ADVERTISEMENT

ರಾಮನನ್ನು ನೆನೆಪಿಸುವ ಅಯೋಧ್ಯೆ ರಸ್ತೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 7:10 IST
Last Updated 19 ಫೆಬ್ರುವರಿ 2011, 7:10 IST

ಗಂಗಾವತಿ: ಕೆಲಸ ಸ್ವಲ್ಪ ಕಷ್ಟ ಎನಿಸಿದಾಗ ಇಲ್ಲವೆ ದೈಹಿಕ ಶ್ರಮಪಟ್ಟಾಗ ಹಿರಿಯರು ರಾಮ ರಾಮ, ಕೃಷ್ಣ ಕೃಷ್ಣ, ಭಗವಂತ... ಎಂದು ದೇವರನ್ನು ನೆನೆದು ಮನಸ್ಸಿನ ಭಾರ ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಗ್ರಾಮಕ್ಕೆ ಪಯಣ ಬೆಳೆಸಿದರೆ ಸಾಕು ನಮಗರಿವಿಲ್ಲದಂತೆ ರಾಮ ನೆನಪಾಗುತ್ತಾನೆ. ಅಂದಹಾಗೆ ರಾಮನನ್ನು ನೆನೆಯುವುದು ಯಾವುದೊ ಮಹಿಮೆಯಿಂದಲ್ಲ. ಆ ಗ್ರಾಮದ ರಸ್ತೆ ಅವಸ್ಥೆಯಿಂದ. ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬರೂ ರಾಮನಾಮ ಜಪಿಸಿ, ಜಿಡ್ಡು ಹಿಡಿದ ಆಡಳಿತ ವ್ಯವಸ್ಥೆಯನ್ನು ಶಪಿಸಿ ಸಾಗುತ್ತಾರೆ.

ಗಂಗಾವತಿ ನಗರದಿಂದ ಕೇವಲ ಏಳು ಕಿ.ಮೀ. ಅಂತರದಲ್ಲಿರುವ ಕಂಪ್ಲಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಅಯೋಧ್ಯ ಗ್ರಾಮದ ರಸ್ತೆ ಅವಸ್ಥೆ ಹೇಳತೀರದು. ತಗ್ಗು ದಿಣ್ಣೆಗಳು, ಕಂಕರ್ ಕಿತ್ತು ವಾಹನದ ಚಕ್ರಕ್ಕೆ ಸಿಲುಕಿ ಸಿಡಿಯುವ ಕಲ್ಲುಗಳಿಂದ ದಾರಿಹೋಕರು ಅಪಾಯ ಎದುರಿಸುವಂತಾಗಿದೆ. ಇದೇ ಮುಖ್ಯರಸ್ತೆ: ಅಯೋಧ್ಯ ಮತ್ತು ಅಯೋಧ್ಯಕ್ಯಾಂಪಿನ ಗ್ರಾಮಸ್ಥರು  ಆರೋಗ್ಯ, ಪೇಟೆ, ಶಾಲೆ-ಕಾಲೇಜು ಸೇರಿದಂತೆ ಪ್ರತಿಯೊಂದು ಅಗತ್ಯ ಸೌಲಭ್ಯಕ್ಕಾಗಿ ಗಂಗಾವತಿಯನ್ನೆ ನೆಚ್ಚಿಕೊಂಡಿದ್ದಾರೆ. ಆದರೆ ಹದಗೆಟ್ಟ ರಸ್ತೆಯಿಂದಾಗಿ ಜನರಿಗೆ ಭಾರಿ ಸಮಸ್ಯೆಯಾಗಿದೆ.

ಸಾರಿಗೆ ಸಂಸ್ಥೆಯ ವಾಹನವಂತೂ ಓಡಾಡುವುದೆ ಇಲ್ಲ. ಆಗಾಗ ಬರುತ್ತಿದ್ದ ಖಾಸಗಿ ವಾಹನಗಳು ಕೂಡ ರಸ್ತೆ ಅವಸ್ಥೆಯಿಂದಾಗಿ ಸ್ಥಗಿತವಾಗಿವೆ. ಗ್ರಾಮಸ್ಥರು ಕಾಡಿನ ವಾಸಿಗಳಂತೆ ಗ್ರಾಮದಿಂದ ಮೂರು ಕಿ.ಮೀ. ದೂರದ ಕಂಪ್ಲಿ ತಿರುವಿಗೆ ನಡೆದು ಬರಬೇಕು. ಅಲ್ಲಿಂದ ವಾಹನ ಏರಿ ಗಂಗಾವತಿಗೆ ಬರಬೇಕಾದ ಸ್ಥಿತಿ ಎದುರಿಸುತ್ತಿದ್ದಾರೆ. ‘ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು-ಮಕ್ಕಳು, ವೃದ್ಧರು-ರೋಗಿಗಳಿಗೆ ಗಂಗಾವತಿಗೆ ಬರುವುದು ಸವಾಲಿನ ಕೆಲಸವಾಗುತ್ತಿದೆ’ ಎಂದು ಗ್ರಾಮದ ಆಂಜನೇಯ ಹೇಳುತ್ತಾರೆ. ‘ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಗ್ರಾಮಸ್ಥರು ಬಹು ನಿರೀಕ್ಷೆಯಿಂದ ವಿಜಯಲಕ್ಷ್ಮಿಗೆ ಮತಹಾಕಿ ಗೆಲ್ಲಿಸಿದ್ದಾರೆ. ಜನರ ವಿಶ್ವಾಸಕ್ಕೆ ತಕ್ಕಂತೆ ಸದಸ್ಯೆ ಗ್ರಾಮಸ್ಥರ ಅಗತ್ಯ ಸೌಲಭ್ಯಕ್ಕೆ ಯತ್ನಿಸಬೇಕಿದೆ’ ಎಂದು ಡಿ. ವಿಜಯಕುಮಾರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.