ಕಾರಟಗಿ: ಇಲ್ಲಿಯ ದಲಾಲಿ ಬಜಾರ್‌ನ ಸಿಸಿ ರಸ್ತೆ ನಿರ್ಮಾಣ ವಿವಾದದಲ್ಲೆ ಮುಕ್ತಾಯಗೊಂಡಿದೆ. ಬೆನ್ನ ಹಿಂದೆಯೆ ಮತ್ತೊಂದು ಸಮಸ್ಯೆ ಇದೀಗ ಎದುರಾಗಿದೆ. ವ್ಯವಸ್ಥೆಯ ನಿರ್ಲಕ್ಷ್ಯತನ ಖಂಡಿಸಿಗುಡ್ಡದಾಕಾರದಲ್ಲಿಯ ತಾಜ್ಯವನ್ನು ರಸ್ತೆಗೆ ಹಾಕಿ ಪ್ರತಿಭಟನೆ ನಡೆಸುತ್ತಿರುವುದು ಸೋಮವಾರ ಕಂಡುಬಂತು.
ಉದ್ದೇಶಿತ ಯೋಜನೆಯಂತೆ 40 ಅಡಿ ಅಗಲದ ರಸ್ತೆ, 10 ಅಡಿಯಲ್ಲಿ ಎರಡೂ ಕಡೆ ಚರಂಡಿ ನಿರ್ಮಾಣ ಮಾಬೇಕಿತ್ತು. ಆದರೆ ಒಂದು ಕಡೆ ವರ್ತಕರೆ ಸ್ವಂತ ಹಣದಲ್ಲಿ ಚರಂಡಿ ನಿರ್ಮಿಸಿಕೊಂಡಿದ್ದಾರೆ. ಇನ್ನೊಂದು ಬದಿ ಚರಂಡಿ ನಿರ್ಮಿಸಬೇಕಿರುವ ನಿರ್ಮಿತಿ ಕೇಂದ್ರ ಕಾಮಗಾರಿ ಮುಗಿಸಿ ಕೈತೊಳೆದುಕೊಂಡಿದೆ.
ವರ್ತಕರು ಸಾವಿರಾರು ರೂ. ವ್ಯಯಿಸಿ ಚರಂಡಿ ನಿರ್ಮಿಸಿಕೊಂಡಿದ್ದರೂ, ಹಿಂದಿನ ಚರಂಡಿಯಲ್ಲಿಯ ತ್ಯಾಜ್ಯವು ಎಲ್ಲಾ ಅಂಗಡಿಗಳ ಮುಂದೆ ಗುಡ್ಡದಾಕಾರದಲ್ಲಿ ಕಳೆದ ವಾರದಿಂದ ಬಿದ್ದಿದೆ. ತ್ಯಾಜ್ಯ ವಿಲೇವಾರಿ ನಮ್ಮ ಕೆಲಸ ಅಲ್ಲ ಎಂದು ನಿರ್ಮಿತಿ ಕೇಂದ್ರದವರು ಹೇಳಿದರೆ, ಇನ್ನೊಂದೆಡೆ ಗ್ರಾಪಂ ಅದೇ ಹಾಡು ಹಾಡುತ್ತಿರುವುದು ವರ್ತಕರನ್ನು ಕೆರಳಿಸಿದೆ. ಸಹನೆಯಿಂದ ಇದ್ದ ವರ್ತಕರು ಈಗ ಅಂಗಡಿಯ ಮುಂದಿರುವ ತ್ಯಾಜ್ಯವನ್ನು ರಸ್ತೆಯ ಮಧ್ಯೆ ಹಾಕಿಸಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಸಂಬಂಧಿಸಿದವರಿಗೆ ನಾಚಿಕೆ ಬರಲಿ ಎಂಬುದು ವರ್ತಕರ ವಾದ.
ತ್ಯಾಜ್ಯ ವಿಲೇವಾರಿ ಮಾಡಲು ಸಂಬಂಧಿಸಿದವರು ಇನ್ನಾದರೂ ಮುಂದಾಗುವರೆ?
ಇಂದು ಜಾಗೃತಿ ಜಾಥ: ಜಯನಗರದ ಸೇಂಟ್ ಪಾಲ್ಸ್ ಮಹಿಳಾ ಶಿಕ್ಷಣ ಸಂಸ್ಥೆಯ ಸೇಂಟ್ ಪಾಲ್ಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕಾರುಣ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ತಾಲ್ಲೂಕಿನ ಆರ‌್ಹಾಳ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಜನ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ.
ಗ್ರಾಮೀಣ ಭಾಗದ ಜನರಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶಕ್ಕೆ ವಿದ್ಯುತ್ ಉಳಿತಾಯ, ಜಲ ಮಾಲಿನ್ಯ ಮತ್ತು ಶೌಚಾಲಯ ಜಾಗೃತಿ ಅಭಿಯಾನದ ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ಜಾಥ ನಿರ್ವಹಿಸುವರು ಎಂದು ಸಂಸ್ಥೆಯ ಕಾರ್ಯದರ್ಶಿ ಸರ್ವೇಶ ವಸ್ತ್ರದ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.