ADVERTISEMENT

ವಿದ್ಯುತ್ ಕಡಿತ ಜಿಪಂ ಸದಸ್ಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 5:45 IST
Last Updated 5 ಅಕ್ಟೋಬರ್ 2012, 5:45 IST

ಕನಕಗಿರಿ: ಕನಕಗಿರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುತ್ತಿರುವ ವಿದ್ಯುತ್ ಕಣ್ಣು ಮುಚ್ಚಾಲೆ ವಿರೋಧಿಸಿ ಇಲ್ಲಿನ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆ ಗಂಗಾವತಿ-ತಾವರಗೆರೆ ರಸ್ತೆಯಿಂದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಜೆಸ್ಕಾಂ ಕಾರ್ಯಾಲಯಕ್ಕೆ ತಲುಪಿತು.

ವಿದ್ಯುತ್ ಸರಬರಾಜು ಕೇಂದ್ರದ ಬಾಗಿಲಿಗೆ ಜಾಲಿ ಮುಳ್ಳಿನ ಗಿಡಗಳನ್ನು ಹಚ್ಚಿ ಕಾರ್ಯಕರ್ತರು ಪ್ರತಿಭಟಿಸಿದರು.
ಈ ಸಮಯದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಣ್ಣ ಸಮಗಂಡಿ ನಗರ ಪ್ರದೇಶದ ಅಕ್ಕಿ ಗಿರಣಿ (ರೈಸ್ ಮಿಲ್)ಗಳಿಗೆ 24 ತಾಸು ನಿಯಮಿತವಾಗಿ ವಿದ್ಯುತ್ ನೀಡುವ ಜೆಸ್ಕಾಂ ಇಲಾಖೆ ದೇಶಕ್ಕೆ ಅನ್ನ ಹಾಕುವ ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎಂದು ದೂರಿದರು.

ಸಮರ್ಪಕ ವಿದ್ಯುತ್ ಇಲ್ಲದೆ ರೈತರು ಕಣ್ಣೀರಲ್ಲಿ ಕೈ ತೊಳೆದು ಕೊಳ್ಳುವ ಪರಿಸ್ಥಿತಿ ಬಂದಿದೆ, ಅಲ್ಪಸ್ವಲ್ಪ ಬೆಳೆಗಳು ಮಳೆ, ನೀರು ಇಲ್ಲದೆ ಒಣಗುತ್ತಲಿವೆ ಎಂದು ತಿಳಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ಮುಕುಂದರಾವ್ ಭವಾನಿಮಠ ಮಾತನಾಡಿ ವಿದ್ಯುತ್ ಕೊರತೆ ನೀಗಿಸುವಂತೆ ಕಳೆದ ಎರಡು ವರ್ಷಗಳಿಂದಲೂ ವಿನೂತನವಾಗಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರೂ ಸರ್ಕಾರ ನಿರ್ಲಕ್ಷ್ಯ ತಾಳಿದೆ, ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ, ಚುನಾವಣೆ ಬಂದಾಗ ಮಾತ್ರ ರೈತರ ಕುರಿತು ಕಣ್ಣೀರು ಸುರಿಸುವ ಸರ್ಕಾರ ವಿದ್ಯುತ್ ನೀಡುವಲ್ಲಿ ವಿಫಲವಾಗಿದೆ ಎಂದು ದೂರಿದರು. 

ಸಮಸ್ಯೆ ಬಗೆಹರಿಸುವಂತೆ ಸಂಸದ ಶಿವರಾಮಗೌಡ ಅವರಲ್ಲಿ ರೈತರು ಭಾನುವಾರ ಮನವಿ ಮಾಡಿಕೊಂಡರೆ ಸಂಸದರು ರೈತರ ನಿಯೋಗಕ್ಕೆ ಕಿಂಚಿತೂ ಗೌರವ ಕೊಡದೆ ರೈತರೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಭವಾನಿಮಠ ದೂರಿದರು.

ರೈತ ಮುಖಂಡ ಬಾಪುಗೌಡ ಪೊಲೀಸ್ ಪಾಟೀಲ ಮಾತನಾಡಿ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಹಣ ನೀಡಿದರೂ ಸರಿಯಾಗಿ ನೀಡುತ್ತಿಲ್ಲ, ರೈತರೊಂದಿಗೆ ಸರಿಯಾಗಿ ವರ್ತಿಸದ ಅಧಿಕಾರಿಗಳು, ಇಂಧನ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಒಂದು ಹಂತದಲ್ಲಿ ಸಲ್ಲದ ಪದಗಳನ್ನು ಬಳಸಿ ಪಾಟೀಲರು ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಸದಸ್ಯ ಹೊನ್ನುರುಸಾಬ, ಯುವ ಘಟಕದ ಪದಾಧಿಕಾರಿಗಳಾದ ಸದಾನಂದ ಸಮಗಂಡಿ, ಬಿ. ವಿ. ಜೋಶಿ, ಚಂದ್ರು ಬೇಕರಿ, ಗ್ಯಾನಪ್ಪ ಚಿಕ್ಕಖೇಡ್, ಗ್ರಾಪಂ ಸದಸ್ಯರಾದ ನಾಗೇಶ ಬಡಿಗೇರ, ಕೆ. ಎಚ್. ಕುಲಕರ್ಣಿ, ಹೊನ್ನೂರುಸಾಬ ಬೀಡಿ, ಹೊನ್ನುರುಸಾಬ ಉಪ್ಪು ಯುವ ಮುಖಂಡರಾದ ಕೀರ್ತಿ ಸೋನಿ, ಟಿ. ಜೆ. ಶ್ರೀ ನಿವಾಸ, ಅಂಬಣ್ಣ, ಉಮಾಪತಿ, ಇಮಾಮಹುಸೇನ, ಲಕ್ಷ್ಮಣ ಭಜಂತ್ರಿ,, ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.