ADVERTISEMENT

ಶೈಕ್ಷಣಿಕ ಜಾಗೃತಿ ಮೂಡಿಸಲು ಕರೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 9:25 IST
Last Updated 6 ಜುಲೈ 2012, 9:25 IST

ಹನುಮಸಾಗರ:  ರಾಜ್ಯದ ಎಲ್ಲ ಶಾಲೆಗಳಲ್ಲಿ ಒಂದು ಆಂದೋಲನದ ರೂಪದಲ್ಲಿ ಶಿಕ್ಷಣ ಇಲಾಖೆ ಶಾಲೆಗಾಗಿ ನಾವು-ನೀವು ಎಂಬ ಒಂದು ವಿನೂತನ ಕಾರ್ಯಕ್ರಮ ಹಾಕಿಕೊಂಡಿರುವುದು ಸಾರ್ವಜನಿಕರಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಲು ಇದು ನೆರವಾವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀದೇವಿ ಹಳ್ಳೂರ ಹೇಳಿದರು.

ಗುರುವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢ ಶಾಲಾ ವಿಭಾಗದಲ್ಲಿ ನಡೆದ ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಶಿಕ್ಷಣ ಹಕ್ಕು ಕುರಿತಂತೆ ಸಮುದಾಯದಲ್ಲಿ ಹೀಗೆ ಜಾಗೃತಿ ಮೂಡಿಸುವುದರಿಂದ ಸರ್ಕಾರ ನೀಡುತ್ತಿರುವ ಉತ್ತೇಜಕಗಳು ಎಷ್ಟರ ಮಟ್ಟಿಗೆ ಫಲಾನುಭವಿಗಳಿಗೆ ತಲುಪಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಇದು ನೆರವಾಗುತ್ತದೆ ಎಂದು ಹೇಳಿದರು.

ಮಲ್ಲನಗೌಡ ಹಿರೇಗೌಡರ ಮಾತನಾಡಿ, ಏಪ್ರಿಲ್30 ರಂದು ರಾಜ್ಯ ಸರ್ಕಾರ ಮಕ್ಕಳ ಶಿಕ್ಷಣ ಹಕ್ಕಿನ ಸಂವಿಧಾನ ಬದ್ಧತೆಗೆ ಅನುಸಾರವಾಗಿ ಕಾಯ್ದೆ ನಿಯಮಗಳನ್ನು ಅಂಗೀಕರಿಸಿದೆ, ಈ ಕಾಯ್ದೆಯು ಶಿಕ್ಷಣ ಕ್ಷೇತ್ರದ ಬದಲಾವಣೆಗೆ ನಾಂದಿ ಹಾಡಿದಂತಾಗಿದೆ. 6 ರಿಂದ 14ವಯಸ್ಸಿನ ಎಲ್ಲ ಮಕ್ಕಳಿಗೆ ಸಂಪೂರ್ಣ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಸೇರಿದಂತೆ ಸಮುದಾಯಗಳ ಸಹಭಾಗಿತ್ವ ಹೀಗೆ ಅನೇಕ ಉತ್ತಮ ಅಂಶಗಳು ಈ ಕಾರ್ಯಕ್ರಮದ ಮೂಲಕ ಬೆಳಕು ಕಾಣಲಿವೆ ಎಂದು ಹೇಳಿದರು.

ಬಸವರಾಜ ಹಳ್ಳೂರ ಮಾತನಾಡಿ ಅಭಿವೃದ್ಧಿ ದೃಷ್ಟಿಯಿಂದಾಗಿ ಹಲವಾರು ಕಾಯ್ದೆಗಳನ್ನು ಜಾರಿಗೊಳಿಸುವಾಗ ಅವು ಸಾರ್ವಜನಿಕ ವಲಯದಲ್ಲಿ ಫಲಪ್ರದವಾಗಬೇಕಾದರೆ ಮೊದಲು ಜನಪ್ರತಿನಿಧಿಗಳು ಆ ಕಾಯ್ದೆಗಳಿಗೆ ಮಾದರಿಯಾಗಿರಬೇಕು, ಅಂದಾಗ ಮಾತ್ರ ಕಾಯ್ದೆಗಳ ಮೇಲೆ ಸಾರ್ವಜನಿಕರಲ್ಲಿ ನಂಬಿಕೆ ಮೂಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಲಾ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷ ಸಂಗಯ್ಯ ವಸ್ತ್ರದ, ಹಿರಿಯ ಶಿಕ್ಷಕ ವಿ.ಬಿ.ಉಪ್ಪಿನ ಹಾಗೂ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ಖಜಾಂಚಿ ಮಹಾಂತೇಶ ಗೋನಾಳ ಮಾತನಾಡಿದರು.

ಎನ್.ಈರೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ಈ ನಿಯೋಗ  ಪಾಲಕರಿಗ ಮನವರಿಕೆ ಮಾಡಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆ ತರುವಲ್ಲಿ ಯಶಸ್ವಿಯಾದರು.
ಸಂಗಯ್ಯ ವಸ್ತ್ರದ ಪ್ರಮಾಣ ವಚನ ಬೋಧಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಶಿವು ಸಂಗಮದ. ಶಿಪುತ್ರಪ್ಪ ಕೋಳೂರ, ಡಾ.ಬಸವರಾಜ ಅಕ್ಕಿ, ಎಪಿಎಂಸಿ ಸದಸ್ಯ ಮಾರುತಿ ಭಜಂತ್ರಿ, ಚಂದಪ್ಪ ವಾಲ್ಮೀಕಿ, ಹನುಮಂತಪ್ಪ ಬಿಂಗಿ, ಲೀಲಾ ಎಸ್. ಶೆಟ್ಟರ್ ಇತರರು ಇದ್ದರು.

ರಾಜಶೇಖರ ಕೊಪ್ಪಳ ಪ್ರಾರ್ಥಿಸಿದರು. ವಿ.ಬಿ.ಉಪ್ಪಿನ ಸ್ವಾಗತಿಸಿದರು. ಮಲ್ಲಿಕಾರ್ಜುನ ಮ್ಯಾಗೇರಿ ಕಾರ್ಯಕ್ರಮ ನಿರೂಪಿಸಿದರು. ರಾಜಾಭಕ್ಷಾರ ಪೆಂಡಾರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.