ADVERTISEMENT

ಸಿದ್ದರಾಮಯ್ಯ ಸೋತ ನೆಲದಲ್ಲಿ ಬದಲಾವಣೆ ಗಾಳಿ

ವಿಶೇಷ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 15:55 IST
Last Updated 10 ಮಾರ್ಚ್ 2014, 15:55 IST

ಕೊಪ್ಪಳ: ಈಗ ಮುಖ್ಯಮಂತ್ರಿ­ಯಾಗಿ­ರುವ ಸಿದ್ದರಾಮಯ್ಯ 23 ವರ್ಷಗಳ ಹಿಂದೆ ಜನತಾ ದಳದಿಂದ ಸ್ಪರ್ಧಿಸಿ ಸೋಲು ಕಂಡ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಇಂದು ಜೆಡಿಎಸ್‌ನ ಸ್ಥಿತಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನು­ವಂತಾಗಿದೆ.

ಕ್ಷೇತ್ರದ ಮತದಾರರು 1991ರ ದಿನ­ಗಳನ್ನು ಮತ್ತೆ ಮೆಲುಕು ಹಾಕಿಕೊಳ್ಳುತ್ತಿ­ದ್ದಾರೆ. ಅಂದು ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಬಸವರಾಜ ಪಾಟೀಲ ಅನ್ವರಿ ವಿರುದ್ಧ 11,197 ಮತಗಳ ಅಂತರದಲ್ಲಿ ಸೋತಿದ್ದರು.

ಆದರೆ, ಲೋಕಸಭಾ ಕ್ಷೇತ್ರದಲ್ಲಿ 10 ಬಾರಿ ಗೆಲುವು ಸಾಧಿಸಿ ಭದ್ರಕೋಟೆ ಸ್ಥಾಪಿಸಿದ್ದ ಕಾಂಗ್ರೆಸ್‌ಗೆ 2009ರ ಚುನಾ­ವಣೆ ಭಾರಿ ಪೆಟ್ಟು ನೀಡಿತ್ತು. ಅದುವರೆಗೆ ಗೆಲ್ಲಲು ಪರದಾಡುತ್ತಿದ್ದ ಬಿಜೆಪಿಗೆ ಮೊದಲ ಬಾರಿಗೆ ಲೋಕಸಭಾ ಸ್ಥಾನದ ಖಾತೆ ತೆರೆದ ಸಮಾಧಾನ ತಂದಿತ್ತು.

ನಾಲ್ಕು ಬಾರಿ ಕಾಂಗ್ರೆಸ್‌ ಸಂಸದ­ರಾಗಿದ್ದ ಎಚ್‌.ಜಿ.ರಾಮುಲು (1980, 84, 98, 99) ಅವರ ಹಿಡಿತಕ್ಕೊಳ­ಪಟ್ಟಿದ್ದ ಕೊಪ್ಪಳ– ರಾಯಚೂರು ಜಿಲ್ಲೆಯ ‘ಶ್ವೇತಭವನ’ದ (ಎಚ್‌.ಜಿ.­ರಾಮುಲು ನಿವಾಸಕ್ಕೆ ಕಾರ್ಯ­ಕರ್ತರು ಇಟ್ಟಿರುವ ಹೆಸರು)  ಅಡಿಪಾಯ 2004ರಿಂದ ಅಲುಗಾಡತೊಡಗಿತು.

ಎಚ್‌.ಜಿ.ರಾಮುಲು ಎಂಬ ಪ್ರಶ್ನಾತೀತ ನಾಯಕನಿಗೆ ಸವಾಲೆಂಬಂತೆ 2004ರಲ್ಲಿ ಅದೇ ಪಕ್ಷದಿಂದ ಹೊರ­ಹೊಮ್ಮಿದ ಕುರುಬ ಸಮಾಜದ ಕೆ.ವಿರೂಪಾಕ್ಷಪ್ಪ ಟಿಕೆಟ್‌ ಗಿಟ್ಟಿಸಿಕೊಂಡು ಗೆದ್ದರು. ಹಾಗೆ ಗೆದ್ದವರು ಇಂದು ಬಿಜೆಪಿ ತೆಕ್ಕೆ ಸೇರಿದ್ದಾರೆ. ರಾಮುಲು ಕುಟುಂಬ­ದಿಂದ ಮತ್ತೊಬ್ಬ ಪ್ರಭಾವಿ ನಾಯಕ ಮುಂದೆ ಬರಲಿಲ್ಲ. ರಾಮುಲು ಪುತ್ರ ಎಚ್‌.ಜಿ.ಚನ್ನಕೇಶವ ಕೂಡ ಬಿಜೆಪಿ ಸೇರಿದ್ದಾರೆ.


1957ರಿಂದ 2004ರವರೆಗೆ ಇಲ್ಲಿ ಕಾಂಗ್ರೆಸ್‌ 10 ಬಾರಿ ಇಲ್ಲಿ ಗೆದ್ದಿದೆ.  1952ರ ಮೊದಲ ಚುನಾವಣೆ­ಯಲ್ಲಿ ಶಿವಮೂರ್ತಿ ಸ್ವಾಮಿ ಅಳವಂಡಿ ಅವರು ಪಕ್ಷೇತರರಾಗಿ ಗೆದ್ದಿದ್ದರು. 1957ರಲ್ಲಿ ಸಂಗಣ್ಣ ಅಗಡಿ ಅವರು ಕಾಂಗ್ರೆಸ್‌ ಖಾತೆ ತೆರೆದರು.

1962ರಲ್ಲಿ ಶಿವಮೂರ್ತಿ ಸ್ವಾಮಿ ಅವರು ಲೋಕಸೇವಕ ಸಂಘದಿಂದ ಗೆದ್ದರು. 1971ರಲ್ಲಿ ಸಿದ್ರಾಮೇಶ್ವರ ಸ್ವಾಮಿ ಅವರು ಕಾಂಗ್ರೆಸ್ಸೇತರರಾಗಿ, 1989ರಲ್ಲಿ ಬಸವರಾಜ ಪಾಟೀಲ ಅನ್ವರಿ, 1996ರಲ್ಲಿ ಬಸವರಾಜ ರಾಯರಡ್ಡಿ ಅವರು ಜನತಾದಳದಿಂದ ಹಾಗೂ 2009ರಲ್ಲಿ ಶಿವರಾಮಗೌಡ ಬಿಜೆಪಿಯಿಂದ ಸಂಸದರಾಗಿದ್ದಾರೆ. ರಾಯರಡ್ಡಿ ಈಗ ಕಾಂಗ್ರೆಸ್ ಶಾಸಕ.

ಬದಲಾವಣೆಯ ಗಾಳಿ: ಬದಲಾವಣೆಗೆ ಕಾರಣಗಳು ಹಲವು. ಈ ಭಾಗದ ವಿಶೇಷ ಮೀಸಲಾತಿಗೆ ನಡೆದ ಹೋರಾಟಗಳಾಗಲಿ, ಪ್ರದೇಶವನ್ನು ನೀರಾವರಿಗೆ ಒಳಪಡಿಸುವುದು, ಮೂಲ­ಸೌಕರ್ಯ, ಶಿಕ್ಷಣ ಅಭಿವೃದ್ಧಿಪಡಿಸುವ ವಿಷಯವಾಗಲಿ, ಪಕ್ಷ ಬದಲಾಯಿಸುವ ಅಭ್ಯರ್ಥಿಗಳ ಸ್ವಭಾವ ಇವ್ಯಾವುದೂ ಕೂಡಾ ಮತದಾರರ ದೃಷ್ಟಿಯಲ್ಲಿ ನಿರ್ಣಾಯಕ ಅಂಶಗಳಲ್ಲ.

ಕ್ಷೇತ್ರಕ್ಕೆ ಹೊಸಬರ ಪ್ರವೇಶ­ವಾಯಿತು. ಪರ್ಯಾಯ ಅಭ್ಯರ್ಥಿ­ಗಳಿದ್ದಾರೆ ಎಂಬುದು ಮನವರಿಕೆ­ಯಾದಾಗ ಮತದಾರರು ಹೊಸಬರಿಗೆ ಮಣೆ ಹಾಕಿದರು. ಅದರ ಪರಿಣಾಮವೇ ಇಲ್ಲಿ ಬೇರೂರಿದ್ದ ಕಾಂಗ್ರೆಸ್‌ನೊಳಗೇ ಹೊಸ ನಾಯಕರು ಗೆದ್ದುಬಂದರು. ಬಿಜೆಪಿ­ಯತ್ತಲೂ ಜನ ಒಲವು ತೋರಿದರು.

ADVERTISEMENT

ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಕುರುಬ ಸಮಾಜ ಪ್ರಬಲ ಶಕ್ತಿಗಳು. ಆದರೂ ಕಾಂಗ್ರೆಸ್‌ನಿಂದ ಹಿಂದುಳಿದ ಸಮಾಜದ ಅಭ್ಯರ್ಥಿಗಳು ಗೆದ್ದ ಇತಿಹಾಸವಿದೆ. ಕೊಪ್ಪಳ ಜಿಲ್ಲಾ ಪಂಚಾಯಿತಿಯ 27 ಸದಸ್ಯರ ಪೈಕಿ 14 ಬಿಜೆಪಿ, 9 ಮಂದಿ ಕಾಂಗ್ರೆಸ್‌ ಸದಸ್ಯರು. ಇಲ್ಲಿ ಬಿಜೆಪಿಯ ಬೆಂಬಲ ಪಡೆದು ಕಾಂಗ್ರೆಸ್‌ ಅಧಿಕಾರದಲ್ಲಿದೆ.

*ಕೊಪ್ಪಳ ನಗರಸಭೆ ಕಾಂಗ್ರೆಸ್‌ ಹಾಗೂ ಗಂಗಾವತಿ ನಗರಸಭೆ ಜೆಡಿಎಸ್‌ ಹಿಡಿತದಲ್ಲಿದೆ. ಯಲಬುರ್ಗಾ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ.

*ಕೊಪ್ಪಳ, ಗಂಗಾವತಿ, ಸಿಂಧನೂರು, ಸಿರಗುಪ್ಪ ತಾ.ಪಂ.ನಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ.

*ಕುಷ್ಟಗಿ ತಾ.ಪಂ. ಬಿಜೆಪಿ ಹಿಡಿತದಲ್ಲಿದೆ. ಪುರಸಭೆಯಲ್ಲಿ ಬಿಜೆಪಿ ಬಹುಮತ ಇದ್ದರೂ ಎಸ್‌.ಟಿ. ಮಹಿಳೆ ಸ್ಥಾನ ಮೀಸಲಾತಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ.

*ಯಲಬುರ್ಗಾ ತಾಲ್ಲೂಕು ಪಂಚಾ­ಯಿತಿಯಲ್ಲಿ ಬಿಜೆಪಿ–ಕಾಂಗ್ರೆಸ್‌ ಸಮಾನ ಸಂಖ್ಯೆಯ ಸದಸ್ಯರಿದ್ದಾರೆ. ಮೀಸಲಾತಿ ಎಸ್‌ಸಿ ಮಹಿಳೆಗೆ ಬಂದ ಕಾರಣ ಬಿಜೆಪಿ ಸದಸ್ಯೆ ಅಧ್ಯಕ್ಷ­ರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.