ADVERTISEMENT

ವಿಶಿಷ್ಟವಾಗಿ ದೀ‍ಪಾವಳಿ ಆಚರಣೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 8:16 IST
Last Updated 21 ಅಕ್ಟೋಬರ್ 2017, 8:16 IST

ಹನುಮಸಾಗರ: ಸಮೀಪದ ವೆಂಕಟಾಪೂರ ಗ್ರಾಮದಲ್ಲಿ ಲಂಬಾಣಿಗರು ಗ್ರಾಮಸ್ಥರಿಗೆ ಪುಷ್ಪ ಹಾಗೂ ದೀಪದಾನ ಮಾಡುವುದರ ಮೂಲಕ ದೀಪಾವಳಿ ಹಬ್ಬವನ್ನು ಶುಕ್ರವಾರ ವಿಶಿಷ್ಟವಾಗಿ ಆಚರಿಸಿದರು. ಸಂಸ್ಕೃತಿ ಪ್ರತಿಬಿಂಬಿಸುವ ಹಾಡು, ನೃತ್ಯದೊಂದಿಗೆ ಬೆಳಿಗ್ಗೆ ಅರಣ್ಯಕ್ಕೆ ಹೋಗಿ ಬುಟ್ಟಿಗಳ ತುಂಬ ವಿವಿಧ ಹೂವು ತರುತ್ತಾರೆ. ಹೂವು ಕೀಳುವಾಗಿನಿಂದ ಮನೆ ಮನೆಗೆ ಹಂಚುವವರೆಗೆ ಹಾಡು ಹೇಳಲಾಗುತ್ತದೆ.

‘ಇದು ಹಿಂದಿನಿಂದ ನಡೆದು ಬಂದ ಸಂಪ್ರದಾಯವಾಗಿದೆ. ದೀಪಾವಳಿ ಪಾಡ್ಯದ ದಿನದಂದು ಗ್ರಾಮದ ಎಲ್ಲ ಮನೆಗಳಿಗೆ ಪುಷ್ಪದಾನ ಹಾಗೂ ದೀಪದಾನ ಮಾಡಿದ ಬಳಿಕ ನಾವು ದೀಪಾವಳಿ ಹಬ್ಬ ಆಚರಿಸುತ್ತೇವೆ’ ಎಂದು ಸ್ಥಳೀಯ ವೆಂಕಟೇಶ ರಾಠೋಡ ಹೇಳಿದರು.

ಕಾಡು ಕುಸುಮಗಳನ್ನು ತಂದು ಹೂಮಾಲೆ ಕಟ್ಟುವುದು, ಸಂಜೆ ಅಲಂಕಾರ ಗೊಳಿಸಲಾಗಿರುವ ಛತ್ರಿಗಳನ್ನು ಹಿಡಿದು ಹರಿದು ಹಚ್ಚಿ ಹೊಲಿದಂತಿರುವ ತಮ್ಮ ಜನಪದೀಯ ದಿರಿಸಿನಲ್ಲಿ ಸಾಮೂಹಿಕವಾಗಿ ಕೋಲು ನೃತ್ಯಕ್ಕೆ ಹೆಜ್ಜೆ ಹಾಕುವಂತಹ ವೈಭವ ಚಟುವಟಿಕೆಗಳು ವೆಂಕಟಾಪೂರ ಸೇರಿದಂತೆ ಮೆಣಸಗೇರಿ ತಾಂಡಾದಲ್ಲೂ ನಡೆಯಿತು.
ಕಾಡು ಔಡಲಗಳನ್ನು ಪೋಣಿಸಿ ದೀವಟಿಗೆ ತಯಾರಿಸಿ, ಈ ದೀವಟಿಗೆಗಳನ್ನು ಮನೆಯ ಮುಂದೆ ಉರಿಸಿ ಬೆಳಕಿನ ಹಬ್ಬ ಆಚರಿಸಲಾಯಿತು.

ADVERTISEMENT

ದೀಪಾವಳಿ ಲಂಬಾಣಿ ಸಮಾಜಕ್ಕೆ ದೊಡ್ಡ ಹಬ್ಬವಾಗಿದ್ದು, ಅಮವಾಸ್ಯೆಯ ಹಿಂದಿನ ಏಳು ದಿನಗಳನ್ನು ಇವರು ಮೀಸಲು ದಿನಗಳು ಎಂದು ಕರೆಯುತ್ತಾರೆ. ಆ ದಿನಗಳಲ್ಲಿ ಯಾವುದೇ ಕಟ್ಟಿಗೆಯನ್ನು ಕಡಿಯುವುದಾಗಲಿ, ಮಾರಾಟ ಮಾಡುವುದಾಗಲಿ ಇವರಿಗೆ ನಿಷಿದ್ಧ.

‘ನಮ್ಮಿಂದ ಪಾಂಡವ ಮೂರ್ತಿಗೆ ಪೂಜಿಸಲು ಪುಷ್ಪ ಹಾಗೂ ದೀಪದಾನ ಪಡೆದ ಗ್ರಾಮಸ್ಥರು ಹಬ್ಬದ ಖುಷಿಗೆಂದು ನಮಗೆ ಬಟ್ಟೆ, ದವಸ ಉಡುಗೊರೆ ನೀಡುತ್ತಾರೆ’ ಎಂದು ಮೆಣಸಗೇರಿಯ ಲಕ್ಷ್ಮಮ್ಮ ಹಬ್ಬದ ಸಂಪ್ರದಾಯ ಹೇಳಿದರು.

ಬೆಳಿಗ್ಗೆ ಹೂವುಗಳನ್ನು ನೀಡಿದ ಮನೆಗಳಿಗೆ ಸಂಜೆ ತೆರಳಿ ಹಣತೆಗೆ ಎಣ್ಣೆ ಹಾಕಿಸಿಕೊಂಡು ಬಂದು ಆ ಎಲ್ಲ ಹಣತೆಗಳಿಗೆ ಬತ್ತಿ ಹಾಕಿ ಒಂದಕ್ಕೆ ಹತ್ತು, ಹತ್ತಕ್ಕೆ ನೂರರಂತೆ ಹಣತೆಗಳನ್ನು ಬೆಳಗಿಸಿದರು.

‘ಆದರೆ, ಬದಲಾದ ನಾಗರಿಕತೆಯಿಂದಾಗಿ ನಮ್ಮ ಉದ್ಯೋಗ, ಜೀವನ ಶೈಲಿ ಬದಲಾಗಿದೆ. ಹಳ್ಳಿಯಿಂದ ಉದ್ಯೋಗ ಅರಸಿ ಪಟ್ಟಣದ ಕಡೆ ಅನೇಕರು ಹೋಗಿದ್ದಾರೆ. ಈ ಎಲ್ಲ ಕಾರಣಗಳಿಂದ ನಮ್ಮ ಜನಪದ ಸಂಸ್ಕೃತಿ, ಸಂಪ್ರದಾಯ ಮರೆಯಾಗುತ್ತಿದೆ’ ಎಂದು ಜಿನ್ನಪ್ಪ ಠೋಡಪ ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.