ADVERTISEMENT

ಶುಲ್ಕ ಪಾವತಿ; ಎಸ್‌ಎಫ್‌ಐ ಧರಣಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 9:55 IST
Last Updated 6 ಮಾರ್ಚ್ 2014, 9:55 IST

ಕೊಪ್ಪಳ: ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ಪಾವತಿಸುವಂತೆ ಸರ್ಕಾರ ಆದೇಶ ಹೊರಡಿಸಿರುವುದನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ನಗರದ ಶಾಸಕರ ಕಚೇರಿ ಮುಂಭಾಗ ಬುಧವಾರ ಧರಣಿ ನಡೆಯಿತು.

ಸರ್ಕಾರದ ಈ ಸೌಲಭ್ಯ ಪಡೆಯಬೇಕಾದರೆ ಅಂಕಗಳನ್ನು ಮಾನದಂಡ ಮಾಡಿರುವುದು ಸರಿಯಲ್ಲ. ಇದು ವಿದ್ಯಾರ್ಥಿ ವಿರೋಧಿ ನೀತಿ. ಇದು ಹಿಂದುಳಿದ ಮತ್ತು ದಲಿತ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಲು ದಾರಿ ಮಾಡಿಕೊಡುತ್ತದೆ. ಆದ್ದರಿಂದ ಸರ್ಕಾರ ಈ ಆದೇಶ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ಎಷ್ಟೋ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದಿಂದಲೇ ಶಿಕ್ಷಣ ಪೂರೈಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಶುಲ್ಕ ವಿನಾಯಿತಿ ಕೋರಿ ವಿದ್ಯಾರ್ಥಿಗಳು ಅರ್ಜಿ ಹಾಕಿರುತ್ತಾರೆ. ಅಂಕಗಳ ಆಧಾರದ ಮೇಲೆ ಜಾರಿ ಮಾಡಿದರೆ ಇದರಿಂದ ಅನೇಕ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಬಡ ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡುವಾಗ ಅಂಕದ ಮಾನದಂಡ ಸರಿಯಾದ ಕ್ರಮವಲ್ಲ ಎಂದು ಪ್ರತಿಪಾದಿಸಿದರು.

  ರಾಜ್ಯದಲ್ಲಿ ಹಲವಾರು ಬರಪೀಡಿತ ತಾಲ್ಲೂಕುಗಳಿವೆ. ಬಹುತೇಕ ವಿದ್ಯಾರ್ಥಿಗಳು ದಲಿತ, ಬಡ, ಹಿಂದುಳಿದ, ಅಲ್ಪಸಂಖ್ಯಾತ, ರೈತಾಪಿ ಕೂಲಿಕಾರ್ಮಿಕರ ಮಕ್ಕಳು. ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಶೇ.12ರಷ್ಟು ದಾಟಿಲ್ಲ. ಸರ್ಕಾರ ಪದವಿ ಹಂತದಲ್ಲಿಯೇ ಒಬಿಸಿ ವಿದ್ಯಾರ್ಥಿಗಳಿಗೆ ಎಲ್ಲಾ ಹಂತದ ಪೂರ್ಣ ಶುಲ್ಕ ಕಟ್ಟಿ ದಾಖಲಾತಿ ಮಾಡಿ ಅಂಕಗಳ ಆಧಾರದ ಮೇಲೆ ಮರು­ಪಾವತಿ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಆದ್ದರಿಂದ ಸರ್ಕಾರ ಕೂಡಲೇ ಈ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿ ಮುಖಂಡರಾದ ಅಮರೇಶ ಕಡಗದ, ಬಾಳಪ್ಪ ಹುಲಿಹೈದರ      ಉಮೇಶ ರಾಠೋಡ, ಮೇಘನಾ, ನೇತ್ರಾ, ಶಿವುಕುಮಾರ, ದೇವರಾಜ, ಪಾರ್ವತಿ, ಈರಮ್ಮ, ಗೌರಮ್ಮ, ವಿದ್ಯಾಶ್ರೀ, ಶ್ರುತಿ, ಕಿರಣ, ಶಿವುಕುಮಾರ, ಮುತ್ತರ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.