ADVERTISEMENT

ಶೌಚಾಲಯ ಬಳಸಿ- ಸ್ವಚ್ಛತೆ ಕಾಪಾಡಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 8:30 IST
Last Updated 17 ಫೆಬ್ರುವರಿ 2011, 8:30 IST

ಕೊಪ್ಪಳ: ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆಯಡಿ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಶೌಚಾಲಯಗಳ ಬಳಕೆ ಅಸಮರ್ಪಕವಾಗಿರುವ ಅಂಶ ಈಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು ನಡೆಸಿದ ರಾಜ್ಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಸಮಾಧಾನವೂ ವ್ಯಕ್ತವಾಗಿದೆ. ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದರೂ, ಅವುಗಳ ಬಳಕೆ ಇಲ್ಲದೇ ಒಂದೆಡೆ ಹಣ ಪೋಲಾಗುತ್ತಿದ್ದರೆ, ಮತ್ತೊಂದೆಡೆ ಬಯಲಲ್ಲಿ ಮಲ-ಮೂತ್ರ ವಿಸರ್ಜನೆಯಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಉದ್ಭವವಾಗುತ್ತವೆ ಎಂಬ ಆತಂಕವೂ ವ್ಯಕ್ತವಾಗಿದೆ.

ಅದರಲ್ಲೂ, ಜಿಲ್ಲೆಯಲ್ಲಿನ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ಬಳಕೆ ಸಮರ್ಪಕವಾಗಿಲ್ಲ ಎಂಬ ಅಂಶವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಗಂಭೀರವಾಗಿ ಪರಿಣಗಿಸಿದೆ ಎಂದು ಹೇಳಲಾಗುತ್ತಿದೆ.ಜಿಲ್ಲೆಯಲ್ಲಿ ಉದ್ದೇಶಿತ 787 ಅಂಗನವಾಡಿ ಶೌಚಾಲಯಗಳ ಪೈಕಿ 670 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಿಗೆ ಸಂಬಂಧಪಟ್ಟಂತೆ ಒಟ್ಟು 670 ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಅಲ್ಲದೆ, ಈ ಯೋಜನೆ ಜಾರಿಗೊಂಡಾಗಿನಿಂದ ಈವರೆಗೆ ಜಿಲ್ಲೆಯಲ್ಲಿ ಕೇವಲ ಒಂದೇ ಒಂದು ಗ್ರಾಮ ಪಂಚಾಯಿತಿ ಮಾತ್ರ ನಿರ್ಮಲ ಗ್ರಾಮ ಪುರಸ್ಕಾರ ತನ್ನದಾಗಿಸಿಕೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ದಾಖಲೆಗಳು ಹೇಳುತ್ತವೆ. ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಮೂರ್ತಿ ಅವರು, ಜಿಲ್ಲೆಯ ಎಲ್ಲಾ ಶಾಲೆ ಮತ್ತು ಅಂಗನವಾಡಿಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

ಶಾಲೆ ಅಥವಾ ಅಂಗನವಾಡಿಗಳಲ್ಲಿ ವಿದ್ಯಾರ್ಥಿಗಳು ಶೌಚಾಲಯ ಬಳಕೆ ಮಾಡಬೇಕು ಹಾಗೂ ಶೌಚಾಲಯಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ನಿಗಾವಹಿಸಬೇಕು. ಈ ಆದೇಶವನ್ನು ಜಾರಿಗೆ ತರಲು ತಪ್ಪಿದಲ್ಲಿ ಆಯಾ ಶಾಲಾ ಮುಖ್ಯಸ್ಥರನ್ನು, ಅಂಗನವಾಡಿಗಳ ಮೇಲ್ವಿಚಾರಕರನ್ನು ಹೊಣೆಗಾರರನ್ನಾಗಿ ಮಾಡಿ, ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಈ ನಿಟ್ಟಿನಲ್ಲಿ ಕೈಗೊಂಡ ಕ್ರಮದ ಬಗ್ಗೆ ಒಂದು ವಾರದ ಒಳಗಾಗಿ ಸಮಗ್ರ ವರದಿ ಸಲ್ಲಿಸುವಂತೆಯೂ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇಂತಹ ಆದೇಶದ ಪರಿಣಾಮವಾಗಿಯಾದರೂ ಶೌಚಾಲಯಗಳ ಬಳಕೆ, ಸ್ವಚ್ಛತೆ ಕಾಪಾಡುವ ಮನೊಭಾವ ಕಂಡುಬರುತ್ತದೆಯೋ ಕಾದುನೋಡಬೇಕು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.