ADVERTISEMENT

ವಿಜಯನಗರ ಪದವಿಪೂರ್ವ ಕಾಲೇಜು: 22ರಂದು ಸುವರ್ಣ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 11:08 IST
Last Updated 19 ಡಿಸೆಂಬರ್ 2013, 11:08 IST

ಕೊಪ್ಪಳ: ತಾಲ್ಲೂಕಿನ ಮುನಿರಾಬಾದನಲ್ಲಿರುವ ವಿಜಯನಗರ ಸಂಯುಕ್ತ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭ ಡಿ. 22 ಹಾಗೂ 23ರಂದು ನಡೆಯಲಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಸಹಕಾರ್ಯದರ್ಶಿ ಜೆ.ಎಸ್‌.ನೇಪಾಕ್ಷಪ್ಪ, ಡಿ. 22ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಆವರಣದಲ್ಲಿ ನಡೆಯುವ ಸುವರ್ಣ ಮಹೋತ್ಸವ ಸಮಾರಂಭವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಉದ್ಘಾಟಿಸುವರು ಎಂದರು.

ಬಳ್ಳಾರಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಅಧ್ಯಕ್ಷತೆ ವಹಿಸುವರು. ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಎಚ್.ಕೆ.ಪಾಟೀಲ್ ವಿವಿಧ ಕಟ್ಟಡಗಳ ಶಿಲಾನ್ಯಾಸವನ್ನು ನೆರವೇರಿಸುವರು.

ಪೂರ್ವ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೂಮಿಪೂಜೆ ನೇರವೇರಿಸುವರು. ಕಾಯಂ ವೇದಿಕೆಯ ಶಿಲಾನ್ಯಾಸವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಟಿ.ಜನಾರ್ದನ ನೆರವೇರಿಸುವರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ವಹಿಸುವರು ಎಂದು ವಿವರಿಸಿದರು.

ಅದೇ ದಿನ ಮಧ್ಯಾಹ್ನ 2.30 ಕ್ಕೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಂಜೆ ಕಿರುತೆರೆ ನಟ ಸಂದೀಪ್ ಅವರಿಂದ ಪ್ರಹಸನ, ಗಂಗಾವತಿಯ ಪ್ರಾಣೇಶ್ ಹಾಗೂ ತಂಡದವರಿಂದ ಹಾಸ್ಯ ಸಂಜೆ ನಡೆಯಲಿದೆ ಎಂದರು.

23ರಂದು ಬೆಳಿಗ್ಗೆ 10 ಗಂಟೆಗೆ ಮುನಿರಾಬಾದಿನ ಪಶುವೈದ್ಯಾಧಿಕಾರಿ ಡಾ.ಜೆ.ಎಸ್.ಅಶ್ವತ್ಥ ಕುಮಾರ್ ಅಧ್ಯಕ್ಷತೆಯಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಆರೋಗ್ಯ ಮತ್ತು ಶಿಕ್ಷಣ ಕುರಿತು ಹೈದರಾಬಾದಿನ ಕಾಮಿನೇನಿ ಆಸ್ಪತ್ರೆಯ ಅರಿವಳಿಕೆ ತಜ್ಞ ಹಾಗೂ ಶಾಲೆಯ ಹಳೇ ವಿದ್ಯಾರ್ಥಿ ಡಾ.ಮುರಳೀಧರ ಜೋಷಿ ಉಪನ್ಯಾಸ ನೀಡುವರು.

‘ಆಧುನಿಕ ತಂತ್ರಜ್ಞಾನದ ಅಬ್ಬರದಲ್ಲಿ ಗೌಣವಾಗುತ್ತಿರುವ ಪಾರಂಪರಿಕ ಶಿಕ್ಷಣ ವ್ಯವಸ್ಥೆ’ ಎಂಬ ವಿಷಯ ಕುರಿತು ವಿಶ್ರಾಂತ ಪ್ರಾಧ್ಯಾಪಕ ಇಟಗಿ ಈರಣ್ಣ ಉಪನ್ಯಾಸ ನೀಡುವರು. ಅದೇ ದಿನ ಮಧ್ಯಾಹ್ನ 2.30 ಕ್ಕೆ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

1963 ರಲ್ಲಿ ಆರಂಭಗೊಂಡ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡಿರುವ ಅನೇಕರು ಶಾಸಕರು,  ವೈದ್ಯರಾಗಿದ್ದಾರೆ. ಇನ್ನೂ ಕೆಲವರು ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಇದೇ ಸಮಾರಂಭದಲ್ಲಿ ಹಳೇ ವಿದ್ಯಾರ್ಥಿಗಳು ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ಸದ್ಯ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಸತ್ಕರಿಸಲಾಗುವುದು ಎಂದು ತಿಳಿಸಿದರು.
ಡಾ.ಆನಂದ, ಬಸವರಾಜ, ರಾಜೇಂದ್ರ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.