ADVERTISEMENT

`ರೈತನಂತೆ ಎಲ್ಲರೂ ಕರ್ಮಯೋಗಿಗಳಾಗಿರಿ'

ಶಿವಾನಂದ ಕರ್ಕಿ
Published 4 ಏಪ್ರಿಲ್ 2013, 6:56 IST
Last Updated 4 ಏಪ್ರಿಲ್ 2013, 6:56 IST

ಕುಕನೂರು:  ದೇಹ, ಮನಸ್ಸು ದಣಿಸಿ ಬೆವರಿಳಿಸುತ್ತ ಇಡೀ ದೇಶಕ್ಕೆ ಅನ್ನ ನೀಡುವ ರೈತನಂತೆ ಪ್ರತಿಯೊಬ್ಬರೂ ಕರ್ಮಯೋಗಿಗಳಾದರೆ ದೇಶ ಸಂಪತಬ್ಧರಿತ ಆಗುತ್ತದೆ ಎಂದು ಕೊಪ್ಪಳ ಗವಿಸಿದ್ದೇಶ್ವರ ಮಹಾಸ್ವಾಮೀಜಿ ನುಡಿದರು.

ಇಲ್ಲಿಯ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಮೈದಾನದಲ್ಲಿ ಭಾನುವಾರ 3ನೇ ದಿನದ ಪ್ರವಚನ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲ ದಾನಕಿಂತ ಅನ್ನದಾನ ಮೇಲು ಎನ್ನುವ ಉಕ್ತಿಯಂತೆ, ರೈತ ಈ ದೇಶದ ಬೆನ್ನೆಲುಬು, ಆತನ ಜೊತೆ ದುಡಿಯುತ್ತಿರುವವರು ಕೂಡ ಕರ್ಮಯೋಗಿಗಳು. ಹೆಚ್ಚಿನ ಆಸೆ ಪಡದೆ, ದುಡಿದಷ್ಟು ಪ್ರತಿಫಲವನ್ನು ಮಾತ್ರ ಪ್ರೀತಿಯಿಂದ ಗೌರವದಿಂದ ಸಂಪಾದಿಸುತ್ತಾನೆ. ಈ ದೇಶದ ಭವಿಷ್ಯ ರೂಪಿಸುವಲ್ಲಿ ಪೂರಕ ಆಗಬಲ್ಲ ಶಿಕ್ಷಕರು, ಎಂಜಿನಿಯರು, ವೈದ್ಯರು, ಜನಪ್ರತಿನಿಧಿಗಳು ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದರ ಪರಿಣಾಮದಿಂದ ದೇಶ ಅಧೋಗತಿಗೆ ಹೋಗಿದೆ.

ಆಗಿ ಹೋದ ಶರಣರ, ತತ್ವಪುರುಷರ ಹಾಗೂ ಮಹಾನ್ ವ್ಯಕ್ತಿಗಳ ಕಂಡ `ಸಂಪದ್ಭರಿತ ದೇಶ' ಕನಸನ್ನು ಸಾಕಾರಗೊಳಿಸಲು ಎಲ್ಲರೂ ಪ್ರತಿಜ್ಞೆ ಮಾಡಬೇಕು ಎಂದು ಸಲಹೆ ನೀಡಿದ ಅವರು, ಬಾಂಬ್ ಹಾಕಿದ ಪರಿಣಾಮದಿಂದ ಸರ್ವನಾಶ ಕಂಡಿದ್ದ ಜಪಾನ್ ದೇಶದ ಹಿರೋಸಿಮಾ ನಾಗಾಸಾಕಿ, ಇಂದು ಅಭಿವೃದ್ಧಿಯಲ್ಲಿ ಇಡೀ ವಿಶ್ವದಲ್ಲೇ ಮುಂದು ಇರಬೇಕಾದಲ್ಲಿ ಆ ದೇಶದ ಜನರು ಕಷ್ಟ ಜೀವಿಗಳಾಗಿದ್ದರಿಂದಾಗಿ ಎನ್ನುವ ಅಂಶವನ್ನು ಅರಿಯಬೇಕು. `ದೇಹ ಎಂಬುದು ತುಂಬಿದ ಬಂಡಿ, ಅದು ಸರಳವಾಗಿ ಚಲಿಸಬೇಕಾದಲ್ಲಿ ಪ್ರವಚನ ಎಂಬ ಕೀಲು ಹಾಕಬೇಕು' ಎಂದು ಮಾರ್ಮಿಕವಾಗಿ ಹೇಳುತ್ತ, ಸತ್ಸಂಗ, ಸಂಸಾರ, ಮಾತು ಹೇಗಿರಬೇಕು ಎಂದು ದೃಷ್ಟಾಂತದ ಮೂಲಕ ನೆರೆದ ಸಾವಿರಾರು ಭಕ್ತ ಸಮೂಹಕ್ಕೆ ಕಿವಿ ಮಾತು ಹೇಳಿದರು.

ಹಂಪಿ ವಿಶ್ವವಿದ್ಯಾಲಯದಿಂದ `ನಾಡೋಜ' ಪ್ರಶಸ್ತಿ ಪುರಸ್ಕೃತರಾದ ಮುಂಡರಗಿ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ನಾಗರಿಕ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡುತ್ತ, ಐತಹಾಸಿಕ ಹಾಗೂ ಶಿವಶರಣ ನಾಡಿನಲ್ಲಿ ಪ್ರವಚನ ಹಮ್ಮಿಕೊಂಡಿದ್ದು ಸ್ತುತ್ಯ. ವಾತಾವರಣ ಎಲ್ಲೆಡೆ ಇಂದು ಕಲುಷಿತಗೊಂಡಿದೆ. ಜಾತಿ, ಮತ, ಭೃಷ್ಟಾಚಾರ, ವಂಚನೆ ಹೋಗಲಾಡಿಸಲು ಆಧ್ಯಾತ್ಮ ಚಿಂತನೆ ಅತ್ಯವಶ್ಯವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.