ADVERTISEMENT

ವಸತಿ ಯೋಜನೆ: ಮನೆ ನಿರ್ಮಾಣ ಇಲ್ಲ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 7:05 IST
Last Updated 22 ಸೆಪ್ಟೆಂಬರ್ 2011, 7:05 IST

ಕೊಪ್ಪಳ: ಗುಡಿಸಲು ರಹಿತ ರಾಜ್ಯವನ್ನಾಗಿ ಮಾಡುವುದಾಗಿ ಬಿಜೆಪಿ ಹೇಳುತ್ತಿದೆ. ಆದರೆ, ಇದುವರೆಗೆ ಒಂದೇ ಒಂದು ಮನೆ ನಿರ್ಮಾಣಕ್ಕ ಅಡಿಗಲ್ಲು ಹಾಕಿಲ್ಲ. ಇದಕ್ಕೆ ವಸತಿ ಸಚಿವ ವಿ.ಸೋಮಣ್ಣ ರಾಜ್ಯದ ಜನತೆಗೆ ಉತ್ತರಿಸಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.

ನಗರದಲ್ಲಿ ಬುಧವಾರ ಪಕ್ಷದ ಚುನಾವಣಾ ಕಚೇರಿಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಹಾಗೂ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶೆಂಪೂರ, ವಿವಿಧ ವಸತಿ ಯೋಜನೆಯಡಿ ಒಂದೂ ಮನೆ ನಿರ್ಮಾಣ ಕಾರ್ಯ ಆರಂಭವಾಗಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಅಭಿವೃದ್ದಿ ಆಗಿದ್ದರೆ ಅದು ಈ ಸರ್ಕಾರದ ಸಚಿವರ ಮತ್ತು ಬಿಜೆಪಿ ಶಾಸಕರದ್ದು ಮಾತ್ರ ಎಂದು ಟೀಕಿಸಿದರು.

ಶಾಸಕರಿಗೆ ನೀಡುವ ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಬರ ಪರಿಹಾರ ನಿಧಿಯಡಿ ಬಿಜೆಪಿ ಶಾಸಕರಿಗೆ ಸಾಕಷ್ಟು ಹಣ ನೀಡಲಾಗುತ್ತಿದೆ. ಆದರೆ, ನನ್ನ ಕ್ಷೇತ್ರಕ್ಕೆ 15 ಲಕ್ಷ ರೂಪಾಯಿ ಮಾತ್ರ ನೀಡಲಾಗಿದೆ ಎಂದು ದೂರಿದರು.

ತಾಲ್ಲೂಕಿನ ಹೊರತಟ್ನಾಳ್ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಇದೆ. ಸರ್ಕಾರ ಸ್ಪಂದಿಸದೇ  ಇರುವ ಕಾರಣ ಗ್ರಾಮಸ್ಥರೇ ವಂತಿಗೆ ಸಂಗ್ರಹಿಸಿ ಕೊಳವೆಬಾವಿ ಕೊರೆಸಿರುವುದು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿದು ಬಂತು. ಕುಡಿಯುವ ನೀರಿನ ಕಾಮಗಾರಿಗೂ ಬಿಜೆಪಿ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ದೂರಿದರು.

ಗ್ರಾಮದ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಪಕ್ಷದ ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಹೋರಾಟ ಏಕೆ ನಡೆಸಲಿಲ್ಲ ಎಂಬ ಪೃಶ್ನೆಗೆ ಸಮರ್ಪಕ ಉತ್ತರ ನೀಡಲು ತಡವರಿಸಿದ ಬಂಡೆಪ್ಪ, ಈ ವಿಷಯದಲ್ಲಿ ಪಕ್ಷವು ವಿಫಲವಾಗಿದೆ ಎಂದು ಒಪ್ಪಿಕೊಂಡರು.

ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ಮಾಲಿಪಾಟೀಲ ಪರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಪ್ರದೀಪಗೌಡ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ಕೇದಾರಲಿಂಗಯ್ಯ ಹಿರೇಮಠ, ವಿಧಾನ ಪರಿಷತ್ ಸದಸ್ಯ ಹುಲಿನಾಯಕ, ದೇವೇಗೌಡ ತೆಲ್ಲೂರು, ವಕ್ತಾರ ಜಗದೀಶಗೌಡ ತೆಗ್ಗಿನಮನಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.