ADVERTISEMENT

ಶಾಲೆಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ಹಂಚಿಕೆ

ನೇರವಾಗಿ ಶಾಲೆಗಳಿಗೆ ಪೂರೈಸಲು ಶಿಕ್ಷಕರ ಮನವಿ

​ಪ್ರಜಾವಾಣಿ ವಾರ್ತೆ
Published 29 ಮೇ 2018, 13:38 IST
Last Updated 29 ಮೇ 2018, 13:38 IST
ಹನುಮಸಾಗರ ವಲಯ ಸಂಪನ್ಮೂಲ ಕೇಂದ್ರದಲ್ಲಿ ಸೋಮವಾರ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪಠ್ಯಪುಸ್ತಕಗಳ ಹಂಚಿಕೆ ಕಾರ್ಯ ನಡೆಯಿತು
ಹನುಮಸಾಗರ ವಲಯ ಸಂಪನ್ಮೂಲ ಕೇಂದ್ರದಲ್ಲಿ ಸೋಮವಾರ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪಠ್ಯಪುಸ್ತಕಗಳ ಹಂಚಿಕೆ ಕಾರ್ಯ ನಡೆಯಿತು   

ಹನುಮಸಾಗರ: ಶೈಕ್ಷಣಿಕ ವರ್ಷದ ಪ್ರಾರಂಭದ ಮೇ 31 ರಂದು ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿಕೊಂಡು ಅವರಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಬೇಕಾಗಿರುವುದರಿಂದ ಸೋಮವಾರ ಪುಸ್ತಕ ಹಂಚಿಕೆ ಮಾಡಲಾಗಿದೆ ಎಂದು ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಶರಣಪ್ಪ ಕಲಾಲ ಹೇಳಿದರು.

ಸೋಮವಾರ ಇಲ್ಲಿನ ವಲಯ ಸಂಪನ್ಮೂಲ ಕೇಂದ್ರದಲ್ಲಿ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪಠ್ಯ ಪುಸ್ತಕ ವಿತರಿಸಿ ನಂತರ ಮಾತನಾಡಿದರು.

ಫೆಬ್ರುವರಿ ತಿಂಗಳಲ್ಲಿಯೇ 2018–19ನೇ ಸಾಲಿಗಾಗಿ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳ ಬೇಡಿಕೆಯನ್ನು ಸಂಬಂಧಪಟ್ಟ ಶಾಲಾ ಮುಖ್ಯಸ್ಥರಿಂದ ಪಡೆಯಲಾಗಿತ್ತು. ಅದೇ ರೀತಿ ನಮ್ಮ ವಲಯದ ಮುಖ್ಯಶಿಕ್ಷಕರು ನೀಡಿದ ಬೇಡಿಕೆ ಅನುಸಾರ ಪಠ್ಯ ಪುಸ್ತಕ ಪೂರೈಕೆಯಾಗಿದ್ದು, ಶಾಲೆಗಳು ಆರಂಭವಾಗುವುದಕ್ಕಿಂತ ಮೊದಲೇ ನಮ್ಮ ವಲಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪಠ್ಯಪುಸ್ತಕಗಳು ತಲುಪಲಿವೆ ಎಂದು ಹೇಳಿದರು.

ADVERTISEMENT

ಒಂದರಿಂದ ಹತ್ತನೇ ತರಗತಿವರೆಗಿನ ಬಹುತೇಕ ಪುಸ್ತಕಗಳು ಬಂದಿವೆ. 3ನೇ ತರಗತಿಯ ಗಣಿತ, ಪರಿಸರ ವಿಜ್ಞಾನ, 8 ಹಾಗೂ 9ನೇ ತರಗತಿಯ ಗಣಿತ ಹಾಗೂ 9ನೇ ತರಗತಿಯ ಸಮಾಜ ವಿಜ್ಞಾನ ಭಾಗ ಎರಡು ಬಂದಿಲ್ಲ. ಆದಷ್ಟು ಬೇಗ ಆ ಪುಸ್ತಕಗಳನ್ನು ಮಕ್ಕಳಿಗೆ ತಲುಪಿಸುವ ವ್ಯವಸ್ಥೆ ಇಲಾಖೆ ಮಾಡುತ್ತದೆ.

ಅಲ್ಲದೆ ನಮ್ಮ ವ್ಯಾಪ್ತಿಯ ಬೇಡಿಕೆ ಅನುಸಾರ 2,262 ಬಾಲಕರು ಹಾಗೂ  1,456 ಬಾಲಕಿಯರಿಗೆ ಸಮವಸ್ತ್ರ ವಿತರಿಸಲಾಗಿದೆ. ಆದರೆ, 8,9 ಹಾಗೂ 10ನೇ ತರಗತಿಯ ಬಾಲಕಿಯರ ಸಮವಸ್ತ್ರ ಇನ್ನೂ ಬಂದಿಲ್ಲ ಎಂದು ಶರಣಪ್ಪ ತಿಳಿಸಿದರು.

ಜೂನ್‌ ಬಳಿಕ ಮುಖ್ಯಶಿಕ್ಷಕರು ಶಾಲಾ ದಾಖಲಾತಿ ಅನುಸರಿಸಿ  ಹೆಚ್ಚುವರಿ ಬೇಡಿಕೆ ನೀಡಿದರೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ತರಿಸಿಕೊಡಲಾಗುತ್ತದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಬೆಳ್ಳಿ ತಿಳಿಸಿದರು.

ಸಮವಸ್ತ್ರಗಳನ್ನು ಹಾಗೂ ಪಠ್ಯಪುಸ್ತಕಗಳನ್ನು ಗ್ರಾಮಾಂತರ ಪ್ರದೇಶದಲ್ಲಿನ ಶಾಲೆಗಳಿಗೆ ಖಾಸಗಿ ವಾಹನ ಹಿಡಿದು ಸಾಗಿಸುವುದು ಶಿಕ್ಷಕರಿಗೆ ಕಷ್ಟವಾಗುತ್ತದೆ. ಇಲಾಖೆ ನೇರವಾಗಿ ಶಾಲೆಗಳಿಗೆ ರವಾನೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಶಿಕ್ಷಕರು ಮನವಿ ಮಾಡಿದರು.

**
ಕೆಲವೊಂದು ತರಗತಿ ಒಂದೆರಡು ವಿಷಯಗಳ ಪಠ್ಯಪುಸ್ತಕ ಮಾತ್ರ ಇನ್ನೂ ಪೂರೈಕೆಯಾಗಿಲ್ಲ. ಹಿಂದಿನ ವರ್ಷದ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಪುಸ್ತಕಗಳನ್ನು ಬಳಸಿಕೊಳ್ಳಲು ತಿಳಿಸಲಾಗಿದೆ
ರಾಜೇಂದ್ರ ಬೆಳ್ಳಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.