ADVERTISEMENT

ವಿಜೃಂಭಣೆಯ ಚಂದಾಲಿಂಗೇಶ್ವರ ಜಾತ್ರೆ

‘ಹಿಂಗಾರು- ಮುಂಗಾರು ತಕಟ ಮಸಾನ’ ಹೊಗ್ಗಯ್ಯನ ನುಡಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 9:42 IST
Last Updated 3 ಅಕ್ಟೋಬರ್ 2017, 9:42 IST

ಹನುಮಸಾಗರ: ರೈತರ ಜಾತ್ರೆ ಎಂದೇ ಬಿಂಬಿತವಾಗಿರುವ ಸಮೀಪದ ಐತಿಹಾಸಿಕ ಕ್ಷೇತ್ರ ಚಂದಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಜಾತ್ರೆ, ನುಡಿ ಹೇಳುವುದು, ಕಬ್ಬಿಣ ಸರಪಳಿ ಹರಿಯುವಂತಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.

ಬಿತ್ತನೆಯ ಆರಂಭದಲ್ಲಿ ಹಾಗೂ ಸುಗ್ಗಿ ಸಂದರ್ಭದಲ್ಲೊಂದರಂತೆ ವರ್ಷದಲ್ಲಿ ಎರಡು ಬಾರಿ ನಡೆಯುವ ಈ ಜಾತ್ರೆ ರೈತರಿಗೆ ಮಾರ್ಗದರ್ಶನ ತೋರುವ ಹಬ್ಬ ಎಂದೆ ಕರೆಯಲಾಗುತ್ತಿದೆ.

ಈ ಬಾರಿ ಹೊಗ್ಗಯ್ಯ ‘ಹಿಂಗಾರು- ಮುಂಗಾರು ತಕಟ ಮಸಾನ’ ಎಂದು ನುಡಿ ಹೇಳಿ ರೈತರಿಗೆ ಸಂತಸದ ಚಿಲುಮೆ ಮೂಡಿಸಿದರು. ಮುಂಗಾರಿಗಿಂತ ಹಿಂಗಾರು ಬೆಳೆ ಉತ್ತಮ ಫಲ ತರಲಿದೆ ಎಂದು ಹೊಗ್ಗಯ್ಯನ ನುಡಿಯ ಅರ್ಥವಾಗಿದೆ ಎಂದು ರೈತರು ಹೇಳಿದರು. ನುಡಿ ಹೊರ ಬರುವ ಸಂದರ್ಭದಲ್ಲಿ ಜನರು ಸಾವಿರಾರು ಸಂಖ್ಯೆಯಲ್ಲಿದ್ದರೂ ಎಲ್ಲರೂ ಮೌನವಹಿಸಿದರು.

ADVERTISEMENT

ಈ ಸಮಯದಲ್ಲಿ ರೈತರ ನಡುವೆ ಬಿತ್ತನೆಯ ವಿಷಯವಾಗಿ ಚರ್ಚೆಗಳು, ಬೀಜ ವಿನಿಮಯವೂ ನಡೆಯಿತು.

ನುಡಿ ಹೇಳುವ ಕಾರ್ಯಕ್ರಮ ಮುಗಿದ ಬಳಿಕ ಭವ್ಯ ಮೆರವಣಿಗೆಯಲ್ಲಿ ಹೊಗ್ಗಯ್ಯನವರು ಕಬ್ಬಿಣ ಸರಪಳಿ ಹರಿಯುವ ಪವಾಡಕ್ಕೆ ಮೆರವಣಿಗೆಯ ಮೂಲಕ ಬಂದರು. ಹಿರಿಯ ಹೊಗ್ಗಯ್ಯನವರಿಂದ ಕೊರಳಿಗೆ ಕಬ್ಬಿಣ ಸರಪಳಿ ಹಾಕಿಸಿಕೊಂಡು ಸರಪಳಿ ಕಟ್ಟುವ ಕಲ್ಲಿಗೆ ಪೂಜೆ ಸಲ್ಲಿಸಿದ ಬಳಿಕ ತಮ್ಮ ಕತ್ತಿನಿಂದ ಹಿಂದಕ್ಕೆ ಎಳೆಯುವುದರೊಂದಿಗೆ ಕಬ್ಬಿಣದ ಸರಪಳಿಯನ್ನು ತುಂಡಾಗಿಸಿದರು.

ದೇವಸ್ಥಾನದಲ್ಲಿ ಜಾತ್ರೆಯ ಅಂಗವಾಗಿ ಕಳಸಾರೋಹಣ, ವಗ್ಗಯ್ಯನವರು ಹಾಗೂ ಮರಳಯ್ಯನವರೊಂದಿಗೆ ಪಲ್ಲಕ್ಕಿ ಮೆರವಣಿಗೆ ಹೊರಟು ಗಂಗೆಸ್ನಾನ, ಭಂಡಾರ ಧರಿಸುವಂತಹ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಜಾತ್ರೆಯಲ್ಲಿ ಹನುಮಸಾಗರ, ಮನ್ನೇರಾಳ, ಬೀಳಗಿ, ಗುಡೂರ, ದಮ್ಮೂರ, ಮಲಕಾಪೂರ, ಚಳಗೇರಿ, ಸೇಬಿನಕಟ್ಟಿ, ಕಬ್ಬರಗಿ, ಹೂಲಗೇರಿ, ಯರಗೇರಿ ಗ್ರಾಮಗಳ ಭಕ್ತರು ವಿಶೇಷ ಸೇವೆ ಹಾಗೂ ಹರಕೆಗಳನ್ನು ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.