರು ಒತ್ತಾಯಿಸಿದರು.
ಚಿಕ್ಕಬೆಣಕಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗಮ್ಮ ನೇತೃತ್ವದಲ್ಲಿ ಬುಧವಾರ ತಾಲ್ಲೂಕು ಪಂಚಾಯಿತಿ ಸಮೀಪ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ ಮಹಿಳೆಯರು ಸರ್ಕಾರದ ಯೋಜನೆ ಮತ್ತು ಆದೇಶ ಪ್ರತಿಗಳನ್ನು ತಲುಪಿಸುವಲ್ಲಿ ಅಧಿಕಾರಿ ವಿಳಂಭ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಮದ ಅಶಕ್ತ, ನಿರ್ಗತಿಕ, ವಿಧವೆ, ಅಂಗವಿಕಲ, ವೃದ್ಧಾಪ್ಯದ ಫಲಾನುಭವಿಗಳು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಮಾಸಾಶನ ಪಡೆಯಲು ಮೂರು ತಿಂಗಳ ಹಿಂದೆಯೆ ಅರ್ಜಿ ಹಾಕಿದ್ದರು. ಅರ್ಜಿ ವಿಲೇವಾರಿಯಾಗಿ ಆದೇಶ ಜಾರಿಯಾಗಿದೆ.
ಶರಣಪ್ಪ ಎಂಬ ಅಧಿಕಾರಿ ಈ ಹಿಂದೆ ಸಕಾಲಕ್ಕೆ ಫಲಾನುಭವಿಗಳಿಗೆ ಆದೇಶ ಪ್ರತಿಗಳನ್ನು ತಲುಪಿಸುತ್ತಿದ್ದರು. ಆದರೆ ಅವರ ವರ್ಗಾವಣೆ ನಂತರ ಬಂದ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಫಲಾನುಭವಿಗಳನ್ನು ವಿನಾಕಾರಣ ತಿರಿಗಿಸುತ್ತಾರೆ ಎಂದು ಆರೋಪಿಸಿದರು.
65 ವರ್ಷದ ದುರ್ಗಮ್ಮ ಎಂಬ ಮಹಿಳೆಗೆ ಸರ್ಕಾರದಿಂದ ಈ ಹಿಂದೆ ₨400 ಬರುತಿತ್ತು. ಬಸವರಾಜ ಅದನ್ನು ₨200ಕ್ಕೆ ಇಳಿಸಿದ್ದಾರೆ. ನಿಂಗಮ್ಮ ಎಂಬುವರ ವಿಧವಾ ವೇತನ ರದ್ದುಗೊಳಿಸಿದ್ದಾರೆ. ವಡ್ಡರ ತಿಪ್ಪಮ್ಮರ ಮೊಮ್ಮಗ ಆನಂದ್‌ನಿಗೆ ಬರುತ್ತಿದ್ದ ಅಂಗವೈಕಲ್ಯ ವೇತನಕ್ಕೂ ಕುತ್ತು ತಂದಿದ್ದಾರೆ ಎಂದು ಆರೋಪಿಸಿದರು.
ಫಲಾನುಭವಿಗಳಿಗೆ ಸರ್ಕಾರದ ಮಾಸಾಶನದ ಆದೇಶ ಪ್ರತಿ ನೀಡಲು ಹಣ ಪಡೆಯುತ್ತಿರುವ ಬಸವರಾಜ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಬೇಕೆಂದು ಬಾಳಮ್ಮ ಹೊಸಳ್ಳಿ, ಹನುಮಮ್ಮ, ದುರ್ಗಮ್ಮ ಭೋವಿ, ನಿಂಗಮ್ಮ, ಮಳೆಯಮ್ಮ, ಹುಲಿಗೆಮ್ಮ, ಇಂದ್ರಮ್ಮ ಇತರರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.