ADVERTISEMENT

ಸೆಕೆಂಡ್ಸ್ ಔಷಧಿ ಮಾರಾಟ: ಆತಂಕ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 5:45 IST
Last Updated 5 ಆಗಸ್ಟ್ 2013, 5:45 IST

ಗಜೇಂದ್ರಗಡ: ನಗರದಲ್ಲಿ ಸೆಕೆಂಡ್ಸ್ ಔಷಧಿಗಳ ಮಾರಾಟದ ಜಾಲವೊಂದು ಸೃಷ್ಟಿಯಾಗಿದೆ ಎಂಬ ಸುದ್ದಿ ಹಬ್ಬಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಇಲ್ಲಿನ ನೇಕಾರ ಕಾಲೊನಿಯ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಸೆಕೆಂಡ್ಸ್ ಔಷಧಿಗಳನ್ನು ವಶಪಡಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಪಿಎಸ್‌ಐ ವೀರಾ ರೆಡ್ಡಿ ಮತ್ತು ಅವರ ಸಿಬ್ಬಂದಿ ನಗರದ ನೇಕಾರ ಕಾಲೊನಿಯ ಗುರು ದಾನಿ ಎಂಬುವರ ಮನೆಯ ಮೇಲೆ ದಾಳಿ ನಡೆಸಿ ಹದಿಮೂರಕ್ಕೂ ಅಧಿಕ ಸೆಕೆಂಡ್ಸ್ ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ.

ಏನಿದು ಸೆಕೆಂಡ್ಸ್: ವಿಶ್ವ ಆರೋಗ್ಯ ಸಂಸ್ಥೆಯು ಕೆಲ ಕಂಪೆನಿಗಳಿಗೆ ಜೀವ ರಕ್ಷಕ ಔಷಧಿಗಳನ್ನು ತಯಾರಿಸಲು ಪರವಾನಿಗೆ ನೀಡಿರುತ್ತದೆ. ಇವು ವಿಶ್ವ ಸಂಸ್ಥೆಯ ಮಾರ್ಗದರ್ಶಿ ಸೂತ್ರಕ್ಕೆ ಅನುಸಾರವಾಗಿ ಔಷಧಿಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ. ಹೀಗಾಗಿ ಇವುಗಳಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿ ಇರುವುದಿಲ್ಲ. ಆದರೆ ಕೆಲ ಕಂಪೆನಿಗಳು ಈ ಔಷಧಿಗಳ ಮಾದರಿಯಲ್ಲೇ ಔಷಧಿ ತಯಾರಿಸಿ ಬಡವರು ಮತ್ತು ಅನಕ್ಷರಸ್ಥರಿಗೆ ಮಾರಾಟ ಮಾಡುತ್ತವೆ. ಉತ್ತರಪ್ರದೇಶ, ದೆಹಲಿ ರಾಜ್ಯಗಳಲ್ಲಿ ಹೆಚ್ಚಾಗಿರುವ ಈ ಸೆಕೆಂಡ್ಸ್ ಜಾಲ ರಾಜ್ಯಕ್ಕೂ ಕಾಲಿಟ್ಟಿದೆ ಎಂಬ ವದಂತಿ ಇತ್ತು.

ಗುಣಮಟ್ಟದ ಔಷಧಿಗೆ ಬದಲಾಗಿ ಇಂಥ ಸೆಕೆಂಡ್ಸ್ ಔಷಧಿ ಸೇವಿಸುವುದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಸೆಕೆಂಡ್ಸ್ ಎನ್ನಲಾಗುತ್ತದೆ. ಸೆಕೆಂಡ್ಸ್ ಔಷಧಿಯನ್ನು ಹೊಂದಿದ್ದ ಗುರು ದಾನಿ ಹಾಗೂ ಅವರ ಬಳಿ ಇದ್ದ ಔಷಧಿಗಳನ್ನು ಸಹಾಯಕ ಔಷಧಿ ನಿಯಂತ್ರಣಾಧಿಕಾರಿ ಸಂಗಣ್ಣ ಶೀಳ್ಳಿ ಅವರ ವಶಕ್ಕೆ ಒಪ್ಪಿಸಲಾಗಿದೆ ಎಂದು  ಪಿಎಸ್‌ಐ ವೀರಾರೆಡ್ಡಿ ತಿಳಿಸಿದರು.

ಆದರೆ ಸಂಗಳ್ಳ ಶೀಳ್ಳಿ ಅವರು ಮಾತನಾಡಿ, ಸೆಕೆಂಡ್ಸ್ ಔಷಧಿ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಔಷಧಿ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದ್ದರೆ ಮಾತ್ರ ತಾವು ಕ್ರಮ ತೆಗೆದುಕೊಳ್ಳಬಹುದಾಗಿದೆ. ಈ ಪ್ರಕರಣ ಗಜೇಂದ್ರಗಡ ಪಿಎಸ್‌ಐ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ವ್ಯಾಪ್ತಿಗೆ ಬರುತ್ತದೆ. ಅವರೇ ಕ್ರಮ ಕೈಗೊಳ್ಳಬೇಕು ಎಂದರು.

ಈ ಮಧ್ಯೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಡಿ.ಬಿ. ಚನ್ನಶೆಟ್ಟಿ ಅವರು ಮಾತನಾಡಿ ಗಜೇಂದ್ರಗಡ ನಗರದಲ್ಲಿ ಸೆಕೆಂಡ್ಸ್ ಜಾಲವೊಂದು ಪತ್ತೆಯಾಗಿದೆ ಎಂಬ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಪೊಲೀಸರು ಹಾಗೂ ಔಷಧಿ ನಿಯಂತ್ರಣಾಧಿಕಾರಿ   ತಮ್ಮನ್ನು ಸಂಪರ್ಕಿಸಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.