ADVERTISEMENT

ವ್ಯಾಪಕ ಮಳೆ: ಅಂಗಡಿಗಳಿಗೆ ನುಗ್ಗಿದ ನೀರು

ಜಿಲ್ಲೆಯ ವಿವಿಧೆಡೆ ಸುರಿದ ಮಳೆ: ಕುಷ್ಟಗಿಯಲ್ಲಿ ಕಡಿಮೆ, ಕೊಪ್ಪಳದಲ್ಲಿ ಹೆಚ್ಚು

​ಪ್ರಜಾವಾಣಿ ವಾರ್ತೆ
Published 21 ಮೇ 2018, 13:20 IST
Last Updated 21 ಮೇ 2018, 13:20 IST
ಕೊಪ್ಪಳ ನಗರದ ಗಡಿಗಾರಕಂಬ ಪ್ರದೇಶದ ಬಳಿ ವಾಣಿಜ್ಯ ಸಂಕೀರ್ಣಕ್ಕೆ ಮಳೆ ನೀರು ನುಗ್ಗಿ ಅಂಗಡಿಗಳಲ್ಲಿದ್ದ ಟಿವಿಗಳು ತೇಲುತ್ತಿರುವ ದೃಶ್ಯ
ಕೊಪ್ಪಳ ನಗರದ ಗಡಿಗಾರಕಂಬ ಪ್ರದೇಶದ ಬಳಿ ವಾಣಿಜ್ಯ ಸಂಕೀರ್ಣಕ್ಕೆ ಮಳೆ ನೀರು ನುಗ್ಗಿ ಅಂಗಡಿಗಳಲ್ಲಿದ್ದ ಟಿವಿಗಳು ತೇಲುತ್ತಿರುವ ದೃಶ್ಯ   

ಕೊಪ್ಪಳ: ನಗರದಲ್ಲಿ ಶನಿವಾರ ಮಧ್ಯರಾತ್ರಿ ಭಾರಿ ಗಾಳಿಯೊಂದಿಗೆ ಆರಂಭವಾದ ಮಳೆಯಿಂದ, ಮಾರುಕಟ್ಟೆ ಪ್ರದೇಶದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿ ಅಂಗಡಿಗಳಲ್ಲಿದ್ದ ಸಾಮಗ್ರಿಗಳು ಹಾಳಾಗಿವೆ.

ಬಿಸಿಲಿನ ಬೇಗೆಯಿಂದ ಬಳಲಿದ್ದ ಜನತೆಗೆ ಮೂರು ಗಂಟೆಗಳ ಕಾಲ ಸುರಿದ ಮಳೆಯಿಂದ ವಾತಾವರಣ ತಂಪಾಯಿತು. ನಗರದ ವಿವಿಧೆಡೆ ರಸ್ತೆ ದುರಸ್ತಿ ಕಾ‍‍ರ್ಯ ನಡೆಯುತ್ತಿರುವುದರಿಂದ ಮಳೆಯ ನೀರು ಎಲ್ಲೆಂದರಲ್ಲಿ ನಿಂತು ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಲ್ಲದೆ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ರಸ್ತೆ ಮೇಲೆ ನೀರು ಹರಿದು ಸಂಚಾರ ದುಸ್ತರವಾಗಿತ್ತು.

ನಗರದ ಜನನಿಬಿಡ ಪ್ರದೇಶದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದಲ್ಲದೆ ಕೆಲವು ಮನೆಗಳ ಶೀಟ್ ಹಾಗೂ ಪತ್ರಾಸ್‍ಗಳು ಹಾರಿ ಹೋಗಿವೆ. ಯಾವುದೇ ಜೀವಹಾನಿ ಆಗಿಲ್ಲ.

ADVERTISEMENT

ಅಂಗಡಿಗಳಿಗೆ ನುಗ್ಗಿದ ನೀರು: ಮಾರುಕಟ್ಟೆ ಪ್ರದೇಶದ ಗಡಿಯಾರ ಕಂಬದ ಬಳಿ ಇರುವ ವಾಣಿಜ್ಯ ಮಳಿಗೆಗೆ ನೀರು ನುಗ್ಗಿ, ಎಲೆಕ್ಟ್ರಾನಿಕ್ ವಸ್ತುಗಳು ಹಾನಿ ಆಗಿವೆ. ನೀರು ನುಗ್ಗಿದ ರಭಸಕ್ಕೆ ಅಂಗಡಿಯಲ್ಲಿದ್ದ ಟಿವಿಗಳು ತೇಲುತ್ತಿರುವುದು ಕಂಡು ಬಂತು, ಅಲ್ಲಿನ ಫೋಟೋ ಸ್ಟುಡಿಯೊಂದಕ್ಕೆ ನೀರು ನುಗ್ಗಿ, ಕಂಪ್ಯೂಟರ್, ಕ್ಯಾಮೆರಾ ಸೇರಿದಂತೆ ಎಲೆಕ್ಟಾನಿಕ್ ಸಾಮಗ್ರಿಗಳು ಹಾಳಾಗಿದ್ದವು. ಮೊಟ್ಟೆ ಅಂಗಡಿಗೆ ನೀರು ಹೊಕ್ಕು ಹಾನಿ ಆಗಿದೆ. ಈ ಅವ್ಯವಸ್ಥೆಯಿಂದ ಆಕ್ರೋಶಗೊಂಡ ವ್ಯಾಪಾರಸ್ಥರು ನಗರಸಭೆಗೆ ಹಿಡಿಶಾಪ ಹಾಕಿದರು.

ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಸಂಕೀ‍‍ರ್ಣದಲ್ಲಿ ನುಗ್ಗಿದ್ದ ನೀರನ್ನು ಹೊರ ಹಾಕಲು ಹೆಚ್ಚು ಅಶ್ವಶಕ್ತಿಯ ಪಂಪ್‌ಸೆಟ್ ಬಳಸಿದರು. ಸುಮಾರು ಮೂರು ನಾಲ್ಕುತಾಸು ನಡೆದ ಕಾರ್ಯಾಚರಣೆಯಲ್ಲಿ ನೀರನ್ನು ಖಾಲಿ ಮಾಡಿದರು. ಅಂಗಡಿಗಳಲ್ಲಿದ್ದ ವಸ್ತುಗಳು ಅವಶೇಷಗಳಂತೆ ಬಿದ್ದು ಕೊಂಡು ಮಳೆಯ ತೀವ್ರತೆಯನ್ನು ಸೂಚಿಸಿತ್ತು.

ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಸ್ಥಳಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ವ್ಯಾಪಾರಸ್ಥರು ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಅಹವಾಲು ಆಲಿಸಿದ ಅಧ್ಯಕ್ಷರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಗರಿಗೆದರಿದ ಕೃಷಿ ಚಟುವಟಿಕೆ: ಕೃತ್ತಿಕಾ ಮಳೆ ಆರಂಭ ಉತ್ತಮವಾಗಿದ್ದು, ಬಿಸಿಲಿಗೆ ಕಾಯ್ದು ಕೆಂಡವಾಗಿದ್ದ ಭೂಮಿಗೆ ಬಿದ್ದ ನೀರು ಇಂಗಿ ಹೋಗಿದೆ. ಮಸಾರಿ (ಕೆಂಪು) ಮಣ್ಣಿನ ಪ್ರದೇಶಗಳಲ್ಲಿ ಮಳೆ ಆದರೂ ಕಾಣದಂತೆ ನೀರು ಹೀರಿಕೊಂಡಿದ್ದರೆ, ಕಪ್ಪು ಮಣ್ಣಿನ ಭೂಮಿಯಲ್ಲಿ ಅಲ್ಲಲ್ಲಿ ನೀರು ನಿಂತಿರುವುದು ಕಂಡು ಬಂತು.

ಮುಂಗಾರು ಆರಂಭಕ್ಕೆ ಮುನ್ನವೇ ಬಿತ್ತನೆಗೆ ರೈತರು ಭೂಮಿ ಹದ ಮಾಡುತ್ತಿದ್ದು, ಮಳೆಯಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಭಾನುವಾರ ಬೆಳಿಗ್ಗೆ ಮೋಡ ಕವಿದ ವಾತಾವರಣ ಇತ್ತು. ಸೆಕೆಯ ಪ್ರಮಾಣ ಹೆಚ್ಚಿತ್ತು. ತಾಲ್ಲೂಕಿನ ಓಜನಹಳ್ಳಿ, ಯತ್ನಟ್ಟಿ, ಮಂಗಳಾಪುರ, ದದೇಗಲ್, ಹಲಗೇರಿ, ಕಾತರಕಿ, ಗಿಣಿಗೇರಿ, ಭಾಗ್ಯನಗರ ಸೇರಿದಂತೆ ವಿವಿಧೆಡೆ ವ್ಯಾಪಕ ಮಳೆ ಆಗಿದೆ.

ತುಂಬಿ ಹರಿದ ಹಳ್ಳ-ಕೊಳ್ಳ

ಕೊಪ್ಪಳ ತಾಲ್ಲೂಕಿನ ಕೋಳೂರು ಹಾಗೂ ಸಮೀಪದ ಕೆಂಪಹಳ್ಳ ಭಾನುವಾರ ಬೆಳಗಿನ ಜಾವ ಸುರಿದ ಮಳೆಯಿಂದ ತುಂಬಿ ಹರಿಯಿತು.

ಸೇತುವೆ ಮೇಲೆ ಕೂಡಾ ನೀರು ಹರಿದು, ಸ್ವಲ್ಪಹೊತ್ತು ಸಂಚಾರ ಬಂದ್ ಆಗಿತ್ತು. ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿತ್ತು. ಸಿಂದೋಗಿ ಮಾರ್ಗದ ಚನ್ನಹಳ್ಳ ಕೂಡಾ ಮಳೆಯಿಂದ ನೀರಿನ ಹರಿವು ಹೆಚ್ಚಾಗಿತ್ತು. ಬಾಂದಾರದಲ್ಲಿ ನೀರು ತುಂಬಿಕೊಂಡಿದ್ದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಬಿಸಿಲಿನಿಂದ ಬಳಲಿದ್ದ ಜನ, ಜಾನುವಾರುಗಳಿಗೆ ಈ ಹಳ್ಳದ ನೀರು ಅನುಕೂಲವಾಗಿದೆ.

ಪಕ್ಕದ ಹಿರೇಹಳ್ಳದಲ್ಲಿ ಕೂಡಾ ರಭಸದಿಂದ ನೀರು ಹರಿಯುತ್ತಿತ್ತು. ಇದರಿಂದ ಕೋಳೂರು ಬ್ಯಾರೇಜ್ ಭ‍ರ್ತಿಯಾಗಿತ್ತು.

**
ಅಂಗಡಿಗೆ ನೀರು ನುಗ್ಗಿ ಮೊಟ್ಟೆ ಹಾಳಾಗಿವೆ. ಅಲ್ಲದೆ ಟಿವಿ ಕೂಡಾ ಹಾಳಾಗಿದೆ. ಈ ಸಮಸ್ಯೆ ಕುರಿತು ನಗರಸಭೆಗೆ ನಾವು ಮೇಲಿಂದ ಮೇಲೆ ಮನವಿ ಮಾಡಿದ್ಯಾದರೂ ಯಾವುದೇ ಪ್ರಯೋಜನವಾಗಿಲ್ಲ
ದು‍ರ್ಗೋಜಿ ಜಾಧವ,ವ್ಯಾಪಾರಸ್ಥ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.