ADVERTISEMENT

ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2013, 10:14 IST
Last Updated 16 ಫೆಬ್ರುವರಿ 2013, 10:14 IST
ಯಲಬುರ್ಗಾ ತಾಲ್ಲೂಕು ದಮ್ಮೂರು ಗ್ರಾಮದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹದಲ್ಲಿ ನವದಂಪತಿಗಳು ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದರು
ಯಲಬುರ್ಗಾ ತಾಲ್ಲೂಕು ದಮ್ಮೂರು ಗ್ರಾಮದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹದಲ್ಲಿ ನವದಂಪತಿಗಳು ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದರು   

ಯಲಬುರ್ಗಾ:  ಒಬ್ಬರಿಗೊಬ್ಬರು ಸಮಾನ ಮನಸ್ಸಿನಿಂದ ಆದರ್ಶಮಯ ಜೀವನ ರೂಪಿಸಿಕೊಳ್ಳಲು ಸಂಕಲ್ಪತೊಟ್ಟು ಹೊಸಜೀವನಕ್ಕೆ ಪಾದಾರ್ಪಣೆ ಮಾಡಿದಾಗ ಮಾತ್ರ ಸಾವಿರಾರು ಸಂಖ್ಯೆಯ ಶುಭಹಾರೈಕೆಯೊಂದಿಗೆ ನಡೆಯುವ ಸಾಮೂಹಿಕ ವಿವಾಹಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದು ಕುದ್ರಿಮೋತಿ ಮೈಸೂರುಮಠದ ವಿಜಯಮಹಾಂತ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ದಮ್ಮೂರು ಗ್ರಾಮದಲ್ಲಿ ಶುಕ್ರವಾರ ನಡೆದ ಭೀಮಾಂಬಿಕಾದೇವಿ ಜಾತ್ರೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಹಾಗೂ ಪುರಾಣ ಮಹಾಮಂಗಲ ಸಮಾರಂಭದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಸಾಮೂಹಿಕ ವಿವಾಹವು ಒಂದು ಸಾಮಾಜಿಕ ಪರಂಪರೆ ಎಂಬಂತೆ ರೂಪುಗೊಳ್ಳುತ್ತಿದೆ, ಯಾವುದೋ ಒಂದು ಧಾರ್ಮಿಕ ಕಾರ್ಯದಲ್ಲಿ ವಿವಾಹ ಕಾರ್ಯ ಏರ್ಪಡಿಸುವುದು ಒಂದು ಸಂಪ್ರದಾಯವಾದಂತಿದೆ. ಇದೊಂದು ಆರೋಗ್ಯಪೂರ್ಣ ಬೆಳವಣಿಗೆ ಎಂದರು.

ನವಜೋಡಿಗಳಿಗೆ ಮಾಂಗಲ್ಯಗಳ ದೇಣಿಗೆ ನೀಡಿದ ಜೆಡಿಎಸ್ ಮುಖಂಡ ಪಂಪಾಪತಿ ಮಾತನಾಡಿ, ಮಾದರಿ ಬದುಕು ರೂಪಿಸಿಕೊಳ್ಳುವುದು ದಂಪತಿಗಳ ಕೈಯಲ್ಲಿದ್ದು, ಮಿತ ಸಂತಾನ ಸುಖ ಜೀವನಕ್ಕೆ ಸೋಪಾನವಾಗಿರದೇ ದೇಶದಹಿತಕ್ಕು ಕೂಡಾ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನವ ಜೋಡಿ ಈ ನಿಟ್ಟಿನಲ್ಲಿ ಚಿಂತಿಸಲು ಸಲಹೆ ನೀಡಿದರು.

ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ನವೀನ ಗುಳಗಣ್ಣವರ್ ಮಾತನಾಡಿ, ದುಂದು ವೆಚ್ಚಗಳಿಗೆ ಕಡಿವಾಣ ಹಾಕುತ್ತಿರುವ ಸಾಮೂಹಿಕ ವಿವಾಹಗಳಲ್ಲಿ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಂತರು ಕೂಡಾ ಪಾಲ್ಗೊಳ್ಳುತ್ತಿದ್ದಾರೆ. ಪ್ರತಿಯೊಂದು ಗ್ರಾಮದಲ್ಲಿ ನಡೆಯುವ ಇಂತಹ ಸಾಮಾಜಿಕ ಕಳಕಳಿಯು ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಸುಧಾರಣೆಗೂ ವ್ಯಕ್ತವಾಗುತ್ತಿದ್ದರೆ ಗ್ರಾಮಗಳು ನಿರೀಕ್ಷೆಗೂ ಮೀರಿ ಅಭಿವೃದ್ಧಿಗೊಳ್ಳುವುದರಲ್ಲಿ ಎರಡು ಮಾತಿಲ್ಲ ಎಂದರು.

ಸ್ಥಳೀಯ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಇಟಗಿಯ ಧರ್ಮರಮಠದ ಶೇಖರಪ್ಪಜ್ಜನವರು ಅಧ್ಯಕ್ಷತೆ ವಹಿಸಿದ್ದರು. ಭೀಮಾಂಬಿಕೆಮಠದ ಉಸ್ತುವಾರಿ ನಾಗಲಿಂಗಪ್ಪಜ್ಜ, ಕಾಂಗ್ರೆಸ್ ಮುಖಂಡ ವೀರನಗೌಡ ಬಳೂಟಗಿ, ಶಿವರಾಜ ಪೊಲೀಸ್‌ಪಾಟೀಲ, ಎಪಿಎಂಸಿ ದಾವಲಸಾಬ ಕುದರಿ, ಜಿಪಂ ಸದಸ್ಯ ರಾಮಣ್ಣ ಸಾಲಭಾವಿ, ಎಂ.ಎಫ್. ನಧಾಫ, ದೇವಪ್ಪ ಪೂಜಾರ ರಸೂಲಸಾಬ ಹಿರೇಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ವಿರೇಶಕುಮಾರ ಹಿರೇಮಠ, ದೇವಪ್ಪ ಹಾಲಕೇರಿ, ನೀಲಕಂಠಪ್ಪ ರೊಡ್ಡರ್ ಹಾಗೂ ಇತರರು ಪುರಾಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ರುಜ್ವಾನಲಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.