ADVERTISEMENT

‘ಸಮಾನತೆ ತರಲು ಶ್ರಮಿಸಿದ್ದ ಬಸವಣ್ಣ’

ಶ್ರೀಕೃಷ್ಣದೇವರಾಯ ವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಬಸವ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 9:00 IST
Last Updated 20 ಏಪ್ರಿಲ್ 2018, 9:00 IST

ಕೊಪ್ಪಳ: 'ಸಮಾನತೆ ಸಮಾಜದ ನಿರ್ಮಾಣಕ್ಕಾಗಿ ಬಸವಣ್ಣನವರು ಶ್ರಮಿಸಿದರು' ಎಂದು ಉಪನ್ಯಾಸಕಿ ಗಾಯಿತ್ರಿ ಭಾವಿಕಟ್ಟಿ ಹೇಳಿದರು. ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ಬಸವ ಜಯಂತಿ ಕಾರ್ಯಕ್ರ‌ಮದಲ್ಲಿ ಅವರು ಉಪನ್ಯಾಸ ನೀಡಿದರು.

'ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಸಮಾನತೆ ತರಬೇಕು ಎನ್ನುವ ಆಶಯವನ್ನು ಬಸವಣ್ಣನವರು ಹೊಂದಿದ್ದರು. ಪ್ರಸ್ತುತ ಜಾಗತಿಕಮಟ್ಟದಲ್ಲಿ ಅಕ್ಷಯ ತೃತೀಯ ಎಂದು ಹೇಳುವ ಈ ದಿನದಂದು ಉತ್ತರ ಕರ್ನಾಟಕ ಭಾಗದಲ್ಲಿ ಬಸವಜಯಂತಿ ಆಚರಿಸಲಾಗುತ್ತದೆ. ಈ ದಿನದಲ್ಲಾದರೂ ಮೂಢನಂಬಿಕೆ ಆಚರಣೆ ಮಾಡದಿರಲಿ ಎನ್ನುವ ಸದುದ್ದೇಶದಿಂದ ಈ ಬಸವಜಯಂತಿ ಆಚರಿಸಲಾಗುತ್ತದೆ. ಮೂಢನಂಬಿಕೆಗಳನ್ನು ತೊಲಗಿಸುವಲ್ಲಿ ವಚನಕಾರರ ಚಿಂನತೆಗಳು ಅವಶ್ಯಕವಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು' ಎಂದರು.

'ಕವಿ, ಭಕ್ತ, ಆರ್ಥಿಕ ತಜ್ಞ ಹಾಗೂ ಅನುಭವಿ ರಾಜಕಾರಣಿ, ಸಮಾಜ ಸುಧಾರಕರಾಗಿ ಬಸವಣ್ಣನವರು ಬಹುಮುಖಿ ವ್ಯಕ್ತಿತ್ವ ಹೊಂದಿದ್ದರು. ಈ ಕುರಿತು ಹಲವು ವಚನಕಾರರು ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಬಸವಣ್ಣನವರು ಹೊಸ ಬದಲಾವಣೆಗೆ ನಾಂದಿ ಹಾಡಿದರು. ಸಮಾಜದ ಅಸಮಾನತೆ, ಧಾರ್ಮಿಕ ವ್ಯವಸ್ಥೆ, ಜಾತಿ, ಲಿಂಗ ತಾರತಮ್ಯದ ವಿರುದ್ಧ ಬಸವಾದಿ ಶರಣರು ವಚನಗಳ ಮೂಲಕ ಕ್ರಾಂತಿ ಮಾಡಿದರು. ಉಳ್ಳವರು ಬೇರೆಯವರನ್ನು ಗುಲಾಮರನ್ನಾಗಿ ಮಾಡುವ ವ್ಯವಸ್ಥೆಯನ್ನು ವಿರೋಧಿಸಿ ಕೆಲವರ ವಿರೋಧ ಕಟ್ಟಿಕೊಂಡಿದ್ದರು' ಎಂದರು.

ADVERTISEMENT

'ಬಸವಣ್ಣ ಕಾಯಕ ಮತ್ತು ದಾಸೋಹದ ಪರಿಕಲ್ಪನೆ ಹೊಂದಿದ್ದರು. ಕಾಯಕದಿಂದ ಬಂದ ಫಲವನ್ನು ದಾಸೋಹದ ಮೂಲಕ ಬಳಕೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. ಜಡ ವ್ಯವಸ್ಥೆ ವಿರೋಧಿಸಿದರು. ಆಧುನಿಕ ವ್ಯವಸ್ಥೆಯಲ್ಲಿಯೂ ಸಹ ಮೂಢನಂಬಿಕೆ ಆಚರಿಸುತ್ತಿದ್ದಾರೆ. ಜಂಗಮ ತತ್ವಗಳು ಸಮಾಜ ಪರಿವರ್ತನೆಗೆ ಸಹಕಾರಿಯಾಗಿದೆ. ಬಸವ ಚಿಂತನೆಗಳು ಎಂದಿಗೂ ಪ್ರಸ್ತುತ' ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ಮನೋಜ್‌ ಡೊಳ್ಳಿ ಮಾತನಾಡಿ, 'ಬುದ್ಧ, ಬಸವ ಹಾಗೂ ಅಂಬೇಡ್ಕರ್‌ನಂತಹ ಮಹನೀಯರು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರು. ಆದರೆ ಜಾತಿ ವ್ಯವಸ್ಥೆ ಇಂದಿಗೂ ಜೀವಂತವಾಗಿದೆ. ಇದಕ್ಕೆ ಜನರ ಮನೋಭಾವವೇ ಕಾರಣ. ಎಲ್ಲರೂ ಜಾತ್ಯತೀತ ಮನೋಭಾವ ಬೆಳೆಸಿಕೊಳ್ಳಬೇಕು' ಎಂದರು.

ಉಪನ್ಯಾಸಕರಾದ  ಪ್ರಕಾಶ ಅಳವಟ್ಟಿ, ರಾಜಶೇಖರ ಜಮದಂಡಿ, ಶ್ರೀಕಾಂತ ಭದ್ರಾಪುರ, ಅಕ್ಷಯ ಕುಲಕರ್ಣಿ, ಶಿವ‌ಮಲ್ಲಿಕಾರ್ಜುನ, ಹೇಮಾವತಿ, ತಿಪ್ಪೇಶ್, ಶ್ರುತಿ ದೇಸಾಯಿ ಇದ್ದರು.

**

ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಅವರು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರು. ಜಾತಿ ವ್ಯವಸ್ಥೆ ಜೀವಂತ ವಾಗಿರುವುದು ಕಳವಳಕಾರಿ ಸಂಗತಿ – ಮನೋಜ್‌ ಡೊಳ್ಳಿ, ವಿಶೇಷಾಧಿಕಾರಿ, ಸ್ನಾತಕೋತ್ತರ ಕೇಂದ್ರ, ಬಳ್ಳಾರಿ ವಿವಿ, ಕೊಪ್ಪಳ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.