ADVERTISEMENT

ಸಾಧನೆತುಡಿತ-ಬೆಂಬಲಕೊರತೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 5:55 IST
Last Updated 22 ಅಕ್ಟೋಬರ್ 2012, 5:55 IST
ಸಾಧನೆತುಡಿತ-ಬೆಂಬಲಕೊರತೆ
ಸಾಧನೆತುಡಿತ-ಬೆಂಬಲಕೊರತೆ   

ಕೊಪ್ಪಳ: ಪ್ರತಿಭೆ ಯಾರ ಸ್ವತ್ತು ಅಲ್ಲ. ಅಂತೆಯೇ ಅದಕ್ಕೆ ಅಂತಸ್ತಿನ ಹಂಗೂ ಇಲ್ಲ. ಆದರೆ, ಪ್ರತಿಭೆ ಹೊರಹೊಮ್ಮಲು ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹ ನೀಡುವವರು ಅಗತ್ಯ.

ನಗರದಲ್ಲಿ ಪ್ರತಿಭಾವಂತ ಯುವಕರ ಗುಂಪೊಂದು ಇದೆ. ಆ ಯುವಕರು ವೇದಿಕೆ ಹತ್ತಿ ಕುಣಿದರೆ ಸಾಕು ಇತ್ತ ಪ್ರೀಕ್ಷಕರು ಸಹ ಹುಚ್ಚೆದ್ದು ಕುಣಿಯವಂತೆ ಮಾಡುತ್ತಾರೆ. ಚಪ್ಪಾಳೆಯ ಸದ್ದು ಮುಗಿಲು ಮುಟ್ಟುವುದು ಖಾತರಿ.
ಆದರೆ, ಈ ಯುವಕರಿಗೆ ನೃತ್ಯಾಭ್ಯಾಸ ಮಾಡಲು ಹಾಗೂ ಪ್ರದರ್ಶನಕ್ಕಾಗಿ ಬೇಕಾದ ಕೆಲವು ಸೌಲತ್ತು ಇಲ್ಲ ಎಂಬುದೇ ದೊಡ್ಡ ಕೊರತೆ.

ಅಂದ ಹಾಗೆ ಇಲ್ಲಿನ ಎಕ್ಸ್‌ಲೆಂಟ್ ಡ್ಯಾನ್ಸ್ ಅಕಾಡೆಮಿಯ ಸದಸ್ಯರೇ ಇಂತಹ ಪ್ರತಿಭೆಯ ಒರತೆ ಮತ್ತು ಪ್ರೋತ್ಸಾಹದ ಕೊರತೆ ಇರುವವರು.

ಮಹೇಶ ಕಂದಾರಿ, ಹರಿಪ್ರಸಾದ ಬಂಗಾರಿ, ವಿಠಲ ಹೊಳೆಪ್ಪನವರ, ರವಿಕುಮಾರ ಬಂಗಾರಿ, ಗವಿಸಿದ್ಧಪ್ಪ ಬಂಗಾರಿ, ನಾಗರಾಜ ಕಂದಾರಿ ಹಾಗೂ ಮಂಜುನಾಥ ಕಿಡದಾಳ ಈ ಗುಂಪಿನ ಸದಸ್ಯರು. ಎಲ್ಲರಿಗೂ ನೃತ್ಯತ ಎಂದರೆ ಪ್ರೀತಿ.

ಈ ನೃತ್ಯದಲ್ಲಿಯೇ ಏನಾದರೂ ಅದ್ಭುತ ಸಾಧನೆ ಮಾಡಬೇಕು ಹಂಬಲ. ಹೀಗಾಗಿಯೇ ತಮ್ಮ ಗುಂಪಿಗೆ `ಎಕ್ಸ್‌ಲೆಂಟ್ ಡ್ಯಾನ್ಸ್ ಅಕಾಡೆಮಿ~ ಎಂಬುದಾಗಿ ಕರೆದುಕೊಂಡಿದ್ದಾರೆ.

ಈ ಯುವಕರು ಸ್ಥಿತಿವಂತ ಮನೆಯಿಂದ ಬಂದವರಲ್ಲ. ಹೆಚ್ಚಿನ ಓದೂ ಇವರಿಗಿಲ್ಲ. ಒಬ್ಬರು ಇಲ್ಲಿನ ಜೆ.ಪಿ.ಮಾರ್ಕೆಟ್‌ನ ತರಕಾರಿ ಅಂಗಡಿಯಲ್ಲಿ ದುಡಿಯುತ್ತಿದ್ದರೆ, ಇಬ್ಬರು ಕಾರು ಚಾಲಕರು. ಮೊಬೈಲ್ ದುರಸ್ತಿ ಅಂಗಡಿಯಲ್ಲೊಬ್ಬರು ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬ ಯುವಕ ಕಲ್ಯಾಣಿ ಕಾರ್ಖಾನೆಯಲ್ಲಿ ಕೂಲಿ ಕೆಲಸದಲ್ಲಿದ್ದಾರೆ.

`ನಾವೆಲ್ಲ ಒಂದೇ ಓಣಿಯಲ್ಲಿ ಬೆಳೆದವರು. ಅಲ್ಲದೇ, ಎಲ್ಲರಿಗೂ ಡ್ಯಾನ್ಸ್ ಎಂದರೆ ಇಷ್ಟ. ಹೀಗಾಗಿ ಗುಂಪೊಂದನ್ನು ಕಟ್ಟಿಕೊಂಡು ಡ್ಯಾನ್ಸ್ ಪ್ರಾಕ್ಟೀಸ್ ಮಾಡ್ತೀವಿ~ ಎಂದು ಈ ತಂಡದ ಸದಸ್ಯ ಮಹೇಶ ಕಂದಾರಿ ಹೇಳುತ್ತಾರೆ.

`ಸದ್ಯ ಚಲನಚಿತ್ರ ಗೀತೆಗಳನ್ನು ಬಳಸಿ ಡ್ಯಾನ್ಸ್ ಮಾಡುತ್ತಿದ್ದೇವೆ. ಸೂಕ್ತ ಅವಕಾಶ ಸಿಕ್ಕರೆ ಭರತ ನಾಟ್ಯ ಸೇರಿದಂತೆ ಶಾಸ್ತ್ರೀಯವಾಗಿ ನೃತ್ಯ ಕಲಿಯುವ ಆಸಕ್ತಿಯೂ ಇದೆ~ ಎಂದು ಸ್ಪಷ್ಟಪಡಿಸುತ್ತಾರೆ. ಸದ್ಯ ಜೆ.ಪಿ.ಮಾರ್ಕೆಟ್‌ನಲ್ಲಿರುವ ಕಟ್ಟಡವೊಂದರಲ್ಲಿ ಪ್ರತಿ ದಿನ ಸಂಜೆ 6 ರಿಂದ 8 ಗಂಟೆ ವರೆಗೆ ನೃತ್ಯದ ತಾಲೀಮು ನಡೆಯುತ್ತದೆ. 20ಕ್ಕೂ ಹೆಚ್ಚು ಮಕ್ಕಳಿಗೂ ನೃತ್ಯ ಹೇಳಿ ಕೊಡುತ್ತಿದ್ದೇವೆ. ಅದೂ ಉಚಿತವಾಗಿ ಎಂದು ಹೇಳಲು ಮರೆಯಲಿಲ್ಲ.

ಆದರೆ, ನೃತ್ಯಾಭ್ಯಾಸ ಮಾಡಲು `ಸೌಂಡ್ ಸಿಸ್ಟಮ್~ ಇಲ್ಲ. ಮೊಬೈಲ್‌ಗೆ ಸ್ಪೀಕರ್‌ಗಳನ್ನು ಜೋಡಿಸುವ ಮೂಲಕ ಹಾಡಿಗೆ ಹೆಜ್ಜೆ ಹಾಕುತ್ತಾ ಅಭ್ಯಾಸ ಮಾಡುತ್ತಿದ್ದೇವೆ. ಅಲ್ಲದೇ, ನೃತ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಾಗ ವಸ್ತ್ರವಿನ್ಯಾಸದ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಸಾಕಷ್ಟು ಹಣ ಬೇಕು ಎಂದು ಕೈ ಚೆಲ್ಲುತ್ತಾರೆ.

ಗದಗ, ಗಂಗಾವತಿ, ಹೊಸಪೇಟೆ, ಹುಬ್ಬಳ್ಳಿ ನಗರಗಳಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಈ ಯುವಕರು ಪ್ರಥಮ ಸ್ಥಾನ ಗಳಿಸಿದ್ದಾರೆ.

 ಕಳೆದ ವರ್ಷ ನೀಡಿದ ನೃತ್ಯ ಪ್ರದರ್ಶನ ಮೆಚ್ಚಿಕೊಂಡು ಈ ವರ್ಷ ಸಹ ಕಾರ್ಯಕ್ರಮ ನೀಡಲು ಇಲ್ಲಿನ ಗಡಿಯಾರ ಕಂಬದ ದುರ್ಗಾದೇವಿ ಮಿತ್ರ ಮಂಡಳಿ ಈ ತಂಡಕ್ಕೆ ಆಹ್ವಾನ ನೀಡಿದೆ ಎಂದು ಈ ತಂಡದ ಹಿತೈಷಿ ಈಶಪ್ಪ ಹೊಸಮನಿ ಹೇಳುತ್ತಾರೆ.

ಈ ಯುವಕರಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ನಾಗರಾಜ ಸಂದಿಮನಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಯಾರಾದರೂ ಸಹಾಯ ಹಸ್ತ ಚಾಚಿ, ತಮ್ಮ ಕಲಾರಾಧನೆಗೆ ಉತ್ತೇಜನ ನೀಡುತ್ತಾರೆಯೇ ಎಂದು ಈ ಯುವಕರು ಎದುರು ನೋಡುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.