ADVERTISEMENT

ಸಚಿವ ತಂಗಡಗಿ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 6:51 IST
Last Updated 4 ಜುಲೈ 2013, 6:51 IST

ಗಂಗಾವತಿ: ತಾಲ್ಲೂಕಿನ ಮರಳಿ ಹೋಬಳಿಯ ಕಂದಾಯ ನಿರೀಕ್ಷಕ ಹನುಮಂತಪ್ಪ ಅವರ ವರ್ಗಾವಣೆಗೆ ಕೈಬಿಡುವಂತೆ ಒತ್ತಾಯಿಸಿ ಬುಧವಾರ ಗ್ರಾಮ ಪಂಚಾಯಿತಿ ಆವರಣದಲ್ಲಿ ರೈತರು ಮತ್ತು ಸಾರ್ವಜನಿಕರು ದಿಢೀರ್ ಪ್ರತಿಭಟನೆ ನಡೆಸಿದರು.

ಮರಳಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ಬೆಳಿಗ್ಗೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಔಪಚಾರಿಕ ಸಭೆ ನಡೆಸಿದರು. ಅಧಿಕಾರಿಯ ವರ್ಗಾವಣೆಯನ್ನು ರದ್ದು ಪಡಿಸುವ ಸಲುವಾಗಿ ಹಮ್ಮಿಕೊಳ್ಳಬೇಕಾದ ಹೋರಾಟ ಕುರಿತು ಚರ್ಚಿಸಿದರು.

ಮೊದಲ ಹಂತವಾಗಿ ಬುಧವಾರ ಸಾಂಕೇತಿಕ ಧರಣಿ ನಡೆಸಿ ಗಮನ ಸೆಳೆಯುವುದು, ಬಳಿಕ ಹಂತ ಹಂತವಾಗಿ ಧರಣಿ, ಪ್ರತಿಭಟನೆಯನ್ನು ತೀವ್ರಗೊಳಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಂಡ ಬಳಿಕ ಗ್ರಾಮ ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

`ರೈತರು ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ಹನುಮಂತಪ್ಪನವರ ವರ್ಗಾವಣೆ ಹಿಂದೆ ಸಚಿವ ತಂಗಡಗಿ ಅವರ ಕೈವಾಡವಿದೆ. ಕೂಡಲೇ ವರ್ಗಾವಣೆಯನ್ನು ರದ್ದು ಮಾಡಬೇಕು' ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

`ತಮ್ಮ ಬೆಂಬಲಿಗರ ಹಿತ ಕಾಯುವ ಉದ್ದೇಶಕ್ಕೆ ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ ಮಾಡುವ ಮೂಲಕ ಸಚಿವ ತಂಗಡಗಿ ದ್ವೇಷದ ರಾಜಕಾರಣಕ್ಕೆ ಇಳಿದಿದ್ದಾರೆ' ಎಂದು ರೈತರಾದ ಸಾಂಬಮೂರ್ತಿ, ಬಸವರಾಜಪ್ಪ ದೂರಿದರು. ತಂಗಡಗಿ ವಿರುದ್ಧ ಘೋಷಣೆ ಕೂಗಿದರು.
`ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ತಂಗಡಗಿ ಯತ್ನಿಸುತ್ತಿದ್ದಾರೆ. ಸಿಬ್ಬಂದಿ, ಒತ್ತಡಕ್ಕೆ ಮಣಿದು ಕೆಲಸ ಮಾಡಬೇಕಾದ ಸ್ಥಿತಿಯಿದೆ. ವರ್ಗಾವಣೆ ಕೈಬಿಡಬೇಕು. ಇಲ್ಲವಾದಲ್ಲಿ ರಸ್ತೆತಡೆ, ಧರಣಿ, ಸಚಿವ, ಮತ್ತವರ ಬೆಂಬಲಿಗರಿಗೆ ಘೇರಾವ್ ಹಾಕಲಾಗುವುದು' ಎಂದು ಎಚ್ಚರಿಸಿದರು.

ಎಚ್.ರಾಮಣ್ಣ ನಾಯಕ್, ಈಶಪ್ಪ, ಸೋಮರಾಜು ಸಂಗಾರಾವ್ ಕ್ಯಾಂಪ್, ಹೊನ್ನೂರಸಾಬ ತಟ್ಟಿ, ಎಚ್.ಬಸವರಾಜ ಹೊಸ್ಕೇರ, ಪೀರಸಾಬ, ಶಿವಲಿಂಗಪ್ಪ, ಡಾ.ಆನಂದ್ ಸೇರಿದಂತೆ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.