ADVERTISEMENT

ಶುಲ್ಕ ಹೆಚ್ಚಳದಲ್ಲಿ ಕಾನೂನು ಉಲ್ಲಂಘಿಸಿಲ್ಲ: ಸ್ಪಷ್ಟನೆ

ವಂತಿಗೆ ಹಾವಳಿ ವಿರುದ್ಧ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 8:24 IST
Last Updated 14 ಜೂನ್ 2013, 8:24 IST

ಕೊಪ್ಪಳ: ಹಣದುಬ್ಬರ ಮತ್ತು ವಸ್ತುಗಳ ಬೆಲೆ ಹೆಚ್ಚಳವನ್ನು ಸರಿದೂಗಿಸಿಕೊಳ್ಳುವ ಸಲುವಾಗಿ ಒಂದಷ್ಟು ಶಾಲಾ ಶುಲ್ಕವನ್ನು ಹೆಚ್ಚಿಸಲಾಗಿದೆ ಹೊರತು ಕಾನೂನು ಬಾಹಿರವಾಗಿ ವಸೂಲಿ ಮಾಡಿಲ್ಲ ಎಂದು ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಹೇಳಿದೆ.

ವಂತಿಗೆ ಹೆಚ್ಚಳ ಮಾಡಲಾಗಿದೆ ಎಂದು ವಿದ್ಯಾರ್ಥಿ ಸಂಘಟನೆ ಮತ್ತಿತರೆ ಸಂಘ-ಸಂಸ್ಥೆಗಳು ಪ್ರತಿಭಟನೆ ಮಾಡುತ್ತಿರುವುದು ಮತ್ತು ಶಿಕ್ಷಣ ಇಲಾಖೆ ತಪ್ಪು ಮಾಹಿತಿ ನೀಡಿರುವುದಕ್ಕೆ ಸಂಬಂಧಿಸಿಂದೆ ಮನವರಿಕೆ ಮಾಡಿಕೊಡುವ ಸಲುವಾಗಿ ಗುರುವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಾಜಿ ಶಾಸಕ ವಿರೂಪಾಕ್ಷಪ್ಪ ಅಗಡಿ ಮತ್ತಿತರರು, ತಮ್ಮ ಸಂಸ್ಥೆಯ ವಿರುದ್ಧ ಇಲ್ಲಸಲ್ಲದ ದೂರು ನೀಡುವುದು ಮತ್ತು ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡುತ್ತಿವೆ ಎಂಬುದನ್ನು ಜಿಲ್ಲಾಧಿಕಾರಿಗೆ ನೀಡಿದ ವಿವರಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೆಲ ವರ್ಷಗಳಿಂದ ಎಲ್ಲ ರೀತಿಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದ್ದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅದು ಶೇಕಡ ನೂರರಷ್ಟಾಗುತ್ತದೆ, ಅಲ್ಲದೇ ಕಾಲಕಾಲಕ್ಕೆ ಬರುತ್ತಿರುವ ಇಲಾಖೆಯ ಕಾನೂನುಗಳ ಅನುಪಾಲನೆಗಾಗಿ ಶಾಲಾ ಶುಲ್ಕದ ಹೆಚ್ಚಳ ಅನಿವಾರ್ಯವಾಗಿದೆ. ಅಲ್ಲದೇ 2012-13ನೇ ಶೈಕ್ಷಣಿಕ ವರ್ಷದಲ್ಲಿ ಇಲಾಖೆ ಆರ್.ಟಿ.ಇ ದಲ್ಲಿ ಅತಿ ಕಡಿಮೆ ಹಣ ಮಂಜೂರು ಮಾಡಿದ್ದು ಅದರಿಂದಾಗು ಕೊರತೆಯನ್ನು ಸಂಸ್ಥೆಯೇ ಭರಿಸಿದೆ. ಅಲ್ಲದೇ ಪ್ರಾಥಮಿಕ ಹಂತಕ್ಕೆ ತಲಾ ವಿದ್ಯಾರ್ಥಿಯಿಂದ ರೂ 11848 ರೂ ಶುಲ್ಕ ನಿಗದಿಪಡಿಸಿದ ಸರ್ಕಾರಿ ಆದೇಶ ಇದ್ದರೂ ಪಾಲಕರಿಂದ ಅದಕ್ಕಿಂತಲೂ ಕಡಿಮೆ ಶುಲ್ಕ ಸ್ವೀಕರಿಸಿರುವುದಾಗಿ ತಿಳಿಸಿದೆ.

6ನೇ ವೇತನ ಆಯೋಗದ ಶಿಫಾರಸಿನಂತೆ ಶಿಕ್ಷಕರ ವೇತನದಲ್ಲಿ ಶೇಕಡ ನೂರರಷ್ಟು ಹೆಚ್ಚಳವಾಗಿದೆ, ಇದನ್ನು ಭರಿಸುವುದಕ್ಕೆ ಶುಲ್ಕವನ್ನು ದ್ವಿಗುಣಗೊಳಿಸಬೇಕಿತ್ತು. ಆದರೆ ಮಧ್ಯಮ ವರ್ಗದ ಪಾಲಕರಿಗೆ ಮತ್ತು ಪೋಷಕರಿಗೆ ಹೊರೆಯಾಗದಂತೆ ನ್ಯಾಯೋಚಿತ ರೀತಿಯಲ್ಲಿ ಶುಲ್ಕ ಹೆಚ್ಚಿಸಲಾಗಿದೆ. ಬದಲಾಗುತ್ತಿರುವ ವ್ಯವಸ್ಥೆಗೆ ಅನುಗುಣವಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಬೇಕಿರುವುದರಿಂದ ಬೋಧನೆಯಲ್ಲಿ ಹೊಸ ಪರಿಕಲ್ಪನೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಜಿಲ್ಲಾಧಿಕಾರಿ ಭೇಟಿಯ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಬಸವರಾಜ ಬಳ್ಳೊಳ್ಳಿ, ಪ್ರಾಚಾರ್ಯ ವಿ.ಧನಂಜಯನ್, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭು ಹೆಬ್ಬಾಳ ಮತ್ತಿತರರು ಇದ್ದರು.

ಪ್ರತಿಭಟನೆ: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ವಂತಿಗೆ ಹಾವಳಿ ತಡಗೆಟ್ಟುವಂತೆ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಫೆಡರೇಷನ್, ಇಸ್ಲಾಮಿಕ್ ವಿದ್ಯಾರ್ಥಿಗಳ ಸಂಘಟನೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.