ADVERTISEMENT

ವಿಜೃಂಭಣೆಯ ಆಚರಣೆಗೆ ಸಹಕಾರ-: ಡಿಸಿ

ಜ.18ರಿಂದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ; 4ಲಕ್ಷ ಭಕ್ತರ ಆಗಮನ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 9:00 IST
Last Updated 4 ಜನವರಿ 2014, 9:00 IST

ಕೊಪ್ಪಳ: ಈ ಭಾಗದ ಆರಾಧ್ಯ ದೈವ ಗವಿಸಿದ್ಧೇಶ್ವರ ಮಠದಲ್ಲಿ ಜ. 18ರಿಂದ ನಡೆಯಲಿರುವ ಜಾತ್ರಾ ಮಹೋತ್ಸ­ವವು ವಿಜೃಂಭಣೆಯಿಂದ ಹಾಗೂ ಸುಗ­ಮವಾಗಿ ನೆರವೇರಲು ಜಿಲ್ಲಾಡಳಿತ ಸಹ­ಕಾರ ನೀಡಲಿದೆ ಎಂದು ಜಿಲ್ಲಾಧಿ­ಕಾರಿ ಕೆ.ಪಿ. ಮೋಹನ್‌ರಾಜ್‌ ಹೇಳಿದರು.

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸ­ವದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಸಿದ್ಧತೆ ಹಾಗೂ ಭದ್ರತಾ ನಿರ್ವಹಣೆ ಕುರಿತಂತೆ ಗುರುವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗವಿಸಿದ್ದೇಶ್ವರ ಜಾತ್ರೆ ದಕ್ಷಿಣ ಭಾರ­ತದ ಕುಂಭಮೇಳ ಎಂದೇ ಖ್ಯಾತಿಯನ್ನು ಪಡೆದಿದ್ದು, ಜಾತ್ರೆ ಇಡೀ ರಾಜ್ಯಕ್ಕೆ ಸಂಭ್ರಮ ತರುವಂತಾಗಬೇಕು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 3 ರಿಂದ 4 ಲಕ್ಷ ಭಕ್ತರು ಜಾತ್ರೆಗೆ ಆಗಮಿಸುವ ನಿರೀಕ್ಷೆ ಇದೆ.  ಜ. 18 ರಂದು ಮಹಾರಥೋತ್ಸವ ನಡೆಯ­ಲಿದ್ದು, ಉತ್ತಮ ಸೌಲಭ್ಯ ಒದಗಿಸುವ ಸಲುವಾಗಿ ಈಗಾಗಲೇ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.

ಒಳಚರಂಡಿ ಕಾಮಗಾರಿಗಾಗಿ ನಗರದ ಪ್ರಮುಖ ರಸ್ತೆಗಳು ಹಾಳಾ­ಗಿದ್ದು, ಈ ಪೈಕಿ 11 ರಸ್ತೆಗಳನ್ನು ₨ 15 ಲಕ್ಷ  ವೆಚ್ಚದಲ್ಲಿ ನಗರಸಭೆಯಿಂದ ದುರಸ್ತಿಗೊಳಿಸಲಾಗುವುದು.  ಸಿಂಪಿ ಲಿಂಗಣ್ಣ ರಸ್ತೆ, ಸಾಲಾರ್ ಜಂಗ್ ರಸ್ತೆ, ಕಾತರಕಿ ರಸ್ತೆ, ಗವಿಮಠದಿಂದ ಗಡಿಯಾರಕಂಬ. ಹೈದರಾಲಿ ವೃತ್ತ­ದಿಂದ ದುರ್ಗಮ್ಮನಗುಡಿ, ಗಾಂಧಿ ವೃತ್ತದಿಂದ ದಿವಟರ್ ವೃತ್ತ, ಗಡಿಯಾರ ಕಂಬದಿಂದ ಬೆನಕನ ಗುಡಿವರೆಗೆ ಹೀಗೆ ವಿವಿಧ ರಸ್ತೆಗಳ ದುರಸ್ತಿಗೆ ಯೋಜನೆ ರೂಪಿಸಿದ್ದು, ಎರಡು ದಿನಗಳ ಒಳಗಾಗಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಭೆಗೆ ತಿಳಿಸಿದರು.

ರಥೋತ್ಸವದ ದಿನದಂದು ಸಂಚಾರ ದಟ್ಟಣೆ ಆಗದಂತೆ ಎಚ್ಚರ ವಹಿಸಲು ಈಗಾಗಲೇ ಪೊಲೀಸ್ ಇಲಾಖೆ ಯೋಜ­ನೆಯನ್ನು ರೂಪಿಸಿದೆ.  ಜಾತ್ರೆಯ ಯಶಸ್ವಿಗೆ ಜಿಲ್ಲಾಡಳಿತದಿಂದ ಸಹಾಯಕ ಆಯುಕ್ತ ಮಂಜುನಾಥ್ ಅವರನ್ನು ನೋಡಲ್ ಅಧಿಕಾರಿ­ಯನ್ನಾಗಿ ನೇಮಿಸಲಾಗಿದೆ ಎಂದರು.

ಸ್ವಚ್ಛತೆಗೆ ಆದ್ಯತೆ: ಜಾತ್ರೆಯ ಸಂದ­ರ್ಭದಲ್ಲಿ ನಗರದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಸಾರ್ವಜನಿಕರಿಗೆ ಕುಡಿಯುವ ನೀರು ಸಮರ್ಪಕವಾಗಿ ದೊರೆಯಬೇಕು. ವಿದ್ಯುತ್ ಪೂರೈಕೆ­ಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಬೇಕು.  ತುರ್ತು ಆರೋಗ್ಯ ಸೇವೆ, ಮುಂಜಾಗ್ರತೆಯ ಕ್ರಮವಾಗಿ ಗವಿ­ಮಠದ ಬಳಿ ಅಗ್ನಿಶಾಮಕ ವಾಹನವನ್ನು ಸಿದ್ಧವಾಗಿರಿಸಿಕೊಳ್ಳಬೇಕು.  ಜಾತ್ರೆಯ ಅಂಗವಾಗಿ ಈ ಬಾರಿ ಸುಮಾರು 100 ಕ್ಕೂ ಹೆಚ್ಚು ತಾತ್ಕಾಲಿಕ ಶೌಚಾಲಯ­ಗಳನ್ನು ನಿರ್ಮಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೊಲೀಸ್ ಬಂದೋಬಸ್ತ್:  ಸಭೆ­ಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಮಾತನಾಡಿ, ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾ­ಗುವುದು ಎಂದರು.

ಹೊರ ಜಿಲ್ಲೆಯಿಂದ 2 -ಡಿವೈಎಸ್ಪಿ, 14- ಸಿಪಿಐ, 33- ಪಿಎಸ್ಐ, 57- ಎಎಸ್ಐ, 600- ಪಿ.ಸಿ., 150- ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾ­ಗುವುದು. ಜಿಲ್ಲೆಯಿಂದ ಸುಮಾರು 150 ಪೊಲೀಸ್ ಕಾನ್ಸ್‌ಟೇಬಲ್, 200- ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸ­ಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಜಾತ್ರೆಯ ಹತ್ತು ದಿನಗಳಿಗೂ ಮುನ್ನ ಗವಿಮಠದ ಬಳಿ ತಾತ್ಕಾಲಿಕವಾಗಿ ಪೊಲೀಸ್ ಹೊರ ಠಾಣೆ ಸ್ಥಾಪಿಸಲಾ­ಗುವುದು.  ನಗರದ ಬಸವೇಶ್ವರ ವೃತ್ತ (ಗಂಜ್ ಸರ್ಕಲ್) ನಲ್ಲಿ ಹತ್ತು ದಿನಗಳ ಒಳಗಾಗಿ ಸಿಗ್ನಲ್ ಲೈಟ್ ಅಳವಡಿಸ­ಲಾಗುವುದು ಎಂದರು.

ಸಿಸಿ ಕ್ಯಾಮೆರಾ: ನಗರಠಾಣೆ ಪಿಐ ವಿಜಯ್ ಬಿರಾದಾರ್ ಮಾತನಾಡಿ, ಮುಂಜಾಗ್ರತಾ ಕ್ರಮವಾಗಿ ಇದೇ ಪ್ರಥಮ ಬಾರಿಗೆ ಸುಮಾರು 6 ಕಡೆ­ಗಳಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಅಳವ­ಡಿಸಲು ನಿರ್ಧರಿಸಲಾಗಿದೆ.  ವಾಹನ ದಟ್ಟಣೆ ತಡೆಗಟ್ಟಲು ನಗರದಲ್ಲಿ ಹಾದು­ಹೋಗಿರುವ ರಾಷ್ಟ್ರೀಯ ಹೆದ್ದಾರಿ­ಯಲ್ಲಿ ಹೆಚ್ಚಿನ ವಾಹನಗಳ ಸಂಚಾರ ನಿಯಂತ್ರಣಕ್ಕಾಗಿ ಮಾರ್ಗಗಳ ಬದಲಾ­ವಣೆ ಮಾಡಲಾಗುವುದು ಎಂದರು.

ದ್ವಿಚಕ್ರ ವಾಹನ, ಟ್ರ್ಯಾಕ್ಟರ್, ಲಾರಿ, ಜೀಪ್, ಕಾರು ಮುಂತಾದ ವಾಹನಗಳ ಪಾರ್ಕಿಂಗ್ ಮಾಡಲು ಈಗಾಗಲೆ ಸ್ಥಳ­ಗಳನ್ನು ಗುರುತಿಸಲಾಗಿದೆ. ಜಾತ್ರೆ ಸಂದ­ರ್ಭದಲ್ಲಿ ಜೇಬುಗಳ್ಳತನ ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳ­ಲಾಗುವುದು.  ಕಳೆದ ವರ್ಷ ಇಂತಹ ಸುಮಾರು 23 ಜೇಬುಗಳ್ಳರನ್ನು ಬಂಧಿಸಲಾಗಿತ್ತು ಎಂದರು.

ಡಿವೈಎಸ್ಪಿ ರಾಜೀವ್ ಎಂ., ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್, ಸಹಾಯಕ ಆಯುಕ್ತ ಮಂಜುನಾಥ್, ತಹಸಿಲ್ದಾರ್ ಚಂದ್ರಕಾಂತ್, ಪೌರಾ­ಯುಕ್ತ ರುದ್ರಮುನಿ, ಸಹಾಯಕ ಎಂಜಿ­ನಿ­ಯರ್ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ಡಾ.ಎಸ್‌.ಬಿ. ದಾನರೆಡ್ಡಿ, ಡಾ. ಎಂ.ಎಂ.ಕಟ್ಟಿಮನಿ , ಗಣ್ಯರಾದ ಎಸ್.ಆರ್.ನವಲಿ ಹಿರೇ­ಮಠ, ಮಲ್ಲಿಕಾರ್ಜುನ ಸೋಮಲಾ­ಪುರ, ಗವಿಮಠದ ಶರಣು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.