ADVERTISEMENT

ಸರ್ಕಾರಿ ಉರ್ದು ಶಾಲೆ: ಅತಂತ್ರದಲ್ಲಿ ವಿದ್ಯಾರ್ಥಿಗಳ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 9:45 IST
Last Updated 10 ಜೂನ್ 2013, 9:45 IST

ಕನಕಗಿರಿ: ಸಾರ್ವಜನಿಕ ಶಿಕ್ಷಣ ಇಲಾಖೆ 6ನೇ ತರಗತಿಗೆ ಶಾಲೆಯನ್ನು ಉನ್ನತೀಕರಿಸಿದ ಕಾರಣ ಕನಕಗಿರಿ, ಸೂಳೇಕಲ್, ಹುಲಿಹೈದರ ಗ್ರಾಮಗಳ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ನೂರಾರು ವಿದ್ಯಾರ್ಥಿಗಳ  ಭವಿಷ್ಯ ಅತಂತ್ರದಲ್ಲಿದೆ.

ಇಲ್ಲಿನ ಮುಲ್ಲರ ಗಲ್ಲಿ ಸೇರಿದಂತೆ ಮೂರು ಗ್ರಾಮಗಳಲ್ಲಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಇದ್ದು, ಐದನೇಯ ತರಗತಿ ವರೆಗೆ ಪಾಠ ಪ್ರವಚನ ನಡೆಯುತ್ತಿವೆ. ಕಳೆದ ವರ್ಷದಿಂದಲೂ ಆರನೇಯ ತರಗತಿಗೆ ಮೇಲ್ದರ್ಜೆ ಏರಿಸುವಂತೆ ಆಗಿನ ಶಾಸಕರಾಗಿದ್ದ ಶಿವರಾಜ ತಂಗಡಗಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಉಪಯೋಗವಾಗದ ಕಾರಣ ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಹೊನ್ನೂರುಸಾಬ ಕಳ್ಳಿ ಬೇಸರ ವ್ಯಕ್ತಪಡಿಸುತ್ತಾರೆ.

ಅಲ್ಪಸಂಖ್ಯಾತರ ಮಕ್ಕಳು ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕೆಂಬ ಪಾಲಕರ ಬಯಕೆಗೆ ಸರ್ಕಾರ ತಣ್ಣೀರು ಎರಚುವ ಕೆಲಸ ಮಾಡಿದೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದೆ ಸತಾಯಿಸುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದೊಂದಿದೆ ಚೆಲ್ಲಾಟವಾಡುತ್ತಿದೆ ಎಂದು ಕಳ್ಳಿ ದೂರುತ್ತಾರೆ.

2011-12ನೇ ಸಾಲಿನಲ್ಲಿ 13 ವಿದ್ಯಾರ್ಥಿಗಳು ಐದನೇಯ ತರಗತಿ ಉತ್ತೀರ್ಣರಾಗಿ ಆರನೇಯ ವರ್ಗಕ್ಕೆ ಸೇರಲು ಬಯಸಿದರೆ ಸರ್ಕಾರ ಶಾಲೆಯನ್ನು ಉನ್ನತೀಕರಿಸಲಿಲ್ಲ. ಈ ಬಗ್ಗೆ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಈ ಮಕ್ಕಳು ಅನ್ಯ ಶಾಲೆಗೆ ಹೋಗದೆ ಶಿಕ್ಷಣದಿಂದ ದೂರ ಉಳಿಯುವಂತಾಯಿತು ಎಂದು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಇಕ್ಬಾಲ್‌ಖಾನ್ ತಿಳಿಸುತ್ತಾರೆ.

ಈ ಸಲವೂ ಸಹ ಸರ್ಕಾರ ಶಾಲೆಯನ್ನು ಮೇಲ್ದರ್ಜೆಗೆ ಏರಿಸಿಲ್ಲ. ಮಕ್ಕಳಿಗೆ ಶಿಕ್ಷಣ ಮುಂದುವರೆಸಲು ಸಮೀಪದಲ್ಲಿ ಯಾವ ಉರ್ದು ಶಾಲೆಗಳು ಇಲ್ಲ. ನೂರಾರು ಮಕ್ಕಳ ಭವಿಷ್ಯ ಅತಂತ್ರದಲ್ಲಿದೆ ಎಂದು ಪಾಲಕರು ಆತಂಕ ವ್ಯಕ್ತಪಡಿಸಿದರು.

ಗ್ರಾಮದ 24 ಸಾವಿರ ಜನಸಂಖ್ಯೆಯಲ್ಲಿ ಶೇ 40ರಷ್ಟು ಮುಸ್ಲಿಮರು ಇದ್ದಾರೆ. ವಿಧಾನಸಭಾ ಕ್ಷೇತ್ರವಾಗಿರುವ ಇಲ್ಲಿ ಉರ್ದು ಶಿಕ್ಷಣ ಪಡೆಯಲು ಹೆಣಗಾಡಬೇಕಾಗಿದೆ ಎಂದು ಯುವ ಮುಖಂಡ ಮಹ್ಮದ ಕಾತರಕಿ ತಿಳಿಸಿದರು.

ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಎಚ್. ವೀರಣ್ಣ `ಪ್ರಜಾವಾಣಿ' ಜತೆಗೆ ಮಾತನಾಡಿ, ಜಿಲ್ಲೆಯ ಕೆಲ ಉರ್ದು ಶಾಲೆಗಳನ್ನು ಉನ್ನತೀಕರಿಸುವಂತೆ ಕಳೆದ ಎರಡು ವರ್ಷಗಳ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಇಲಾಖೆ ಮಾನ್ಯತೆ ನೀಡಿಲ್ಲ, ಹಣಕಾಸು ಇಲಾಖೆ ಹುದ್ದೆಗಳನ್ನು ಹೆಚ್ಚಿಸಲು ಅವಕಾಶ ನೀಡದ ಕಾರಣ ಶಾಲೆ ಮಂಜೂರಾಗಿಲ್ಲ ಎಂದು ಅವರು ಹೇಳಿದರು.
ಉರ್ದು ಶಿಕ್ಷಣ ಪಡೆಯಲು ಇಲಾಖೆಯೇ ಮುಂದೆ ಬಾರದ ಕಾರಣ ಮಕ್ಕಳನ್ನು ಶಾಲೆಗೆ ಕಳಿಸಿದರೇನು ಪ್ರಯೋಜನ ಎಂದು ಪಾಲಕರು ಪ್ರಶ್ನಿಸಿ ತಮ್ಮ ಮಕ್ಕಳ ವರ್ಗಾವಣೆ ಪ್ರಮಾಣ ಪತ್ರ, ಅಂಕಪಟ್ಟಿ ತೆಗೆದುಕೊಂಡು ಹೋಗುತ್ತಿದ್ದಾರೆ. ಕೆಲ ದಿನಗಳಲ್ಲಿಯೆ ಶಾಲೆ ಮುಚ್ಚಬೇಕಾದ ಪರಿಸ್ಥಿತಿ ತಲೆದೋರಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕಳ್ಳಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.