ಕಾರಟಗಿ: ಇಲ್ಲಿಯ ಕನಕದಾಸ ವೃತ್ತದಲ್ಲಿ ಲಾರಿಯ ಮುಂದಿನ ಬಿಡಿಭಾಗ (ಆ್ಯಕ್ಸೆಲ್) ಕತ್ತರಿಸಿದ್ದರಿಂದ ಬುಧವಾರ ನಸುನಿಕ ಜಾವದಿಂದ ಸಂಜೆಯವರೆಗೆ ಮಧ್ಯೆ, ಮಧ್ಯೆ ಸಂಚಾರಕ್ಕೆ ತೀವ್ರವಾದ ತೊಂದರೆಯಾದ ಘಟನೆ ಬುಧವಾರ ಇಲ್ಲಿ ಜರುಗಿತು.
ಸದಾ ಜನನಿಬಿಡವಾಗಿರುವ ಕನಕದಾಸ ವೃತ್ತದಲ್ಲಿ ಲಾರಿ ರಸ್ತೆಗೆ ಚಾಚಿಕೊಂಡು ನಿಂತಿದ್ದರಿಂದ, ರಸ್ತೆಯವರೆಗೆ ಬ್ಯಾನರ್ ಕಟ್ಟಲು ಬೊಂಬುಗಳನ್ನು ಹಾಕಿದ್ದರಿಂದ, ನಿಯಂತ್ರಣಕ್ಕೆ ಪೊಲೀಸರು ಇರದಿದ್ದರಿಂದ ಇಡೀ ದಿನ ಸಂಚಾರಕ್ಕೆ ತೊಂದರೆಯಾಗಿ, ಟ್ರಾಫಿಕ್ ಜಾಮ್ ಆಗುವುದು ಸಹಜವಾಗಿತ್ತು.
ಶಾಲೆ ಬಿಟ್ಟ ಸಮಯದಲ್ಲಿ ಈ ಸ್ಥಳದಲ್ಲಿ ಭಾರಿ ಗಾತ್ರದ ಲಾರಿ ಹೋಗುವಾಗ ಟ್ರಾಫಿಕ್ ಜಾಮ್ ಆಗಿ ಸುಮಾರು ಒಂದು ಕಿ.ಮೀ.ವರೆಗೆ ಎರಡೂ ಭಾಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಒಂದು ತಾಸಿಗೂ ಅಧಿಕ ಅವಧಿಯವರೆಗೆ ವಾಹನಗಳು ನಿಂತ ಜಾಗೆಯಿಂದ ಕದಲಲಿಲ್ಲ.
ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಬರುವವರು, ಶಾಲಾ ವಾಹನಗಳು ಎಲ್ಲೆಂದರಲ್ಲಿ ನಿಂತಿದ್ದರಿಂದ ಪಾಲಕರು ಆತಂಕಗೊಂಡು ಮಕ್ಕಳ ಹುಡುಕಾಟದಲ್ಲಿ ನಿರತರಾಗಿರುವುದು ಕಂಡುಬಂತು. ಕೆಲ ವಾಹನಗಳು ಪರ್ಯಾಯ ಮಾರ್ಗವಾಗಿ ಸುರಕ್ಷಿತವಾಗಿ ಪಾರಾದವು.
ಒಬ್ಬ ಪೊಲೀಸ್ ಪೇದೆಯನ್ನು ನಿಯೋಜಿಸಲಾಗಿತ್ತಾದರೂ ಭಾರಿ ಪ್ರಮಾಣದ ವಾಹನ ಸಂಚಾರ ನಿಯಂತ್ರಿಸುವುದಕ್ಕೆ ಹರಸಾಹಸ ಪಡಬೇಕಾಯಿತು. ಪ್ರತಿದಿನವೂ ಖಾಸಗಿ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುವುದು, ಸಂಚಾರಕ್ಕೆ ತೊಂದರೆಯಾಗುವುದು, ಟ್ರಾಫಿಕ್ ಜಾಮ್ ಆಗುವುದು, ವಾಹನಗಳವರೆ ಸ್ವನಿಯಂತ್ರಣ ಮಾಡಿಕೊಂಡು ಹೋಗುವುದು, ಸಿಬ್ಬಂದಿ ಕೊರತೆ ಎಂದು ಪೊಲೀಸ್ ಅಧಿಕಾರಿಗಳು ಸಿದ್ಧ ಉತ್ತರ ನೀಡುವುದು ಸಾಮಾನ್ಯವಾಗಿದೆ.
ರಸ್ತೆಯವರೆಗೆ ವ್ಯಾಪಾರಿಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಣೆ ಮಾಡಿಕೊಂಡಿದ್ದರೂ, ಮುಖ್ಯರಸ್ತೆಗೆ ಫ್ಲೆಕ್ಸ್, ಬ್ಯಾನರ್ಗಾಗಿ ಬೊಂಬು, ಬಲ್ಲೀಸ್ಗಳನ್ನು ಹಾಕಿದ್ದರಿಂದ ಸಂಚಾರಕ್ಕೆ ಸದಾ ತೊಂದರೆಯಾಗುತ್ತಲೆ ಇರುತ್ತದೆ. ಸಂಬಂಧಿಸಿದವರು ನಿಯಂತ್ರಣದತ್ತ ಗಮನಹರಿಸಿ, ಕ್ರಮಕ್ಕೆ ಮುಂದಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.