ADVERTISEMENT

ಸಂಚಾರ ಸಮಸ್ಯೆ; ಸುಸ್ತಾದ ಪ್ರಯಾಣಿಕರು

ಮೆಹಬೂಬ ಹುಸೇನ
Published 19 ಡಿಸೆಂಬರ್ 2017, 6:56 IST
Last Updated 19 ಡಿಸೆಂಬರ್ 2017, 6:56 IST
ಕನಕಗಿರಿ ಕನಕಾಚಲಪತಿ ದೇವಸ್ಥಾನದ ರಸ್ತೆಯಲ್ಲಿ ಸಂಚಾರ ದಟ್ಟಣೆ ಇದೆ
ಕನಕಗಿರಿ ಕನಕಾಚಲಪತಿ ದೇವಸ್ಥಾನದ ರಸ್ತೆಯಲ್ಲಿ ಸಂಚಾರ ದಟ್ಟಣೆ ಇದೆ   

ಕನಕಗಿರಿ: ಪಟ್ಟಣದ ಕನಕಾಚಲಪತಿ ದೇವಸ್ಥಾನ ಸೇರಿದಂತೆ ಕೆಲ ಕಡೆ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಇಲ್ಲಿ ಸೋಮವಾರ ಸಂತೆ ನಡೆಯುತ್ತದೆ, ಸುತ್ತಮುತ್ತಲ್ಲಿನ 30ಕ್ಕೂ ಹೆಚ್ಚು ಗ್ರಾಮಗಳ ಜನತೆ ಖರೀದಿಗೆ ಬರುತ್ತಿದ್ದು, ಸಂಚಾರ ಸಮಸ್ಯೆ ನಿರಂತರವಾಗಿದೆ.

ಕನಕಾಚಲಪತಿ ದೇಗುಲ, ಬಸ್‌ ನಿಲ್ದಾಣ, ಮಹರ್ಷಿ ವಾಲ್ಮೀಕಿ ವೃತ್ತ ಹಾಗೂ ನವಲಿ, ತಾವರಗೆರೆ ರಸ್ತೆಗಳಲ್ಲಿ ಸಂಚಾರಕ್ಕೆ ಸಾಕಷ್ಟು ಅಡಚಣೆಯಾಗುತ್ತಿದೆ. ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಕನಕಾಚಲಪತಿ ದೇವಸ್ಥಾನದಲ್ಲಿ ಹೆಚ್ಚಿನ ದಟ್ಟಣೆ ಸೇರುತ್ತದೆ ಎಂದು ಸೋಮಸಾಗರ ಗ್ರಾಮದ ರೈತ ಯಂಕಪ್ಪ ,ಪಂಪಾಪತಿ ದೂರಿದರು,

ಸಂತೆ ಸ್ಥಳಾಂತರಕ್ಕೆ ಒತ್ತಾಯ ಮಾಡಿದರೂ ಪಟ್ಟಣ ಪಂಚಾಯಿತಿ ಕ್ರಮ ತೆಗೆದುಕೊಂಡಿಲ್ಲ ಎಂದು ಹನುಮಂತಪ್ಪ ಆರೋಪಿಸಿದರು. ಸಂತೆ ನಡೆಯುವ ಸ್ಥಳ ದೇವಸ್ಥಾನ ಸಮಿತಿಗೆ ಸೇರಿದ್ದು ಈಗಿನ ಜನಸಂಖ್ಯೆಗೆ ತೀರ ಕಿರಿದಾಗಿದೆ. ಮಾರುಕಟ್ಟೆಗೆ ಬರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿರುವುದು ಸಹ ಸಂಚಾರ ಸಮಸ್ಯೆಗೆ ಕಾರಣ ಎಂದು ಯಮನೂರಪ್ಪ ಹೇಳಿದರು.

ADVERTISEMENT

ಪಟ್ಟಣದ ರಸ್ತೆಯ ದೂಳು, ಮೆಣಸಿನಕಾಯಿ ಘಾಟು ಸೇರಿ ಅನಾರೋಗ್ಯ ಉಂಟಾಗುತ್ತಿದೆ, ಶಾಲಾ ಮಕ್ಕಳು, ವೃದ್ಧರು ಉಸಿರಾಟ, ಕೆಮ್ಮು. ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಶಾಂತರಾಜ ತಿಳಿಸಿದರು.

ಬಸ್ ನಿಲ್ದಾಣ ಹಾಗೂ ಪೊಲೀಸ್‌ ವಸತಿ ಗೃಹದ ಪರಿಸರಲ್ಲಿಯೂ ಜನ ನಿತ್ಯ ಗೋಳು ಅನುಭವಿಸುವಂತಾಗಿದೆ, ಖಾಸಗಿ ವಾಹನಗಳ ಮಾಲೀಕರ ಕಿರಿಕಿರಿಯಿಂದ ಸರ್ಕಾರಿ ಬಸ್‌ಗಳು ನಿಲ್ದಾಣದೊಳಗೆ ಪ್ರವೇಶಿಸಲು ಸಮಸ್ಯೆಯಾಗಿದೆ.

* * 

ಠಾಣೆಯಲ್ಲಿ ಪೊಲೀಸರ ಕೊರತೆ ಇದೆ. ಸಿಬ್ಬಂದಿಯನ್ನು ಕುಕನೂರು, ಬಳ್ಳಾರಿ, ಗಂಗಾವತಿ ಬಂದೋಬಸ್ತ್‌ಗಾಗಿ ಕಳುಹಿಸಲಾಗಿದೆ, ಸಮಸ್ಯೆ ಪರಿಹರಿಸಲಾಗುವುದು.
ಶಾಂತಪ್ಪ ಬೆಲ್ಲದ, ಪ್ರಭಾರ ಪಿಎಸ್‌ಐ ಕನಕಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.